ಕೋಲ್ಕತಾ(ಮಾ.29): ರಾಜಕೀಯ ವೈರುಧ್ಯಗಳ ಮಧ್ಯೆಯೂ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಮದನ್‌ ಮಿತ್ರಾ ಅವರು ಭಾನುವಾರ ತಮ್ಮ ರಾಜಕೀಯ ವಿರೋಧಿಗಳಾದ ಬಿಜೆಪಿಯ ಮೂವರು ನಾಯಕಿಯರೊಂದಿಗೆ ಹೂಗ್ಲಿ ನದಿಯ ಹಡಗೊಂದರಲ್ಲಿ ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಮರ್‌ಹಾತಿ ಕ್ಷೇತ್ರದಿಂದ ಸ್ಪರ್ಧಿಸಿರುವ ಟಿಎಂಸಿ ಅಭ್ಯರ್ಥಿ ಮಿತ್ರಾ ಅವರು ಬಿಜೆಪಿ ಅಭ್ಯರ್ಥಿಗಳಾದ ಪಾಯೆಲ್‌ ಸರ್ಕಾರ್‌, ಶ್ರಾವಂತಿ ಚಟರ್ಜಿ ಮತ್ತು ತನುಶ್ರೀ ಚಕ್ರವರ್ತಿ ಅವರೊಂದಿಗೆ ಹೋಳಿ ಹಬ್ಬ ಆಚರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿತ್ರಾ, ‘ಅವರೆಲ್ಲ ಹಲವಾರು ವರ್ಷಗಳಿಂದ ಪರಿಚಿತವಿರುವ ಸ್ನೇಹಿತರು. ಹೋಳಿಯಲ್ಲಿ ರಾಜಕೀಯ ಇರಬಾರದು. ನಾನೇ ಅವರನ್ನು ಆಹ್ವಾನಿಸಿದ್ದೆ. ರಾಜಕೀಯ ವೈರುಧ್ಯ ನಮ್ಮ ವೈಯಕ್ತಿಕ ಸಂಬಂಧಕ್ಕೆ ಮುಳುವಾಗಬಾರದು. ನಮ್ಮದು ವಿಭಿನ್ನ ರಾಜಕೀಯ ಸಿದ್ಧಾಂತ. ಆದರೆ ಹೋಳಿ ದಿನ ನಾವೆಲ್ಲ ಒಟ್ಟಿಗೆ ಸೇರುತ್ತೇವೆ. ಇದು ಪಶ್ಚಿಮ ಬಂಗಾಳದ ಸಂಸ್ಕೃತಿ’ ಎಂದು ತಿಳಿಸಿದ್ದಾರೆ.