ತಿರುಪತಿ(ಅ.06): ತಿರುಮಲ ವೆಂಕಟೇಶ್ವರ ದೇವಾಲಯದ ಹುಂಡಿಗೆ ಕಳೆದ ಶನಿವಾರ (ಅ.3) ಒಂದೇ ದಿನ ಬರೋಬ್ಬರಿ 2.14 ಕೋಟಿ ರು. ದೇಣಿಗೆ ಬಂದಿದೆ.
 

ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಿದ್ದ ದೇವಸ್ಥಾನ ಭಕ್ತಾದಿಗಳಿಗೆ ತೆರೆದ ನಂತರದಲ್ಲಿ ಒಂದೇ ದಿನ ಇಷ್ಟೊಂದು ಆದಾಯ ಬಂದಿರುವುದು ಇದೇ ಮೊದಲು ಎಂದು ಸೋಮವಾರ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ) ತಿಳಿಸಿದೆ.

ಲಾಕ್‌ಡೌನ್‌ ಪೂರ್ವದಲ್ಲಿ ಪ್ರತಿನಿತ್ಯ ತಿರುಪತಿ ಹುಂಡಿಗೆ ಸರಾಸರಿ 3 ಕೋಟಿ ರು.ಗೂ ಅಧಿಕ ಹಣ ಬರುತ್ತಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ದೇವಾಲಯವನ್ನು ಜೂನ್‌ 11ರಿಂದ ತೆರೆಯಲಾಗಿದೆ. ಸೆ.6ರಂದು ಹುಂಡಿ ಆದಾಯ 1 ಕೋಟಿ ತಲುಪಿತ್ತು.

ಲಾಕ್‌ಡೌನ್‌ ನಿರ್ಬಂಧಗಳ ತೆರವಿನ ಬಳಿಕ ಸಂದಾಯವಾದ ಅತಿ ಹೆಚ್ಚು ಹುಂಡಿ ಆದಾಯ ಆದಾಗಿತ್ತು. ಬಳಿಕ ಸೆ.9, 10 ಮತ್ತು 13 ಹಾಗೂ 14ರಂದು ಹುಂಡಿಗೆ ಭಕ್ತರಿಂದ 1 ಕೋಟಿ ದೇಣಿಗೆ ಸಂದಾಯವಾಗಿತ್ತು. ಅ.3ರಂದು ದೇವಾಲಯಕ್ಕೆ 20,228 ಭಕ್ತರು ಆಗಮಿಸಿ 2.14 ಕೋಟಿ ದೇಣಿಗೆ ನೀಡಿದ್ದಾರೆ.