ನವದೆಹಲಿ(ಅ.19): ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂ ಟ್ವಿಟರ್‌ನಲ್ಲಿ ಲೈವ್ ಬ್ರಾಡ್‌ಕಾಸ್ಟ್‌ ವೇಳೆ ಸಂಭವಿಸಿದ ಎಡವಟ್ಟೊಂದು ಸದ್ಯ ಭಾರೀ ವಿವಾದ ಸೃಷ್ಟಿಸಿದೆ. ಹೌದು ಲೈವ್‌ ವೇಳೆ ಜಮ್ಮು ಕಾಶ್ಮೀರ ಚೀನಾಗೆ ಸೇರಿದ ಪ್ರದೇಶವೆಂದು ತೋರಿಸುತ್ತಿದೆ. ಪತ್ರಕರ್ತ ನಿತಿನ್ ಗೋಖಲೆ ಈ ಸಂಬಂಧ ಟ್ವೀಟ್ ಮಾಡಿದ್ದು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ಗೆ ದೂರು ನೀಡಿದ್ದಾರೆ.

ಟ್ವಿಟರ್‌ನ ಲೈವ್‌ ಬ್ರಾಡ್‌ಕಾಸ್ಟಿಂಗ್ ಫೀಚರ್ ಹಾಲ್‌ ಆಫ್ ಫೇಮ್‌ನಲ್ಲಿ ಲೇಹ್‌ ಆಯ್ಕೆ ಮಾಡಿಕೊಂಡಾಗ, ಲೊಕೇಶನ್‌ನಲ್ಲಿ 'ಜಮ್ಮು-ಕಾಶ್ಮೀರ, ಪೀಪಲ್ಸ್‌ ರಿಪಬ್ಲಿಕ್ ಆಫ್ ಚೈನಾ' ಎಂದು ತೋರಿಸುತ್ತದೆ. ಈ ಸಂಬಂಧ ಅನೇಕ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ತಾನು ಮತ್ತೊಂದು ಬಾರಿ ಟ್ವಿಟರ್‌ನ ಈ ಫಚರ್ ಟೆಸ್ಟ್ ಮಾಡಿದಾಗಲೂ ಯಾವುದೇ ಬದಲಾವಣೆಯಾಗಿಲ್ಲ, ಮತ್ತೆ  'ಜಮ್ಮು-ಕಾಶ್ಮೀರ, ಪೀಪಲ್ಸ್‌ ರಿಪಬ್ಲಿಕ್ ಆಫ್ ಚೈನಾ' ಎಂದೇ ತೋರಿಸಿತು ಎಂದೂ ಪತ್ರಕರ್ತ ಗೋಖಲೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಗೋಖಲೆಯವರ ಈ ಟ್ವೀಟ್‌ಗೆ ಮತ್ತೊಬ್ಬ ಟ್ವಿಟರ್ ಬಳಕೆದಾರನೂ ಉತ್ತರಿಸಿದ್ದು, ತಮಗೂ ಆ ಲೊಕೇಶನ್ ಚೀನಾ ಪ್ರದೇಶವೆಂದೇ ತೋರಸುತ್ತದೆ ಎಂದಿದ್ದಾರೆ. ಟ್ವಿಟರ್‌ನಲ್ಲಿ ಈ ಹಿಂದೆಯೂ ಇಂತಹ ತಪ್ಪುಗಳಾಗಿವೆ. 2012ರಲ್ಲೂ ಟ್ವಿಟರ್‌ ಜಮ್ಮು ಕಾಶ್ಮೀರವನ್ನು ಚೀನಾ ಭೂಭಾಗವೆಂದು ತೋರಿಸುತ್ತದೆ ಎಂಬ ದೂರು ಕೇಳಿ ಬಂದಿತ್ತು. ಟ್ವಿಟರ್ ಸಿಬ್ಬಂದಿ ಇದು ತಾಂತ್ರಿಕ ದೋಷ ಎಂಬ ಕಾರಣ ನೀಡಿದ್ದು, ಶೀಘ್ರದಲ್ಲೇ ಸರಿಪಡಿಸುವುದಾಗಿ ತಿಳಿಸಿದೆ.