Asianet Suvarna News Asianet Suvarna News

ಅಟಲ್‌ ಜಿ 2 ನೇ ಪುಣ್ಯತಿಥಿ; ಅವರ ಬದುಕಿನ ಸ್ವಾರಸ್ಯಕರ ಸನ್ನಿವೇಶಗಳು

ಒಂದು ಕ್ಷಣ ಜನ ಸಮೂಹದ ಮುಂದೆ ನಿಂತರೆ ತನ್ನ ಮಾತಿನಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅಟಲ… ಜಿ, ಸಣ್ಣ ಗುಂಪಿನೊಂದಿಗೆ ಇದ್ದಾಗ, ಪ್ರವಾಸದಲ್ಲಿ ಇದ್ದಾಗ ಮೌನವನ್ನು ಇಷ್ಟಪಡುತ್ತಿದ್ದರು. ಅವರ ಅನೇಕ ಆಪ್ತರು ಹೇಳಿಕೊಂಡಿರುವ ಪ್ರಕಾರ, ಜನರು ಮತ್ತು ಮೈಕ್‌ ಸಿಕ್ಕರೆ ಸಾಕು ಅಟಲ್‌ರ ಮಾತುಗಳು ಒತಪ್ರೋತವಾಗಿ ಹರಿಯುತ್ತಿದ್ದವು ಅಂತೆ.

Tribute to Former PM Atal Bihari Vajpayee on 2 nd death Anniversary
Author
Bengaluru, First Published Aug 16, 2020, 11:16 AM IST

1. ಅಟಲ್‌ ಜಿ ತುಂಬಾ ಹಿಂದೆ ಇಂದಿರಾ ಪ್ರಧಾನಿ ಆಗಿದ್ದಾಗ ರಷ್ಯಾಕ್ಕೆ ಹೋಗಿದ್ದರಂತೆ. ಜೊತೆಗೆ ಕಮ್ಯುನಿಸ್ಟ್‌ ಸಂಸದರು ಇದ್ದರು. ಬೆಳಿಗ್ಗೆ ಹೋಟೆಲ್ ನಲ್ಲಿ ಜೊತೆಗೆ ಉಪಹಾರ ಸ್ವೀಕರಿಸುವುದು ವಾಡಿಕೆ. ಒಂದು ದಿನ ಬೆಳಿಗ್ಗೆ ಎಷ್ಟುಹೊತ್ತು ಕರೆದರೂ ಕಮ್ಯುನಿಸ್ಟ್‌ ಸಂಸದ ಉಪಹಾರಕ್ಕೆ ಬರದೇ ಇದ್ದಾಗ ಸ್ವತಃ ಅಟಲ್ ಜಿ ಸಂಸದರನ್ನು ಕರೆದುಕೊಂಡು ಬರಲು ಕೋಣೆಗೆ ಹೋದರಂತೆ. ಅಲ್ಲಿ ಕಮ್ಯುನಿಸ್ಟ್‌ ಸಂಸದರು ಚಂಡಿ ಪಾರಾಯಣ ಮಾಡುತ್ತಿದ್ದರು. ಆಗ ಅಟಲ… ಜಿ ಹೇಳಿದರಂತೆ, ‘ರಹಸ್ಯ ಪಕಡಾ ಗಯಾ.. ನೀವು ಕಮ್ಯುನಿಸ್ಟರು ಬಂಗಾಳದಲ್ಲಿ ಗಟ್ಟಿಯಾಗಿ ಬೇರೂರುವುದಕ್ಕೆ ಹೊರಗೆ ನಾಸ್ತಿಕತೆ, ಒಳಗೆ ಚಂಡಿಪಾಠವು ಕಾರಣ ಎಂದು ಈಗ ಗೊತ್ತಾಯಿತು ಬಿಡಿ’ ಎಂದಾಗ ಎದುರಿಗಿದ್ದ ಸಂಸದರು ಕೂಡ ಜೋರಾಗಿ ನಕ್ಕರಂತೆ.

