Asianet Suvarna News Asianet Suvarna News

ತಿರುಪತಿಯಲ್ಲಿ ಹಿಂದುಯೇತರರ ಪ್ರವೇಶ ನಿಯಮ ಸಡಿಲ: ವಿವಾದ

ತಿರುಪತಿಯಲ್ಲಿ ಹಿಂದುಯೇತರರ ಪ್ರವೇಶ ನಿಯಮ ಸಡಿಲ: ವಿವಾದ| ಹಿಂದುಯೇತರ ಎಂದು ಘೋಷಣೆ ಅಗತ್ಯವಿಲ್ಲ: ಟಿಟಿಡಿ| ನಾಯ್ಡು ಆಕ್ಷೇಪ, ‘ವಿಶೇಷ ಸಂದರ್ಭದಲ್ಲಿ ಮಾತ್ರ ಅನಗತ್ಯ’

Tirupati Balaji temple reverts its own Rule for non Hindu Visitors pod
Author
Bangalore, First Published Sep 21, 2020, 10:40 AM IST

ತಿರು​ಪ​ತಿ(ಸೆ.21): ತಿರುಮಲದ ವೆಂಕ​ಟೇ​ಶ್ವರ ದೇವ​ಸ್ಥಾ​ನಕ್ಕೆ ಆಗ​ಮಿ​ಸುವ ಹಿಂದು​ಯೇ​ತರ ಭಕ್ತರು ಪ್ರವೇ​ಶದ ವೇಳೆ, ‘ನಮ್ಮ ಧರ್ಮ ಇಂಥದ್ದು ಹಾಗೂ ತಿಮ್ಮ​ಪ್ಪ​ನಲ್ಲಿ ನಮಗೆ ನಂಬಿಕೆ ಇದೆ’ ಎಂಬ ಘೋಷಣೆ ಮಾಡಿ​ಕೊ​ಳ್ಳ​ಬೇಕು ಎಂಬ ನಿಯ​ಮ​ವನ್ನು ಸಡಿ​ಲಿ​ಸುವ ನಿರ್ಧಾ​ರ​ವನ್ನು ದೇವ​ಸ್ಥಾ​ನದ ಆಡ​ಳಿತ ಮಂಡ​ಳಿ​ಯಾದ ಟಿಟಿಡಿ ಪ್ರಕ​ಟಿ​ಸಿ​ರು​ವು​ದು ವಿವಾ​ದ​ಕ್ಕೀ​ಡಾ​ಗಿ​ದೆ.

ಈ ಬಗ್ಗೆ ಹೇಳಿಕೆ ನೀಡಿರುವ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ​ರೆಡ್ಡಿ, ‘ದೇ​ವ​ಸ್ಥಾ​ನಕ್ಕೆ ಆಗ​ಮಿ​ಸು​ವ​ವರು ತಮ್ಮ ಧರ್ಮ ಹಾಗೂ ದೇವ​ರ​ಲ್ಲಿನ ನಂಬಿ​ಕೆ​ಯನ್ನು ಘೋಷಿ​ಸಿ​ಕೊ​ಳ್ಳುವ ಅಗ​ತ್ಯ​ವಿ​ಲ್ಲ’ ಎಂದಿ​ದ್ದಾರೆ. ಇವರ ಹೇಳಿಕೆಗೆ ತೆಲು​ಗು​ದೇಶಂ ಅಧ್ಯಕ್ಷ ಚಂದ್ರ​ಬಾಬು ನಾಯ್ಡು ತೀವ್ರ ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ಅನ್ಯ​ಧ​ರ್ಮೀ​ಯ​ರಾದ ಮುಖ್ಯ​ಮಂತ್ರಿ ವೈ.ಎಸ್‌. ಜಗ​ನ್ಮೋ​ಹನ ರೆಡ್ಡಿ ಶೀಘ್ರ​ದಲ್ಲೇ ದೇವ​ಸ್ಥಾ​ನಕ್ಕೆ ಭೇಟಿ ನೀಡುವ ಕಾರ‍್ಯ​ಕ್ರಮ ಇದ್ದು, ಅದ​ಕ್ಕಿಂತ ಮೊದ​ಲಿಗೆ ಈ ನಿರ್ಧಾರ ಕೈಗೊ​ಳ್ಳ​ಲಾ​ಗಿದೆ ಎಂಬುದು ಗಮ​ನಾ​ರ್ಹ.

ಆದರೆ ತಮ್ಮ ಹೇಳಿಕೆ ವಿವಾ​ದ​ಕ್ಕೀ​ಡಾ​ಗು​ತ್ತಿ​ದ್ದಂತೆಯೇ ಸುಬ್ಬಾ​ರೆಡ್ಡಿ ಸ್ಪಷ್ಟನೆ ನೀಡಿ​ದ್ದಾರೆ. ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈ​ಸ​ಲಾ​ಗಿದೆ. ಶ್ರೀವಾರಿ ದರ್ಶ​ನ​ಕ್ಕೆಂದು ದೇಗು​ಲಕ್ಕೆ ದಿನಕ್ಕೆ 80 ಸಾವಿ​ರ​ದಿಂದ 1 ಲಕ್ಷ​ ಭಕ್ತರು ಭೇಟಿ ನೀಡು​ತ್ತಾರೆ. ಅಂಥ ಸಂದ​ರ್ಭ​ದಲ್ಲಿ ದೇವ​ಸ್ಥಾನದ ಸಿಬ್ಬಂದಿಗೆ ಧರ್ಮ ಘೋಷ​ಣೆಯ ಅರ್ಜಿ ವಿಲೇ​ವಾರಿ ಮಾಡು​ವುದು ಕಷ್ಟ​ವಾ​ಗು​ತ್ತದೆ. ಹೀಗಾಗಿ ನಾನು ಅಂಥ ಸಂದ​ರ್ಭ​ದಲ್ಲಿ ಧರ್ಮ ಹಾಗೂ ನಂಬಿಕೆ ಘೋಷ​ಣೆಯ ಅಗ​ತ್ಯ​ವಿ​ಲ್ಲ ಎಂದು ಹೇಳಿ​ದ್ದೇ​ನ​ಷ್ಟೇ’ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ನಿಯಮ ಏನು?

