Asianet Suvarna News Asianet Suvarna News

ಕೇಂದ್ರದ ಆಕ್ರೋಶಕ್ಕೆ ಟ್ವೀಟರ್‌ ಥಂಡಾ: ಶೇ.97ರಷ್ಟು ಖಾತೆ ಬ್ಲಾಕ್!

ಕೇಂದ್ರದ ಆಕ್ರೋಶಕ್ಕೆ ಟ್ವೀಟರ್‌ ಥಂಡಾ| ಸರ್ಕಾರ ಸೂಚಿಸಿದ್ದ ಶೇ.97ರಷ್ಟುಖಾತೆಗಳನ್ನು ಬ್ಲಾಕ್‌ ಮಾಡಿದ ಜಾಲತಾಣ| ರೈತ ಹೋರಾಟ ಕುರಿತು ಪ್ರಚೋದನಕಾರಿ ಮಾಹಿತಿ ಬಿತ್ತರಿಸುತ್ತಿದ್ದ ಖಾತೆಗಳು| ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ಟ್ವೀಟರ್‌ ಸಂಸ್ಥೆಯಿಂದ ದಿಢೀರ್‌ ನಿರ್ಧಾರ

Twitter complies with govt request blocks 97pc handles pod
Author
Bangalore, First Published Feb 13, 2021, 8:32 AM IST