2. ಅಟಲ್ ಜಿಗೆ ದೀನ ದಯಾಳ್‌ ಉಪಾಧ್ಯಾಯ ಎಂದರೆ ಅಪರಿಮಿತ ಗೌರವ. ಅಟಲ್  ಭಾಷಣ ಕಲೆ ಗುರುತಿಸಿ ಒಬ್ಬ ರಾಜಕೀಯ ನಾಯಕನಾಗಿ ರೂಪಿಸಿದ್ದೇ ದೀನ ದಯಾಳರು. 1977ರಲ್ಲಿ ತುರ್ತು ಪರಿಸ್ಥಿತಿ ನಂತರ ಜನಸಂಘವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸುವ ತೀರ್ಮಾನ ತೆಗೆದುಕೊಂಡಾಗ ಅಟಲ್‌ರಿಗೆ ಅದು ಇಷ್ಟಇರಲಿಲ್ಲವಂತೆ. ಆಗ ಅವರು ಹೇಳಿದ ಮಾತು ಐತಿಹಾಸಿಕ, ‘ಜನಸಂಘ ದೀನ ದಯಾಳ ಜಿ ತಪಸ್ಸಿನಿಂದ ನಿರ್ಮಾಣವಾದ ರಾಜಕೀಯ ಪಕ್ಷ. ಅದರ ಆಸ್ತಿತ್ವವನ್ನು ಇಲ್ಲವಾಗಿಸುವ ನಿರ್ಣಯಕ್ಕೆ ನನ್ನ ಸಮ್ಮತಿ ಇರಲಿಲ್ಲ. ಆದರೆ ಅಡ್ವಾಣಿ ಅವರ ರಾಜಕೀಯ ವಿವೇಚನೆ ಬಗ್ಗೆ ವಿಶ್ವಾಸದಿಂದ ಇದಕ್ಕೆ ಒಪ್ಪುತ್ತಿದ್ದೇನೆ’ ಎಂದು ಹೇಳಿದರಂತೆ.

3. ಅಟಲ್ ಜಿ ವಿದೇಶಾಂಗ ಸಚಿವರಾಗಿ ಮೊರಾರ್ಜಿ ಸಂಪುಟದಲ್ಲಿ ಅಧಿಕಾರ ಸ್ವೀಕರಿಸಿದಾಗ ಅಧಿಕಾರಿಗಳು ಸೌತ್‌ ಬ್ಲಾಕಿನ ವಿದೇಶಾಂಗ ಇಲಾಖೆಯ ಕಾರ್ಯಾಲಯದಲ್ಲಿ ತೂಗು ಹಾಕಿದ್ದ ಪಂಡಿತ ನೆಹರು ಅವರ ಭಾವ ಚಿತ್ರ ತೆಗೆದುಹಾಕಿದರಂತೆ. ಆದರೆ ವಿಷಯ ಗೊತ್ತಾದ ಕೂಡಲೇ ಅಟಲ್ ಜಿ ಅಧಿಕಾರಿಗಳಿಗೆ ಬೈದು ಫೋಟೋ ವಾಪಸ್‌ ಅದೇ ಜಾಗೆಯಲ್ಲಿ ಹಾಕಿಸಿದರು.

