* ‘ಸತ್ಯಮೇವ ಜಯತೇ’ ಎಂದು ಟ್ವೀಟ್‌ ಮಾಡಿದ ಕಾಂಗ್ರೆಸ್‌* ರಾಹುಲ್‌, ಕಾಂಗ್ರೆಸ್‌, ಕಾಂಗ್ರೆಸ್ಸಿಗರ ಟ್ವೀಟರ್‌ ಖಾತೆ ‘ಅನ್‌ಲಾಕ್‌’* ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಖಾತೆ ಲಾಕ್‌ ಮಾಡಿದ್ದ ಟ್ವೀಟರ್‌

ನವದೆಹಲಿ(ಆ.15): ಅತ್ಯಾಚಾರ ಸಂತ್ರಸ್ಥೆಯ ಪೋಷಕರ ಫೋಟೋ ಬಹಿರಂಗಪಡಿಸಿದ ಕಾರಣಕ್ಕೆ ಲಾಕ್‌ ಮಾಡಲಾಗಿದ್ದ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪಕ್ಷ ಮತ್ತು ಹಲವು ಕಾಂಗ್ರೆಸ್‌ ನಾಯಕರ ಟ್ವೀಟರ್‌ ಖಾತೆಗಳನ್ನು ಶನಿವಾರ ಮರುಸ್ಥಾಪನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷ ‘ಸತ್ಯಮೇವ ಜಯತೇ’ ಎಂದು ಟ್ವೀಟ್‌ ಮಾಡಿದೆ.

ಕೆಲ ದಿನಗಳ ಹಿಂದೆ ದೆಹಲಿಯ ಅತ್ಯಾಚಾರ ಸಂತ್ರಸ್ಥೆಯ ಪೋಷಕರ ಭೇಟಿ ಮಾಡಿದ್ದ ರಾಹುಲ್‌, ಈ ಫೋಟೋಗಳನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು. ಅದನ್ನು ಕಾಂಗ್ರೆಸ್‌ ಮತ್ತು ಹಲವು ಕಾಂಗ್ರೆಸ್‌ ನಾಯಕರು ರೀಟ್ವೀಟ್‌ ಮಾಡಿದ್ದರು. ಆದರೆ ಇದು ಸಂಸ್ಥೆಯ ನಿಯಮ ಎನ್ನುವ ಕಾರಣ ಈ ಎಲ್ಲಾ ಖಾತೆಗಳನ್ನು ಟ್ವೀಟರ್‌ ಸಂಸ್ಥೆ ಕಳೆದ ವಾರದಿಂದ ತಡೆಹಿಡಿದಿತ್ತು.

Scroll to load tweet…

ಶನಿವಾರ ಖಾತೆ ಮರುಸ್ಥಾಪನೆಗೊಂಡ ಬೆನ್ನಲ್ಲೇ, ಸತ್ಯಮೇಯ ಜಯತೇ ಎಂದು ಕಾಂಗ್ರೆಸ್‌ ಪಕ್ಷದ ಅಧಿಕೃತ ಟ್ವೀಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ. ಜೊತೆಗೆ ಪಕ್ಷ ಮತ್ತು ಹಲವು ಕಾಂಗ್ರೆಸ್ಸಿಗರು ‘ಟ್ವೀಟರ್‌ನ ಬೂಟಾಟಿಕೆ ವಿರುದ್ಧ ಧ್ವನಿ ಎತ್ತಿ’ ಎಂದು ಹ್ಯಾಷ್‌ಟ್ಯಾಗ್‌ ಮಾಡಿ ಅಭಿಯಾನ ಆರಂಭಿಸಿದ್ದಾರೆ.

‘ಅತ್ಯಾಚಾರ ಸಂತ್ರಸ್ತೆಯ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮ ಖಾತೆ ತಡೆಹಿಡಿದು ಹಾಗೂ ಮರುಸ್ಥಾಪಿಸಿದ ಬಗ್ಗೆ ಮತ್ತು ಮೋದಿ ಸರ್ಕಾರಕ್ಕೆ ಹೆದರಿಕೊಂಡು ನಮ್ಮ ರಾಜಕೀಯದಲ್ಲಿ ಪ್ರವೇಶ ನಿಲ್ಲಿಸಿ ಎಂದಿದ್ದಕ್ಕೆ’ ಟ್ವೀಟರ್‌ನಿಂದ ಭಾರತೀಯರು ಹೊಣೆಗಾರಿಕೆ ಬಯಸುತ್ತಿದ್ದಾರೆ. ಮೋದಿ ಸರ್ಕಾರಕ್ಕೆ ಹೆದರಿಕೊಂಡು ಭಾರತೀಯರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಟ್ವೀಟರ್‌ ಬಿಡಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಟ್ವೀಟ್‌ ಮಾಡಿದ್ದಾರೆ.