ತಿರುಪತಿ ತಿರುಮಲ ದೇಗುಲದಲ್ಲಿ ಕಾರ್ಯನಿರ್ವಹಿಸುತ್ತಿರುವ 18 ಹಿಂದೂಯೇತರ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಟಿಟಿಡಿ ಮುಂದಾಗಿದೆ. ಧಾರ್ಮಿಕ ಚಟುವಟಿಕೆಗಳ ಪಾವಿತ್ರ್ಯ ಕಾಪಾಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ತಿರುಪತಿ (ಫೆ.6): ತಿರುಪತಿ ತಿರುಮಲ ದೇಗುಲದ ಉಸ್ತುವಾರಿ ಹೊತ್ತಿರುವ ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 18 ಹಿಂದೂಯೇತರ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಟಿಟಿಡಿ, ಒಂದೋ ಸರ್ಕಾರದ ಬೇರೆ ಇಲಾಖೆಗೆ ವರ್ಗಾವಣೆ ಪಡೆದುಕೊಳ್ಳಿ ಅಥವಾ ಸ್ವಯಂ ನಿವೃತ್ತಿ ಪಡೆಯಿರಿ ಎಂದು ಸೂಚಿಸಿದೆ. ದೇವಾಲಯದ ಧಾರ್ಮಿಕ ಚಟುವಟಿಕೆಗಳ ಪಾವಿತ್ರ್ಯ ಕಾಪಾಡುವ ಬದ್ಧತೆಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿರುಪತಿ ತಿರುಮಲ ದೇಗುಲ ಮಂಡಳಿ ತಿಳಿಸಿದೆ. ಈ ಹಿಂದೆ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನ್ಯಮತೀಯರಿಗೂ ದೇಗುಲದಲ್ಲಿ ಕೆಲಸಕ್ಕೆ ಅವಕಾಶ ನೀಡಲಾಗಿತ್ತು. ಆದರೆ 2024ರ ಜೂನ್‌ನಲ್ಲಿ ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದ ಬಳಿಕ ಈ ಕ್ರಮವನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಹೊಸ ಆಡಳಿತ ಮಂಡಳಿ ರಚನೆಯನ್ನೂ ಮಾಡಲಾಗಿತ್ತು. ಟಿಟಿಡಿಯ ಈ ನಿರ್ಧಾರಕ್ಕೆ ಸಂಸದ ಓವೈಸಿ ಕಿಡಿಕಿಡಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ, ಟಿಟಿಡಿ ಹೊಸ ಆದೇಶ ಹೊರಡಿಸಿದೆ. ದೇವಸ್ಥಾನದ ಉತ್ಸವಗಳು ಮತ್ತು ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರ ವಿರುದ್ಧ 18 ಜನರ ಮೇಲೆ ಶಿಸ್ತುಕ್ರಮಕ್ಕೆ ಆದೇಶ ನೀಡಲಾಗಿದೆ.
ಫೆಬ್ರವರಿ 1 ರಂದು ನೋಟಿಸ್ ನೀಡಲಾಗಿದ್ದು, ಬುಧವಾರ ಇದು ಬೆಳಕಿಗೆ ಬಂದಿದೆ.ಕಳೆದ ನವೆಂಬರ್‌ನಲ್ಲಿ ಟಿಟಿಡಿ ಟ್ರಸ್ಟ್ ಮಂಡಳಿಯು ಅಂಗೀಕರಿಸಿದ ನಿರ್ಣಯ ಮತ್ತು ಹಿಂದೂಯೇತರ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಾದಿಸುತ್ತಿರುವ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಮಾತಿಗೆ ಬದ್ಧವಾಗಿದೆ. ಟಿಟಿಡಿಯಲ್ಲಿನ ಹಿಂದೂಯೇತರ ಸಿಬ್ಬಂದಿಗೆ ವಿಆರ್‌ಎಸ್ ನೀಡುವುದು ಹಾಗೂ ಅವರನ್ನು ಇತರ ಸರ್ಕಾರಿ ಇಲಾಖೆಗೆ ಒಪ್ಪಿಸಬೇಕು ಎಂದು ಅವರು ತಿಳಿಸಿದ್ದರು. ಆದರೆ, ಹಿಂದೂಯೇತರ ಸಿಬ್ಬಂದಿಯ ವಿರುದ್ಧ ತೆಗೆದುಕೊಳ್ಳಲಾಗುವ ಶಿಕ್ಷೆ ಅಥವಾ ಶಿಸ್ತು ಕ್ರಮದ ಬಗ್ಗೆ ನೋಟಿಸ್ ಯಾವುದೇ ಸ್ಪಷ್ಟತೆ ನೀಡಿಲ್ಲ.
ತಿರುಪತಿ ದೇವಸ್ಥಾನದ 18 ಹಿಂದುಯೇತರ ನೌಕರರ ಕಿತ್ತೆಸೆದ ಆಂಧ್ರ ಸರ್ಕಾರ
ಈ 18 ಹಿಂದೂಯೇತರ ಸಿಬ್ಬಂದಿಗಳಲ್ಲಿ ತಿರುಮಲ ಟ್ರಸ್ಟ್ ಮಂಡಳಿಯು ನಡೆಸುವ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು, ನರ್ಸ್‌ಗಳು ಮತ್ತು ಇತರ ಸಿಬ್ಬಂದಿ ಸೇರಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ, ಟಿಟಿಡಿ ಮಂಡಳಿಯು ಮೊದಲು ಹಿಂದೂಯೇತರ ಸಿಬ್ಬಂದಿಯನ್ನು ಗುರುತಿಸುವ ಮೂಲಕ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಆರಂಭದಲ್ಲಿ, ಟಿಟಿಡಿ ಮಂಡಳಿಯು ಇತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿರುವ 18 ಸಿಬ್ಬಂದಿಯನ್ನು ಗುರುತಿಸಿತು.
ತಿರುಪತಿಯಲ್ಲಿ ವೈಭವದ ರಥಸಪ್ತಮಿ ಆಚರಣೆ!
ಇದಲ್ಲದೆ, ಈ ಉದ್ಯೋಗಿಗಳನ್ನು ದೇವಾಲಯಕ್ಕೆ ಸಂಬಂಧಿಸಿದ ಯಾವುದೇ ಕರ್ತವ್ಯಗಳಿಗೆ, ಯಾವುದೇ ಧಾರ್ಮಿಕ ಮೆರವಣಿಗೆಗಳು, ಕಾರ್ಯಕ್ರಮಗಳು, ಜಾತ್ರೆಗಳು ಅಥವಾ ಟಿಟಿಡಿ ದೇವಾಲಯಗಳ ಉತ್ಸವಗಳಿಗೆ ನಿಯೋಜಿಸಬಾರದು ಎಂದು ಮುಖ್ಯಸ್ಥರಿಗೆ ಸೂಚಿಸಲಾಗಿತ್ತು.