ಬಿಜೆಪಿಯಲ್ಲಿ ನತದೃಷ್ಟ ನಾಯಕ ಅಡ್ವಾಣಿ

4. 1995 ಮುಂಬೈನ ಶಿವಾಜಿ ಮೈದಾನದಲ್ಲಿ ಸಾರ್ವಜನಿಕ ಸಭೆ. ಆಗ ಅಡ್ವಾಣಿ ಪಾರ್ಟಿ ಅಧ್ಯಕ್ಷ ಮತ್ತು ರಾಮರಥ ಯಾತ್ರೆಯ ಕಾರಣದಿಂದ ಸಂಘ ಪರಿವಾರಕ್ಕೆ ಇಷ್ಟವಾಗುತ್ತಿದ್ದ ನಾಯಕ. ಮೊದಲು ಅಟಲ… ಜಿ ಭಾಷಣ; ನಂತರ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಅಡ್ವಾಣಿ ಅವರು ಅಟಲ್ ಜಿ 1996ರ ಚುನಾವಣೆಯಲ್ಲಿ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಯೇ ಬಿಟ್ಟರಂತೆ. ಈ ಘೋಷಣೆಗೆ ಮುಂಚೆ ಅಡ್ವಾಣಿ ಸಂಘದ ಜೊತೆ ಆಗಲಿ, ಪಕ್ಷದ ಇತರ ನಾಯಕರ ಜೊತೆ ಆಗಲಿ ಚರ್ಚೆ ನಡೆಸಿರಲಿಲ್ಲ. ಅಡ್ವಾಣಿ ಭಾಷಣ ಮುಗಿಸಿದ ತಕ್ಷಣ ಅಟಲ್‌ ಜಿ, ‘ಇದೇನು ಮಾಡಿದಿರಿ ಅಡ್ವಾಣಿ ಜಿ.. ನೀವೇ ನಮ್ಮ ನಾಯಕರು ಎಂದು ಘೋಷಿಸುತ್ತೇನೆ’ ಎಂದಾಗ ಅಡ್ವಾಣಿ, ‘ಇಂಥ ಘೋಷಣೆಯ ಅಧಿಕಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಿಗೆ ಮಾತ್ರ’ ಎಂದು ಹೇಳಿ ಅಪ್ಪಿಕೊಂಡರಂತೆ. ಭಾರತೀಯ ರಾಜಕಾರಣದಲ್ಲಿ ಜೋಡಿಗಳ ನಡುವೆ ಬಿರುಕು ಬಿಟ್ಟಿದ್ದೇ ಹೆಚ್ಚು. ಆದರೆ 1957ರಲ್ಲಿ ಜೊತೆಗೆ ಕೆಲಸ ಶುರು ಮಾಡಿದ ಅಟಲ…-ಅಡ್ವಾಣಿ 2018ರ ವರೆಗೆ ಕೂಡಿಯೇ ಇದ್ದವರು. ಭಿನ್ನ ಅಭಿಪ್ರಾಯಗಳು ಇದ್ದವು; ಆದರೆ ಎಂದೂ ಅಪ್ರಬುದ್ಧತೆಯಿಂದ ನಡೆದುಕೊಳ್ಳಲಿಲ್ಲ.

5. ಅಟಲ್ ಜಿ 98ರಲ್ಲಿ ಮರಳಿ ಪ್ರಧಾನಿ ಆಗಿ ಬಂದಾಗ ಜಸ್ವಂತ್‌ ಸಿಂಗ್‌ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಬೇಕು ಎಂದು ಅಂದುಕೊಂಡಿದ್ದರು. ಆದರೆ ಪ್ರಮಾಣ ವಚನದ ಹಿಂದಿನ ರಾತ್ರಿ ಬಂದ ಆರ್‌ಎಸ್‌ಎಸ್‌ ಸರಸಂಘ ಚಾಲಕ ಕು.ಸೀ ಸುದರ್ಶನ, ‘ಜಸ್ವಂತ್‌ ಸಿಂಗ್‌ ಅಮೆರಿಕ ಪಕ್ಷಪಾತಿ. ಅವರು ಬೇಡ ಸ್ವದೇಶಿ ಚಿಂತನೆಯ ಒಬ್ಬರನ್ನು ಹಣಕಾಸು ಸಚಿವರನ್ನಾಗಿ ಮಾಡಿ’ ಎಂದರಂತೆ. ಸಂಘ ಕೆಲ ಹೆಸರನ್ನು ಹೇಳಿದಾಗ ಅಟಲ… ಜಿಗೆ ಒಪ್ಪಿಗೆ ಆಗಲಿಲ್ಲ. ಕೊನೆಗೆ ಯಶವಂತ್‌ ಸಿನ್ಹಾ ಹೆಸರಿಗೆ ಅಟಲ್ ಜಿ ಮತ್ತು ಸುದರ್ಶನ ಒಪ್ಪಿಕೊಂಡರಂತೆ. ಹೀಗಾಗಿ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸುವಾಗ ಅಟಲ್ ಜಿ ಮುಖದ ಮೇಲೆ ಬೇಸರ ಕಾಣುತ್ತಿತ್ತಂತೆ.

