ತಿರುಪತಿಗೆ ಜನವೋ ಜನ: ತಿಂಗಳಲ್ಲಿ 98 ಕೋಟಿ ಕಾಣಿಕೆ| ಪ್ರತಿನಿತ್ಯ 40 ಸಾವಿರಕ್ಕೂ ಹೆಚ್ಚು ಭಕ್ತರ ಭೇಟಿ| ಕಳೆದ ವರ್ಷಕ್ಕಿಂತಲೂ ಹೆಚ್ಚು ಕಾಣಿಕೆ ಸಂಗ್ರಹ
ತಿರುಪತಿ(ಫೆ.11): ಕೊರೋನಾ ಲಾಕ್‌ಡೌನ್ ವಿರಾಮದ ಬಳಿಕ ಭಕ್ತರಿಗೆ ಮುಕ್ತವಾಗಿರುವ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭಕ್ತರ ಪ್ರವೇಶ ಹಾಗೂ ಆದಾಯ ದಿನೇ ದಿನೇ ಹೆಚ್ಚುತ್ತಿದೆ. ದೇಗುಲದಲ್ಲಿ ಕೊರೋನಾಪೂರ್ವ ವೈಭವ ಮರಳತೊಡಗಿದೆ.
ಕೊರೋನಾ ಪೂರ್ವದಲ್ಲಿ, ಅಂದರೆ 2020ರ ಜನವರಿಯಲ್ಲಿ ದೈನಂದಿನ ಸರಾಸರಿ 2.96 ಕೋಟಿ ರು. ಕಾಣಿಕೆ ದೇಗುಲದಲ್ಲಿ ಸಂಗ್ರಹವಾಗುತ್ತಿತ್ತು. ಆದರೆ ಈ ವರ್ಷದ ಜನವರಿಯಲ್ಲಿ ಹುಂಡಿ ಸಂಗ್ರಹವು ಹಳೆಯ ದಾಖಲೆ ಪುