ಚೀನಾ ಗಡಿ ತಂಟೆಗೆ ಭಾರತ ಸಡ್ಡು: ತತ್ತರಿಸಿದ ಡ್ರ್ಯಾಗನ್!
ಚೀನಾ ಗಡಿ ತಂಟೆಗೆ ಭಾರತ ಸಡ್ಡು| ಸೇನಾ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯಲ್ಲಿ ನಿರ್ಧಾರ| ಲಡಾಖ್‌ಗೆ ಮತ್ತಷ್ಟುಸೈನಿಕರು, ಡ್ರೋನ್| ಚೀನಾ ಆಕ್ಷೇಪಿಸಿದ್ದ ರಸ್ತೆ ಕೆಲಸ ಮುಂದುವರಿಕೆ
ನವದೆಹಲಿ(ಮೇ.27): ಭಾರತ ತನ್ನ ಭೂಭಾಗದೊಳಗೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನೇ ನೆಪವಾಗಿಟ್ಟುಕೊಂಡು ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಬೆದರಿಕೆಯೊಡ್ಡುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಗಡಿಯುದ್ದಕ್ಕೂ ಚೀನಾ ಎಲ್ಲೆಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಜಮಾವಣೆ ಮಾಡಿದೆಯೋ ಅಲ್ಲೆಲ್ಲಾ ಸಮಬಲ ರೀತಿಯಲ್ಲಿ ಸೈನಿಕರ ನಿಯೋಜನೆ ಮಾಡಲು ಹಾಗೂ ಚೀನಾ ಆಕ್ಷೇಪಿಸುತ್ತಿರುವ ರಸ್ತೆ ಕಾಮಗಾರಿ ಮುಂದುವರಿಸಲು ನಿರ್ಧರಿಸಿದೆ.
ಚೀನಾ ಕ್ಯಾತೆ: ಮೋದಿ ಉನ್ನತ ಮಟ್ಟದ ತುರ್ತು ಸಭೆ!
ಇದರ ಬೆನ್ನಲ್ಲೇ ಗಡಿಯಲ್ಲಿನ ಹಲವು ಭಾಗಗಳಿಗೆ ಭಾರಿ ಸಂಖ್ಯೆಯಲ್ಲಿ ಯೋಧರನ್ನು ರವಾನಿಸಲಾಗಿದೆ. ಗಡಿಯಲ್ಲಿ ಚೀನಿ ಪಡೆಗಳ ಚಲನವಲನದ ಮೇಲೆ ಮೇಲೆ ಕಣ್ಣಿಡಲು ಡ್ರೋನ್ ಪಹರೆ ಕೂಡ ಆರಂಭಿಸಲಾಗಿದೆ. ಚೀನಾ ಅತಿ ಎತ್ತರದಿಂದ ನಿಗಾ ಇಡುವ, ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಡ್ರೋನ್ ಅನ್ನು ನಿಯೋಜನೆ ಮಾಡಿತ್ತು. ಅದರ ಬೆನ್ನಲ್ಲೇ ಭಾರತ ಕೂಡ ಡ್ರೋನ್ ಬಳಕೆ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಗಡಿಯಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೇನೆಯ ಮೂರೂ ಮುಖ್ಯಸ್ಥರು ಹಾಗೂ ಮೂರೂ ಸೇನೆಗಳಿಗೆ ಮುಖ್ಯಸ್ಥರಾಗಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಅವರ ಜತೆ ಮಂಗಳವಾರ ಮಹತ್ವದ ಸಭೆ ನಡೆಸಿದರು. ಈ ಮಾತುಕತೆ ವೇಳೆ ಗಡಿಯಲ್ಲಿ ಚೀನಾದಿಂದ ಯೋಧರ ಜಮಾವಣೆ, ಅದಕ್ಕೆ ಪ್ರತಿಯಾಗಿ ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಸೇನಾ ಮುಖ್ಯಸ್ಥರು ರಕ್ಷಣಾ ಸಚಿವರಿಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.
ಚೀನಾ ವಾಯುನೆಲೆ ವಿಸ್ತರಣೆ, ಯುದ್ಧ ವಿಮಾನ ನಿಯೋಜನೆ!
ಮಾತುಕತೆ ಹಾಗೂ ರಾಜತಾಂತ್ರಿಕ ಮಧ್ಯಪ್ರವೇಶದ ಮೂಲಕ ಸದ್ಯದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಒಂದು ನಿರ್ಣಯಕ್ಕೆ ಬರುವವರೆಗೂ ಭಾರತ ಗಡಿಯಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಬೇಕು. ಹೀಗಾಗಿ ಚೀನಾಕ್ಕೆ ಸರಿಸಮನಾಗಿ ಯೋಧರನ್ನು ಜಮಾವಣೆ ಮಾಡಬೇಕು. ಲಡಾಖ್ ಒಂದೇ ಅಲ್ಲ, ಎಲ್ಲೆಲ್ಲಿ ವಿವಾದವಿದೆಯೋ ಅಲ್ಲೆಲ್ಲಾ ಯೋಧರ ಜಮಾವಣೆಯಾಗಬೇಕು ಎಂಬ ನಿರ್ಧಾರಕ್ಕೆ ಸಭೆ ಬಂದಿತು ಎಂದು ಹೇಳಲಾಗಿದೆ.