ಲಾಲು ಏನಾದ್ರೂ ಹೊರ ಬಂದರೆ ಬಿಹಾರ ಚುನಾವಣೆಯ ವಾತಾವರಣವೇ ಅದಲುಬದಲು..!

6. ಸಂಪುಟ ವಿಸ್ತರಣೆ ಬಗ್ಗೆ ಟೀವಿ ಪತ್ರಕರ್ತ ರಜತ್‌ ಶರ್ಮಾ ಬಹಳಷ್ಟುವರದಿ ಮಾಡಿದ ನಂತರ, ಪ್ರಮಾಣ ವಚನದ ಮರುದಿನ ಬೆಳಿಗ್ಗೆ ಅಟಲ್ ಜಿ ಅವರು ರಜತ್‌ ಶರ್ಮಾ ರನ್ನು ಉಪಹಾರಕ್ಕೆ ಕರಿಸಿಕೊಂಡು ‘ಕ್ಯಾ ಪಂಡಿತ್‌ ಜಿ.. ಖೋದಾ ಪಹಾಡ್‌ ನಿಕಲಾ ಚೂಹಾ’ ಅಂದರೆ ಬೆಟ್ಟಅಗೆದು ಇಲಿ ತೆಗೆದಂತೆ ಆಯಿತಲ್ಲ ಎಂದು ತಮಾಷೆ ಮಾಡಿದರಂತೆ. ರಜತ್‌ ಶರ್ಮಾ ಸುಮ್ಮನೆ ನಗುತ್ತಾ ಕುಳಿತಾಗ, ‘ಹೋಗಲಿ ಬಿಡಿ. ನಿಮಗೆ ಇಲಿ ಆದರೂ ಸಿಕ್ಕಿತಲ್ಲ ಅದೇ ಸಂತೋಷ, ಉಪಹಾರ ಮಾಡಿ’ ಎಂದು ಬಾಯಿ ತುಂಬಾ ನಕ್ಕರಂತೆ. ಅಟಲ್ ಜಿ ಟೀಕೆ ಟಿಪ್ಪಣಿಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು. ಅತ್ಯಂತ ಭಿನ್ನ ಚಿಂತನೆಯ ಜಾವೇದ್‌ ಆಕ್ಟರ್‌, ಕುಲದೀಪ್‌ ನಯ್ಯರ್‌ ಅಂಥವರ ಜೊತೆಗೂ ಅಟಲ… ಜಿ ಹರಟೆ ಹೊಡೆಯುತ್ತಿದ್ದರು. ಅಟಲ್ ಜಿ ಕಾಲದಲ್ಲಿ ಸಂಪುಟದಲ್ಲೂ, ಪಕ್ಷದಲ್ಲೂ ಮುಕ್ತ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿತ್ತು. ಆದರೆ ಬಹಿರಂಗ ಜಗಳ ಮಾಧ್ಯಮಗಳಿಗೆ ಪುಷ್ಕಳ ಭೋಜನ ಒದಗಿಸುತ್ತಿತ್ತು.