ನವದೆಹಲಿ(ಫೆ.13): ಕೇಂದ್ರ ಸರ್ಕಾರದ ತೀಕ್ಷ$್ಣ ಎಚ್ಚರಿಕೆಯಿಂದ ಥಂಡಾ ಹೊಡೆದಿರುವ ವಿಶ್ವಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್‌, ದೆಹಲಿ ರೈತ ಹೋರಾಟ ಕುರಿತಂತೆ ಪ್ರಚೋದನಕಾರಿ ಹಾಗೂ ತಪ್ಪು ಮಾಹಿತಿ ಬಿತ್ತರಿಸುತ್ತಿದ್ದ ಆರೋಪದ ಮೇಲೆ ಬ್ಲಾಕ್‌ ಮಾಡಲು ಕೇಂದ್ರ ಸರ್ಕಾರ ನೀಡಿದ್ದ ಪಟ್ಟಿಯಲ್ಲಿದ್ದ ಖಾತೆಗಳ ಪೈಕಿ ಶೇ.97ರಷ್ಟನ್ನು ನಿಷ್ಕಿ್ರಯಗೊಳಿಸಿದೆ. ಉಳಿಕೆ ಖಾತೆಗಳಿಗೆ ಸಂಬಂಧಿಸಿದಂತೆ ಬಳಕೆದಾರರಿಗೆ ನೋಟಿಸ್‌ ನೀಡುವಂತಹ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಕಾನೂನುಗಳನ್ನು ಪಾಲನೆ ಮಾಡಿ. ಇಲ್ಲವಾದರೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ ಎಂದು ಬುಧವಾರ ಸಂಜೆ ನಡೆದ ಸಭೆಯ ಸಂದರ್ಭದಲ್ಲಿ ಟ್ವೀಟರ್‌ ಪ್ರತಿನಿಧಿಗಳಿಗೆ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ತಾಕೀತು ಮಾಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ನೀಡಿದ್ದ ಖಾತೆಗಳ ಪೈಕಿ ಶೇ.97ರಷ್ಟುಖಾತೆಗಳನ್ನು ಟ್ವೀಟರ್‌ ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಟ್ವೀಟರ್‌ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ದೆಹಲಿಯಲ್ಲಿ ರೈತರು ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಹೋರಾಟ ಕುರಿತಂತೆ ತಪ್ಪು ಮಾಹಿತಿ ಬಿತ್ತರಿಸುತ್ತಿರುವ 257 ಖಾತೆಗಳನ್ನು ಬ್ಲಾಕ್‌ ಮಾಡುವಂತೆ ಸರ್ಕಾರ ಟ್ವೀಟರ್‌ ಸಂಸ್ಥೆಗೆ ಜ.31ರಂದು ಸೂಚನೆ ನೀಡಿತ್ತು. ಆರಂಭದಲ್ಲಿ ಕೆಲ ಖಾತೆಗಳನ್ನು ನಿಷ್ಕಿ್ರಯಗೊಳಿಸಿದ್ದ ಟ್ವೀಟರ್‌, ಕೆಲ ತಾಸಿನಲ್ಲೇ ಆ ಖಾತೆಗಳನ್ನು ಸಕ್ರಿಯಗೊಳಿಸಿತ್ತು. ಇದಾದ ತರುವಾಯ, ಪಾಕಿಸ್ತಾನ ಹಾಗೂ ಖಲಿಸ್ತಾನಿ ಬೆಂಬಲಿಗರ ಜತೆ ನಂಟು ಹೊಂದಿದ್ದ, ದೆಹಲಿ ರೈತ ಹೋರಾಟ ಕುರಿತು ಪ್ರಚೋದನಕಾರಿ ಹಾಗೂ ತಪ್ಪು ಮಾಹಿತಿ ಬಿತ್ತರಿಸುತ್ತಿದ್ದ 1178 ಖಾತೆಗಳ ಪಟ್ಟಿಯನ್ನು ಟ್ವೀಟರ್‌ಗೆ ನೀಡಿ ಬ್ಲಾಕ್‌ ಮಾಡಲು ಸೂಚನೆ ನೀಡಿತ್ತು. ಅದೂ ಅಲ್ಲದೆ ರೈತ ಹೋರಾಟ ಬೆಂಬಲಿಸಿ ವಿಶ್ವದ ಗಣ್ಯರು ಮಾಡಿದ್ದ ಟ್ವೀಟ್‌ಗಳಿಗೆ ಟ್ವೀಟರ್‌ ಸಿಇಒ ಜಾಕ್‌ ಡೋರ್ಸಿ ಅವರು ಲೈಕ್‌ ಒತ್ತಿದ್ದು ಕೇಂದ್ರ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಬುಧವಾರ ಬೆಳಗ್ಗೆ 500 ಖಾತೆಗಳನ್ನು ಅಮಾನತಿನಲ್ಲಿಡುವ ಮೂಲಕ ಸರ್ಕಾರದ ಕಣ್ಣೊರೆಸುವ ತಂತ್ರವನ್ನು ಟ್ವೀಟರ್‌ ಮಾಡಿತ್ತು. ಆದರೆ ಇದಕ್ಕೆ ಮಣಿಯದ ಸರ್ಕಾರ, ಒಂದು ವೇಳೆ ತನ್ನ ಆದೇಶ ಪಾಲಿಸದೇ ಹೋದಲ್ಲಿ ಟ್ವೀಟರ್‌ ಅಧಿಕಾರಿಗಳನ್ನು ಬಂಧಿಸಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿತ್ತು. ಇದರ ಬೆನ್ನಲ್ಲೇ ಟ್ವೀಟರ್‌ ಮೆತ್ತಗಾಗಿದೆ.

ಬೋಗಸ್‌ ಖಾತೆ ನಿಯಂತ್ರಣ: ಕೇಂದ್ರ, ಟ್ವೀಟರ್‌ಗೆ ನೋಟಿಸ್‌

ಬೋಗಸ್‌ ಖಾತೆಗಳ ಮೂಲಕ ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಬಿತ್ತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಮಾಹಿತಿ ಹಾಗೂ ಜಾಹೀರಾತು ನಿಯಂತ್ರಣಕ್ಕೆ ವ್ಯವಸ್ಥೆಯೊಂದನ್ನು ಸ್ಥಾಪಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಟ್ವೀಟರ್‌ ಸಂಸ್ಥೆಗೆ ಸುಪ್ರೀಂಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯೆ ನೀಡಲು ಸೂಚಿಸಿದೆ.

Follow Us:
Download App:
  • android
  • ios