ಗುರುಗ್ರಾಮ್‌ನಲ್ಲಿ ಹೆಂಡತಿ ಜೊತೆ ಜಗಳವಾಡಿದ ಗಂಡ ತನ್ನ ನಾಲ್ವರು ಮಕ್ಕಳೊಂದಿಗೆ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಸಾವಿಗೆ ಶರಣಾಗಿದ್ದಾನೆ.
ಗುರುಗ್ರಾಮ: ನಿಮ್ಮ ಜೀವನ ನಿಮ್ಮ ಇಷ್ಟ ಆದರೆ ಪುಟ್ಟ ಮಕ್ಕಳ ಜೀವ ತೆಗೆಯುವ ಹಕ್ಕು ಯಾವ ಪೋಷಕರಿಗೂ ಇಲ್ಲ, ಇತ್ತೀಚೆಗೆ ಜೀವನದ ಬಗ್ಗೆ ಏನೂ ಅರಿಯದ ಮುದ್ದು ಮುದ್ದಾದ ಮಕ್ಕಳನ್ನು ಕೊಂದು ಪೋಷಕರು ಸಾವಿಗೆ ಶರಣಾಗುವಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಕೆಟ್ಟ ಪೋಷಕರು ತಾವು ಸಾಯುವುದಲ್ಲದೇ ಮುದ್ದಾ ಮಕ್ಕಳನ್ನು ಕೂಡ ತಮ್ಮ ಜೊತೆ ಸಾವಿನ ಮನೆ ಸೇರಿಸುತ್ತಾರೆ. ಈಗ ಇಂತಹದ್ದೇ ಮತ್ತೊಂದು ಪ್ರಕರಣ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ. ಹೆಂಡತಿ ಜೊತೆ ಜಗಳ ಮಾಡಿಕೊಂಡ ಗಂಡ ತನ್ನ ಮುದ್ದಾದ 3 ರಿಂದ 9 ವರ್ಷ ಪ್ರಾಯದ ಒಳಗಿನ 4 ಮಕ್ಕಳನ್ನು ಜೊತೆಗೆ ಕರೆದುಕೊಂಡು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ.
36 ವರ್ಷದ ಮನೋಜ್ ಮೆಹ್ರೋ ಎಂಬ ಕಾರ್ಮಿಕ ಈ ಕೃತ್ಯವೆಸಗಿದ್ದಾನೆ. ಮಂಗಳವಾರ ಮಧ್ಯಾಹ್ನ ಫರಿದಾಬಾದ್‌ನ ಬಲ್ಲಭಗಢದಲ್ಲಿ ವೇಗವಾಗಿ ಬರುತ್ತಿದ್ದ ಗೋಲ್ಡನ್ ಟೆಂಪಲ್ ಎಕ್ಸ್‌ಪ್ರೆಸ್ ರೈಲಿನ ಮುಂದೆ ಈತ ತನ್ನ ನಾಲ್ವರು ಗಂಡು ಮಕ್ಕಳನ್ನು ಎಳೆದುಕೊಂಡು ಹಳಿಗಳ ಮೇಲೆ ಹಾರಿದ್ದಾನೆ. ಈ ಮನೋಜ್ ಮೆಹ್ರೋ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಮಧ್ಯಾಹ್ನ 1. 10ರ ಸುಮಾರಿಗೆ ಈ ಘಟನೆ ನಡೆದಿದೆ. ಮನೋಜ್ ಮೆಹ್ರೋ ಮೂಲತಃ ಬಿಹಾರದ ಸೀತಾಮರ್ಹಿಯ ನಿವಾಸಿ, ಘಟನೆ ನಡೆದ ರೈಲ್ವೆ ಹಳಿಯಿಂದ 300 ಮೀಟರ್ ದೂರದಲ್ಲಿ ಈತ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಮೃತ ಮಕ್ಕಳೆಲ್ಲರೂ 3 ರಿಂದ 10 ವರ್ಷದೊಳಗಿನ ಪ್ರಾಯದವರಾಗಿದ್ದಾರೆ.