7. ಆಗ್ರಾ ಶೃಂಗಸಭೆ ವಿಫಲಗೊಳ್ಳಲು ಅಡ್ವಾಣಿ ಮತ್ತು ಸುಶ್ಮಾ ಕಾರಣ ಎಂದು ಪಾಕಿಸ್ತಾನ ಮಾಧ್ಯಮಗಳನ್ನು ನಂಬಿ ಭಾರತೀಯ ಮಾಧ್ಯಮಗಳು ಬರೆದವಾದರೂ, ಅಲ್ಲಿ ಉಪಸ್ಥಿತರಿದ್ದ ಯಶವಂತ್‌ ಸಿನ್ಹಾ ಪ್ರಕಾರ, ಸಂಪಾದಕರ ಜೊತೆ ಮುಶ್ರಫ್‌ ಆಡಿದ ಮಾತು ಅಟಲ್‌ ಜಿಗೆ ಬೇಸರ ತರಿಸಿತ್ತು. ಕಾಶ್ಮೀರದ ಉಲ್ಲೇಖಕ್ಕೆ ಅಟಲ್ ಜಿ ತಯಾರು ಇರಲಿಲ್ಲ. ಉದಾರವಾದಿ ಇದ್ದರಾದರೂ ಅಟಲ… ಜಿ ರಾಷ್ಟ್ರದ ನೀತಿಯ ಗಡಿಯ ಪ್ರಶ್ನೆ ಬಂದಾಗ ರಾಜಿಗೆ ತಯಾರು ಇರುತ್ತಿರಲಿಲ್ಲ.

8. ಅಟಲ… ಜಿ ಪ್ರಧಾನಿ ಆಗಿದ್ದಾಗ ಒಮ್ಮೆ ಗೋವಿಂದಾಚಾರ್ಯ ಬ್ರಿಟಿಷ್‌ ರಾಜದೂತರ ಎದುರು, ‘ಅಟಲ್ ನಮ್ಮ ಮುಖವಾಡ ಅಷ್ಟೇ. ಅಡ್ವಾಣಿ ನಮ್ಮ ವೈಚಾರಿಕ ನಾಯಕ’ ಎಂದು ಹೇಳಿದ್ದು ಭಾರೀ ಸುದ್ದಿಯಾಯಿತು. ಆಗ ಅಟಲ… ವಿದೇಶ ಪ್ರವಾಸದಲ್ಲಿದ್ದರು. ದಿಲ್ಲಿಗೆ ಬಂದ ನಂತರ ಅಟಲ್ ಜಿ ಮುಂದಿನ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮುಖವಾಡದ ಹೇಳಿಕೆ ಬಗ್ಗೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದರಂತೆ. ಮುಂದೆ ಅಟಲ್ ಜಿ ಬೇಸರದ ಕಾರಣದಿಂದ ಗೋವಿಂದಚಾರ್ಯ ರಾಜಕೀಯ ಸನ್ಯಾಸವನ್ನೇ ತೆಗೆದುಕೊಳ್ಳ ಬೇಕಾಯಿತು.

2022 ಕ್ಕೆ ಪ್ರಿಯಾಂಕ ಇನ್ ಉತ್ತರ ಪ್ರದೇಶ?

