ಗುರುಂಗಾವ್(ಏ.19):  ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದೇ ತುತ್ತು ಅನ್ನಕ್ಕಾಗಿ ಕಾರ್ಮಿಕನೊಬ್ಬ ಮೊಬೈಲ್‌ ಮಾರಿದ ಘಟನೆ ಇಲ್ಲಿ ನಡೆದಿದೆ. ಮೊಬೈಲ್‌ ಮಾರಿ ಬಂದ 2500 ರು. ನಿಂದ ಒಂದು ಫ್ಯಾನ್‌ ಹಾಗೂ ಉಳಿದ ಹಣದಿಂದ ದಿನಸಿ ಖರೀದಿಸಿದ್ದಾನೆ. ಬಳಿಕ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಾಬು ಮಂಡಲ್‌ (35) ಎಂಬಾತನೇ ಈ ನತದೃಷ್ಟ.

ಪತ್ನಿ, ತಂದೆ-ತಾಯಿ ಹಾಗೂ ಐದು ತಿಂಗಳ ಮಗು ಸೇರಿ ನಾಲ್ಕು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸವಿದ್ದ ಚಾಬು ಕುಟುಂಬ ಕೂಲಿ ಇಲ್ಲದೇ ಹಲವು ದಿನಗಳಿಂದ ಹಸಿವೆಯಿಂದಿತ್ತು. ಹಾಗಾಗಿ ಮೊಬೈಲ್‌ ಮಾರಿ ಬಂದ ಹಣದಿಂದ ಒಂದು ಫ್ಯಾನ್‌ ಹಾಗೂ ಉಳಿದ ಹಣದಿಂದ ದಿನಸಿ ಖರೀದಿ ಮಾಡಿದ್ದಾನೆ.

ಲಾಕ್‌ಡೌನ್‌ ನಡುವೆಯೂ ಕಾವೇರಿ ನದಿ ಸ್ವಚ್ಛತೆ

ಪತಿಯ ಕೈನಿಂದ ದಿನಸಿ ವಸ್ತುಗಳನ್ನು ಪಡೆದುಕೊಂಡ ಪತ್ನಿ, ಅಡಿಗೆಗೂ ಮುನ್ನ ಶೌಚಕ್ಕೆ ತೆರಳಿದ್ದಾಳೆ. ತಾಯಿ ಜೋಪಡಿ ಪಕ್ಕದಲ್ಲಿರುವ ಮರದ ಕೆಳಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಚಾಬೂ ಕೋಣೆಯೊಂದರಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ. ಆತ ಮಾನಸಿಕವಾಗಿ ಖಿನ್ನನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.