ಟಿಟಿಡಿ ನಿಯ​ಮ-136ರ ಪ್ರಕಾರ, ತಿಮ್ಮ​ಪ್ಪನ ದರ್ಶನ ಮಾಡಲು ಕೇವಲ ಹಿಂದೂ​ಗ​ಳಿಗೆ ಮಾತ್ರ ಅವ​ಕಾಶ ನೀಡ​ಲಾ​ಗಿದೆ. ಒಂದು ವೇಳೆ ಹಿಂದೂ​ಯೇ​ತ​ರರು ದರ್ಶನ ಮಾಡ​ಬೇಕು ಎಂದು ಇಚ್ಛಿ​ಸಿ​ದಲ್ಲಿ ಅವರು, ನಿಯಮ 137ರ ಪ್ರಕಾ​ರ ಟಿಟಿ​ಡಿಗೆ ಅರ್ಜಿ​ಯಲ್ಲಿ ‘ನನ್ನ ಧರ್ಮ ಇಂಥದ್ದು. ಮನಃ​ಸಾ​ಕ್ಷಿಗೆ ಅನು​ಗು​ಣ​ವಾಗಿ ನಾನು ತಿಮ್ಮ​ಪ್ಪನ ದರ್ಶ​ನಕ್ಕೆ ಬಂದಿ​ದ್ದೇ​ನೆ’ ಎಂದು ಬರೆದು ಸಲ್ಲಿ​ಸ​ಬೇಕು. ಈ ಅರ್ಜಿ​ಯನ್ನು ಪರಿ​ಶೀ​ಲಿಸಿ ಅವರ ಪ್ರವೇ​ಶಕ್ಕೆ ಟಿಟಿಡಿ ಅನು​ಮತಿ ನೀಡು​ತ್ತ​ದೆ. ವಿದೇ​ಶೀ​ಯರೂ ಇದೇ ರೀತಿ ಅನು​ಮತಿ ಪಡೆ​ಯ​ಬೇ​ಕು.

ಕಲಾಂ ಕೂಡ ಪಾಲಿಸಿದ್ದರು

ಈ ಹಿಂದೆ ಅಂದಿನ ರಾಷ್ಟ್ರ​ಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ದೇಗು​ಲಕ್ಕೆ ಬಂದಾಗ ತಮ್ಮ ಧರ್ಮ ಹಾಗೂ ನಂಬಿಕೆ ಘೋಷಣೆ ಮಾಡಿ​ಕೊಂಡಿ​ದ್ದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದಾ​ಗಲೂ ವಿವಾ​ದ​ವಾ​ಗಿ​ತ್ತು. ಆದರೆ, ‘ಸೋ​ನಿಯಾ ಹಾಗೂ ಅಂದಿನ ಮುಖ್ಯ​ಮಂತ್ರಿ ವೈ.ಎಸ್‌. ರಾಜ​ಶೇ​ಖರರೆಡ್ಡಿ ಇಂಥ ಘೋಷ​ಣೆಗೆ ಸಹಿ ಹಾಕಿ​ರ​ಲಿಲ್ಲ. ಜಗನ್‌ ಕೂಡ ದೇಗು​ಲಕ್ಕೆ ಭೇಟಿ ನೀಡಿದ ಬಳಿ​ಕವೇ ಪ್ರಮಾ​ಣ​ವ​ಚನ ಸ್ವೀಕ​ರಿ​ಸಿ​ದ್ದ​ರು’ ಎಂದು ಸುಬ್ಬಾ​ರೆಡ್ಡಿ ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

‘ಅನ್ಯ ಧರ್ಮೀ​ಯರಿಗೆಂದು ದೇವ​ಸ್ಥಾ​ನದ ಸಂಪ್ರ​ದಾಯ ಮುರಿ​ಯು​ವುದು ಸರಿ​ಯಲ್ಲ. ಸಂಪ್ರ​ದಾಯ ಮರಿ​ದರೆ ಈ ಭೂಮಿಗೆ ಕೇಡು ಬಗೆ​ದಂತೆ’ ಎಂದು ಚಂದ್ರ​ಬಾಬು ನಾಯ್ಡು ಕಿಡಿ​ಕಾ​ರಿ​ದ್ದಾರೆ. ಈ ಮೂಲಕ ಅನ್ಯ​ಧ​ರ್ಮೀ​ಯ​ರಾದ ಮುಖ್ಯ​ಮಂತ್ರಿ ವೈ.ಎಸ್‌. ಜಗ​ನ್ಮೋ​ಹನ ರೆಡ್ಡಿ ಅವರ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

Follow Us:
Download App:
  • android
  • ios