Asianet Suvarna News Asianet Suvarna News

ಕೊರೋನಾದಿಂದ ಆರ್ಥಿಕ ಸಂಕಷ್ಟ: ತಿರುಪತಿ ದೇಗುಲಕ್ಕೆ ಈಗ ಠೇವಣಿ ಬಡ್ಡಿಯೇ ಆಧಾರ!

ತಿರುಪತಿ ದೇಗುಲಕ್ಕೆ ಈಗ ಠೇವಣಿ ಬಡ್ಡಿಯೇ ಆಧಾರ| ಕೊರೋನಾದಿಂದ ಆರ್ಥಿಕ ಸಂಕಷ್ಟ| ತಿಮ್ಮಪ್ಪನಿಗೆ ಸುಧಾ ಮೂರ್ತಿ 1 ಕೋಟಿ ರೂ.

Tirupati temple to draw monthly interest on Rs 12000 crore deposits due to cash crunch
Author
Bangalore, First Published Aug 30, 2020, 12:34 PM IST

ತಿರುಪತಿ(ಆ.30): ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣ ದೇಗುಲಗಳು ಮುಚ್ಚಿದ್ದರಿಂದ ದೇಶದ ಅತಿ ಶ್ರೀಮಂತ ದೇವಾಲಯ ಎನ್ನಿಸಿಕೊಂಡ ತಿರುಮಲ ವೆಂಕಟೇಶ್ವರ ದೇವಾಲಯಕ್ಕೂ ಆರ್ಥಿಕ ಸಂಕಷ್ಟಎದುರಾಗಿದೆ. ಹೀಗಾಗಿ ತಾನು ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿರುವ 12 ಸಾವಿರ ಕೋಟಿ ರು. ದೀರ್ಘಾವಧಿ ಠೇವಣಿಯನ್ನು ಮಾಸಿಕ ಠೇವಣಿಯನ್ನಾಗಿ ಪರಿವರ್ತಿಸಿ, ಬರುವ ಬಡ್ಡಿಯನ್ನು ದೇಗುಲಗಳ ಕೆಲಸಕ್ಕೆ ಬಳಸಿಕೊಳ್ಳಲು ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ಆಡಳಿತ ಮಂಡಳಿ ನಿರ್ಧರಿಸಿದೆ.

ಈವರೆಗೂ ಟಿಟಿಡಿ, ದೀರ್ಘಾವಧಿ ಠೇವಣಿಗಳನ್ನು ಬ್ಯಾಂಕ್‌ನಲ್ಲಿ ಇರಿಸುತ್ತಿತ್ತು. ಏಕೆಂದರೆ ಬರುವ ಬಡ್ಡಿ ಹಣದ ಮೇಲೆ ಅಷ್ಟೇನೂ ಟಿಟಿಡಿ ಅವಲಂಬಿತವಾಗಿರಲಿಲ್ಲ. ಆದರೆ ಇತ್ತೀಚೆಗೆ ಸುಮಾರು 3 ತಿಂಗಳು ಲಾಕ್‌ಡೌನ್‌ ಕಾರಣ ದೇವಸ್ಥಾನ ಬಂದ್‌ ಇದ್ದ ಕಾರಣ ಆದಾಯ ಸ್ಥಗಿತಗೊಂಡಿತ್ತು. ಹೀಗಾಗಿ ದೇಗುಲಕ್ಕೆ ತನ್ನಲ್ಲಿನ ನೌಕರರಿಗೂ ವೇತನ ಕೊಡಲು ಸಮಸ್ಯೆ ಎದುರಾಗಿತ್ತು.

ಇದೇ ಕಾರಣಕ್ಕೆ ಶುಕ್ರವಾರ ಆಡಳಿತ ಮಂಡಳಿ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ, ‘ಈವರೆಗೆ ದೀರ್ಘಾವಧಿ ಠೇವಣಿ ಇರಿಸಲಾಗುತ್ತಿತ್ತು. ಹೀಗಾಗಿ ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಆಧಾರದಲ್ಲಿ ಬಡ್ಡಿ ಬರುತ್ತಿತ್ತು. ಆದರೆ ಇನ್ನು ಮುಂದೆ ಮಾಸಿಕ ಠೇವಣಿ ಇರಿಸಲಾಗುತ್ತದೆ. ಇದರಿಂದ ಪ್ರತಿ ತಿಂಗಳೂ ಬಡ್ಡಿ ಸಂದಾಯವಾಗುತ್ತದೆ. ಇದೇ ಹಣವನ್ನು ವೇತನ, ಇತರೆ ಖರ್ಚು ವೆಚ್ಚ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಬಳಸಿಕೊಳ್ಳಲಾಗುವುದು’ ಎಂದರು.

ತಿಮ್ಮಪ್ಪನಿಗೆ ಸುಧಾ ಮೂರ್ತಿ 1 ಕೋಟಿ ರೂ.

ಟಿಟಿಡಿ ಆಡಳಿತ ಮಂಡಳಿ ಸದಸ್ಯೆಯೂ ಆಗಿರುವ ಬೆಂಗಳೂರಿನ ಇಸ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾ ಮೂರ್ತಿ ಅವರು ದೇವಾಲಯಕ್ಕೆ 1 ಕೋಟಿ ರು. ದೇಣಿಗೆ ನೀಡುವ ಘೋಷಣೆ ಮಾಡಿದ್ದಾರೆ. ಈ ಹಣವನ್ನು ದೇಗುಲದ ತ್ಯಾಜ್ಯವನ್ನು ಕಾಂಪೋಸ್ಟ್‌ ಗೊಬ್ಬರವನ್ನಾಗಿ ಪರಿವರ್ತಿಸಲು ಬಳಸುವಂತೆ ಅವರು ಕೋರಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದರು.

Follow Us:
Download App:
  • android
  • ios