9. ದೀನ ದಯಾಳ್‌ ಉಪಾಧ್ಯಾಯ, ಆರ್‌ಎಸ್‌ಎಸ್‌ ಸರಸಂಘ ಚಾಲಕರಾದ ಬಾಳಾ ಸಾಹೇಬ್‌ ದೇವರಸ, ಪ್ರೊಫೆಸರ್‌ ರಾಜೇಂದ್ರ ಸಿಂಹ ಜೊತೆಗೆ ಅಟಲ… ಜಿ ಸಂಬಂಧ ಚೆನ್ನಾಗಿತ್ತು. ಆದರೆ ಅತಿಯಾದ ಹಿಂದುತ್ವದ ಕಾರಣದಿಂದ ಸರಸಂಘ ಚಾಲಕ ಸುದರ್ಶನ, ಸ್ವದೇಶಿ ಕಾರಣದಿಂದ ದತ್ತೋಪಂತ ಠೇಂಗಡಿ, ರಾಮ ಮಂದಿರದ ಕಾರಣದಿಂದ ಅಶೋಕ ಸಿಂಘಾಲ್‌ ಜೊತೆಗೆ ಒಳ್ಳೆಯ ಸಂಬಂಧ ಇರಲಿಲ್ಲ. ಹೀಗಾಗಿ ಸಂಘಟನೆ ವಿಚಾರವನ್ನು ಅಡ್ವಾಣಿ ಅವರಿಗೆ ಬಿಟ್ಟಿದ್ದ ಅಟಲ್‌ ಜಿ, ಆರ್‌ಎಸ್‌ಎಸ್‌ ಜೊತೆಗಿನ ಸಮನ್ವಯವನ್ನು ಕೂಡ ಅಡ್ವಾಣಿ ಮೂಲಕವೇ ಮಾಡಿಸುತ್ತಿದ್ದರಂತೆ. ಆದರೆ ಒಮ್ಮೆ ಸುದರ್ಶನ, ಅಟಲ್ ಜಿ ಕಣ್ಣು ಕಿವಿ ಆಗಿದ್ದ ಭದ್ರತಾ ಸಲಹೆಗಾರ ಬ್ರಜೇಶ್‌ ಮಿಶ್ರಾ ತಲೆದಂಡ ಕೇಳಿದಾಗ, ‘ಬ್ರಜೇಶ್‌ ಬೇಡ ಎಂದರೆ ನಾನು ಪ್ರಧಾನಿಯಾಗಿ ಇರೋಲ್ಲ, ನೀವು ನೋಡಿಕೊಳ್ಳಿ’ ಎಂದು ಅಡ್ವಾಣಿಗೆ ಹೇಳಿಬಿಟ್ಟರಂತೆ. ಉದಾರವಾದಿ ಧೋರಣೆಗಳ ಕಾರಣದಿಂದ ಸಂಘ ಪರಿವಾರ ಅಟಲ… ಸರ್ಕಾರವನ್ನು ಇಷ್ಟಪಡುತ್ತಿರಲಿಲ್ಲ. ಆದರೆ 24 ಪಕ್ಷಗಳ ಜೊತೆ ಏಗುವುದು ಉಳಿದ ಯಾರಿಗೂ ಸಾಧ್ಯ ಇರಲಿಲ್ಲ.

10. 1999ರಲ್ಲಿ 13 ತಿಂಗಳ ಅಟಲ್ ಸರ್ಕಾರ ಒಂದು ವೋಟಿನಿಂದ ಬಿದ್ದಾಗ ವಾಜಪೇಯಿ ಬಹಳ ದುಃಖಿತರಾಗಿದ್ದರು. ಸದನದಿಂದ ರಾಜೀನಾಮೆ ಕೊಡಲು ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಕಣ್ಣೀರು ತುಂಬಿಕೊಂಡೇ ಹೋದರಂತೆ. ರಾಜೀನಾಮೆ ಕೊಟ್ಟು ವಾಪಸ್‌ ಪಾರ್ಲಿಮೆಂಟ್‌ಗೆ ಬಂದಾಗ ಎದುರುಗಡೆಯಿಂದ ಸೋನಿಯಾ ಗಾಂಧಿ ಬರುತ್ತಿದ್ದರಂತೆ. ಕೂಡಲೇ ನಿಂತ ಅಟಲ್ ಜಿ ‘ತಾಜ್‌ ತೋ ಉತರವಾಹಿ ದಿಯಾ ಮೋಹತರಮಾ ಅಬ್‌ ತೋ ಮುಸ್ಕುರಾವೊ’ ಅಂದರೆ ಕಿರೀಟವನ್ನಂತೂ ತೆಗೆಸಿಯೇ ಬಿಟ್ಟೀರಿ, ಈಗಲಾದರೂ ನಕ್ಕು ಬಿಡಿ ಎಂದಾಗ ಪೂರ್ತಿ ಕಾರಿಡಾರ್‌ ನಿಶ್ಶಬ್ದವಾಗಿತ್ತಂತೆ.

