ಅಹಮದಾಬಾದ್ ವಿಮಾನ ದುರಂತದ ಹಿಂದೆ ಟರ್ಕಿ ಅಥವಾ ಖಲಿಸ್ತಾನಿ ಉಗ್ರರ ಕೈವಾಡ ಇರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.

ಅಹಮದಾಬಾದ್: ಅಹಮದಾಬಾದ್ ವಿಮಾನ ದುರಂತವು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ಒಪ್ಪಂದದ ಪ್ರಕಾರ2025 ರಿಂದ ಏರ್‌ಇಂಡಿಯಾದ ದೊಡ್ಡ ವಿಮಾನಗಳ ನಿರ್ವಹಣೆಯನ್ನು ಟರ್ಕಿ ಕಂಪನಿ ವಹಿಸಿಕೊಂಡಿತ್ತು. ಇತ್ತೀಚೆಗೆ ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಟರ್ಕಿ ಭಾರತಕ್ಕೆ ದ್ರೋಹ ಬಗೆದು ಪಾಕಿಸ್ತಾನದ ಬೆಂಬಲಕ್ಕೆ ನಿಂತಿತ್ತು. ಅಲ್ಲದೆ, ಶಸ್ತ್ರಾಸ್ತ್ರಗಳ ನೆರವು ಕೂಡ ನೀಡಿತ್ತು.

ಹೀಗಾಗಿ, ವಿಮಾನ ಪತನದಲ್ಲಿ ಟರ್ಕಿ ಕೈವಾಡವಿರಬಹುದೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ. ಜೊತೆಗೆ, 2023ರ ನವೆಂಬರ್‌ನಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಏರ್‌ಇಂಡಿಯಾ ವಿಶ್ವದಾದ್ಯಂತ ತನ್ನ ವಿಮಾನಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಗತಿಯೂ ಈಗ ಮುನ್ನೆಲೆಗೆ ಬಂದಿದ್ದು, ಆತನ ಕೈವಾಡದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಈ ಹಿಂದೆ ವಿಮಾನ ದುರಂತದಲ್ಲಿ ಮೃತಪಟ್ಟ ಪ್ರಮುಖರು

  • ಹೋಮಿ ಬಾಬಾ - ಭಾರತದ ಅಣುಶಕ್ತಿ ಪಿತಾಮಹ (1966),
  • ಸುರೇಂದ್ರ ಮೋಹನ್ ಕುಮಾರಮಂಗಲಂ (ಮಾಜಿ ಸಂಸದ 1973),
  • ಸಂಜಯ್ ಗಾಂಧಿ (1980),
  • ಮಾಧವ ರಾವ್ ಸಿಂಧಿಯಾ (ಮಾಜಿ ಕೇಂದ್ರ ಸಚಿವ 2001),
  • ಜಿಎಂಸಿ ಬಾಲಯೋಗಿ (ಲೋಕಸಭೆ ಮಾಜಿ ಸ್ಪೀಕರ್ 2002),
  • ನಟಿ ಸೌಂದರ್ಯ (ನಟಿ 2004),
  • ವೈ.ಎಸ್. ರಾಜಶೇಖರ ರೆಡ್ಡಿ (ಆಂಧ್ರಪ್ರದೇಶ ಸಿಎಂ-2009),
  • ದೋರ್ಜಿ ಖಂಡು (ಅರುಣಾಚಲ ಸಿಎಂ 2011),
  • ಬಿಪಿನ್ ರಾವತ್‌ (ಸೇನಾ ಮುಖ್ಯಸ್ಥರು 2021),
  • ಒ.ಪಿ.ಜಿಂದಾಲ್ - ಸುರೇಂದರ್ ಸಿಂಗ್ (ಉದ್ಯಮಿ 2025),
  • ವಿಜಯ್ ರೂಪಾನಿ (ಗುಜರಾತ್ ಮಾಜಿ ಸಿಎಂ - 2025)

ನ್ಯಾಯಯುತ ಸಂಪೂರ್ಣ ತನಿಖೆ ನಡೆಸುತ್ತೇವೆ

ಈ ಭಯಾನಕ ಘಟನೆಯಿಂದ ನಾನು ಸಂಪೂರ್ಣ ತತ್ತರಿಸಿದ್ದೇನೆ. ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿ ಘಟನಾ ಸ್ಥಳದಲ್ಲೇ ಇರುವಂತೆ ಸೂಚಿಸಿದ್ದಾರೆ. ಈ ಸಮಯದಲ್ಲಿ ನಾನು ಪ್ರಯಾಣಿಕರು ಮತ್ತು ಅವರ ಪರಿವಾರದವರ ಬಗ್ಗೆಯಷ್ಟೇ ಯೋಚಿಸಬಲ್ಲೆ ಹಲವು ಏಜೆನ್ಸಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ನಾವು ನ್ಯಾಯಯುತ ಮತ್ತು ಸಂಪೂರ್ಣ ತನಿಖೆ ನಡೆಸುತ್ತೇವೆ. ದುರ್ಘಟನೆಗೆ ಕಾರಣವೇನು ಎಂಬುದನ್ನು ಕಂಡುಹಿಡಿಯುತ್ತೇವೆ ಎಂದು ಅಹ್ಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಆಗಿರುವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

ಅನೇಕ ಬ್ರಿಟಿಷ್ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ಲಂಡನ್‌ಗೆ ಹೊರಟ ವಿಮಾನವು ಭಾರತದ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಗಿರುವ ದೃಶ್ಯಗಳು ಭೀಕರವಾಗಿವೆ. ಪರಿಸ್ಥಿತಿ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ.

ಈ ತೀವ್ರ ಸಂಕಷ್ಟದ ಸಮಯದಲ್ಲಿ ಪ್ರಯಾಣಿಕರು ಮತ್ತು ಅವರ ಕುಟುಂಬಗಳೊಂದಿಗೆ ನಾನಿದ್ದೇನೆ ಎಂದು ಈ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪ್ರಧಾನಿ ಕೀರ್‌ಸ್ಟಾರ್ಮರ್ ಪ್ರತಿಕ್ರಿಯಿಸಿದ್ದಾರೆ.