ಹೈದರಾಬಾದ್‌(ಜು.01): ಕೊರೋನಾ ನಿಯಂತ್ರಣಕ್ಕಾಗಿ ಕಡ್ಡಾಯಗೊಳಿಸಲಾದ ಮಾಸ್ಕ್‌ ಧರಿಸುವಂತೆ ನೆನಪಿಸಿದ ದಿವ್ಯಾಂಗ ಮಹಿಳಾ ಸಿಬ್ಬಂದಿ ಮೇಲೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೋರ್ವ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈ ಕೃತ್ಯವೆಸಗಿದ ಆರೋಪಿ ಅಧಿಕಾರಿಯನ್ನು ಮಂಗಳವಾರ ಬಂಧಿಸಲಾಗಿದೆ. ಅಲ್ಲದೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿದೆ.

ಭಾಸ್ಕರ್‌ ಎಂಬ ಸಿಬ್ಬಂದಿ ಮಾಸ್ಕ್‌ ಧರಿಸಿರಲಿಲ್ಲ. ಈ ವೇಳೆ ಸಹದ್ಯೋಗಿ ಮಹಿಳೆ ಮಾಸ್ಕ್‌ ಧರಿಸಲು ಕೋರಿದ್ದರು. ಇದರಿಂದ ಸಿಟ್ಟಿಗೆದ್ದ ಮಹಿಳೆಯೆಡೆಗೆ ತೆರಳಿ ಆಕೆಯ ತಲೆಕೂದಲು ಹಿಡಿದು ಎಳೆದಾಡಿದ್ದೂ, ಅಲ್ಲದೆ ಕೈಗೆ ಸಿಕ್ಕಿದ ವಸ್ತುವೊಂದರಿಂದ ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಅಚ್ಚರಿಯೆಂದರೆ ಸ್ಥಳದಲ್ಲಿದ್ದ ಕೆಲ ಓರ್ವ ಮಹಿಳಾ ಸಿಬ್ಬಂದಿ ಇದನ್ನು ನೋಡಿಕೊಂಡು ಅಲ್ಲಿಂದ ಪರಾರಿಯಾದರೆ, ಮತ್ತಿಬ್ಬರು ಪುರುಷಷ ಸಿಬ್ಬಂದಿ ತಮಾಷೆ ನೋಡಿಕೊಂಡು ನಿಂತಿದ್ದರು.

ಬಳಿಕ ಮತ್ತೋರ್ವ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಭಾಸ್ಕರ್‌ನನ್ನು ತಡೆದ ಮೇಲೆ ಹಲ್ಲೆ ನಿಂತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಅಧಿಕಾರಿಯ ದರ್ಪದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.