11. ಪ್ರಧಾನಿ ಆದ ನಂತರ ಮಂಡಿ ನೋವು ಅಟಲ್ ಜಿಯನ್ನು ವಿಪರೀತವಾಗಿ ಕಾಡಲು ಶುರು ಮಾಡಿತು. ಹೀಗಾಗಿ ಮಧ್ಯೆ ಮಧ್ಯೆ ಒಂದೆರಡು ದಿನಗಳ ವಿಶ್ರಾಂತಿ ಅನಿವಾರ್ಯವಿತ್ತು. ಮಂಡಿ ನೋವಿಗಾಗಿ ಅಟಲ… ಜಿ ದಿನವೂ ನೋವು ನಿವಾರಕ ಮಾತ್ರೆ ನುಂಗುತ್ತಿದ್ದರಂತೆ. ಒಮ್ಮೆ ಅಮೆರಿಕಕ್ಕೆ ಹೋಗುವಾಗ ಅಟಲ್ ಜಿ ಡಾಕ್ಟರ್‌ ಕೊಟ್ಟಸಲಹೆ ಮೇರೆಗೆ 15 ದಿನ ಪೇನ್‌ ಕಿಲ್ಲರ್‌ಗಳನ್ನು ನಿಲ್ಲಿಸಿದಾಗ ವಿಶ್ವ ಸಂಸ್ಥೆಯಲ್ಲಿ ವೇದಿಕೆ ಹತ್ತುವಾಗ ನೋವಿನಿಂದ ಒದ್ದಾಡಿದರಂತೆ. ನಂತರ ಬೀಚ್‌ಕ್ಯಾಂಡಿ ಮುಂಬೈನಲ್ಲಿ ಮಂಡಿ ಕಸಿ ಮಾಡಿಸಿಕೊಂಡರು. ಆ ಶಸ್ತ್ರಚಿಕಿತ್ಸೆಯ ನಂತರ ಅಟಲ್ ಜಿ ಆರೋಗ್ಯದ ವಿಷಯದಲ್ಲಿ ತುಂಬಾ ತೊಂದರೆ ಪಟ್ಟರು. ಹೀಗಾಗಿ ಅಟಲ್‌ ಜಿ ಎಲ್ಲೇ ದಿಲ್ಲಿ ಬಿಟ್ಟು ಹೊರಗೆ ಹೋದರೂ ಸಾಕು ಮಗಳು ನಮಿತಾ ಅಥವಾ ಅಳಿಯ ರಂಜನ್‌ ಯಾರಾದರೂ ಒಬ್ಬರು ಜೊತೆಗೆ ಇರಲೇಬೇಕಿತ್ತು

12. ಒಂದು ಕ್ಷಣ ಜನ ಸಮೂಹದ ಮುಂದೆ ನಿಂತರೆ ತನ್ನ ಮಾತಿನಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅಟಲ್ ಜಿ, ಸಣ್ಣ ಗುಂಪಿನೊಂದಿಗೆ ಇದ್ದಾಗ, ಪ್ರವಾಸದಲ್ಲಿ ಇದ್ದಾಗ ಮೌನವನ್ನು ಇಷ್ಟಪಡುತ್ತಿದ್ದರು. ಅವರ ಅನೇಕ ಆಪ್ತರು ಹೇಳಿಕೊಂಡಿರುವ ಪ್ರಕಾರ, ಜನರು ಮತ್ತು ಮೈಕ್‌ ಸಿಕ್ಕರೆ ಸಾಕು ಅಟಲ್‌ರ ಮಾತುಗಳು ಒತಪ್ರೋತವಾಗಿ ಹರಿಯುತ್ತಿದ್ದವು ಅಂತೆ.

- ಪ್ರಶಾಂತ್ ನಾತು

Follow Us:
Download App:
  • android
  • ios