ತಾನು ವಾಸವಿದ್ದ ಸುಭಾಷ್ ಕಾಲೋನಿಯಿಂದ ಮಕ್ಕಳನ್ನು ಕರೆದುಕೊಂಡು ಹೊರಡುವ ವೇಳೆ ಆತ ಪತ್ನಿಯ ಬಳಿ ಮಕ್ಕಳನ್ನು ಆಟವಾಡಲು ಹತ್ತಿರದ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದ. ಆದರೆ ಆತ ಮಕ್ಕಳನ್ನು ಉದ್ಯಾನವನಕ್ಕೆ ಕರೆದೊಯ್ಯುವ ಬದಲು ತನ್ನೊಂದಿಗೆ ಮಸಣಕ್ಕೆ ಕರೆದೊಯ್ದಿದ್ದಾನೆ. ಘಟನೆ ನಡೆಯುವುದಕ್ಕೂ ಮೊದಲು ಆತ ಮಕ್ಕಳೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈಲು ಬರುವುದನ್ನೇ ಕಾಯುತ್ತಾ ಹಳಿಗಳ ಬಳಿ ಕುಳಿತಿದ್ದ ಎಂಬುದನ್ನು ಕೆಲವರು ಗಮನಿಸಿದ್ದಾರೆ. ಆದರೆ ಆತ ಸಾಯುವುದಕ್ಕೆ ರೈಲಿಗಾಗಿ ಕಾಯುತ್ತಿದ್ದಾನೆ ಎಂಬುದರ ಅರಿವು ಯಾರಿಗೂ ಇರಲಿಲ್ಲ, ಇದಕ್ಕೂ ಮೊದಲು ಆತ ಮಕ್ಕಳಿಗೆ ಚಿಪ್ಸ್ ಹಾಗು ಕೊಲಾ ಪಾನೀಯವನ್ನು ಕೂಡ ಕೊಡಿಸಿದ್ದಾನೆ.
ಘಟನೆಯ ನಂತರ ಈ ವಿಚಾರವನ್ನು ಲೋಕೋ ಪೈಲಟ್ ಬಲ್ಲಭಗಡ ಠಾಣೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಮನೋಜ್ ಬಳಿ ಇದ್ದ ಆಧಾರ್‌ಕಾರ್ಡ್ ಮೂಲಕ ಆತನ ಗುರುತು ಪತ್ತೆ ಹಚ್ಚಿದ್ದಾರೆ. ಆತನ ಜೇಬಿನಲ್ಲಿ ಚೀಟಿಯೊಂದು ಪೊಲೀಸರಿಗೆ ಸಿಕ್ಕಿದ್ದು, ಇದರಲ್ಲಿ ಆತನ ಪತ್ನಿಯ ದೂರವಾಣಿ ಸಂಖ್ಯೆ ಇತ್ತು. ಹೀಗಾಗಿ ಇದು ಆತನ ಪೂರ್ವನಿಯೋಜಿತ ಕೃತ್ಯ ಎಂಬುದು ಬಯಲಾಗಿದೆ.
ಇತ್ತ ಮೊದಲಿಗೆ ಮಹಿಳೆ ಆಕೆಯ ಮಕ್ಕಳೊಂದಿಗೆ ರೈಲ್ವೆ ಹಳಿಗೆ ಹಾರಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ನಾವು ಸ್ಥಳಕ್ಕೆ ತಲುಪಿದಾಗ ಅಲ್ಲಿ ತಂದೆ ಹಾಗೂ ಮಕ್ಕಳು ಸಾವಿಗೀಡಾಗಿದ್ದರು ಎಂದು ಜಿಆರ್‌ಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಮನೋಜ್ ಪತ್ನಿ ಪ್ರಿಯಳಿಗೆ ಕರೆ ಮಾಡಿದಾಗ, ಆಕೆ ತನ್ನ ಪತಿ ಮಕ್ಕಳನ್ನು ಉದ್ಯಾನವನಕ್ಕೆ ಕರೆದುಕೊಂಡು ಹೋಗಿದ್ದಾರೆ. ಶೀಘ್ರದಲ್ಲೇ ಮನೆಗೆ ಬರುತ್ತಾರೆ ಎಂದು ಜಿಆರ್‌ಪಿಗೆ ಮಾಹಿತಿ ನೀಡಿದ್ದರು. ಇದಾದ ನಂತರ ಆಕೆಯನ್ನು ಸ್ಥಳಕ್ಕೆ ಕರೆದ ವೇಳೆ ಆಕೆ ಪತಿ ಹಾಗೂ ನಾಲ್ವರು ಗಂಡು ಮಕ್ಕಳ ಶವವನ್ನು ನೋಡಿ ಮೂರ್ಛೆ ಹೋಗಿದ್ದಾಳೆ.
ಒಟ್ಟಿನಲ್ಲಿ ತಂದೆಯೊಬ್ಬನ ದುಡುಕಿನ ನಿರ್ಧಾರೊಂದು ಏನೋ ಅರಿಯದ ಮುಗ್ಧ ಮಕ್ಕಳ ಜೀವ ಬಲಿ ಪಡೆದಿದೆ. ಪುಟ್ಟ ಮಕ್ಕಳನ್ನು ಜೊತೆಗೆ ಎಳೆದುಕೊಂಡು ಆತ ರೈಲ್ವೆ ಹಳಿಗೆ ಹಾರಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಸಾಯಬೇಕೆಂದರೆ ಸಾಯಿರಿ, ಮುಗ್ದ ಮಕ್ಕಳನ್ನೇಕೆ ಕೊಲ್ಲುವಿರಿ, ಅನೇಕರು ಮಕ್ಕಳಿಲ್ಲ ಎಂದು ಕೊರಗುತ್ತಿದ್ದರೆ ಮಕ್ಕಳಿರುವವರು ಹೀಗೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
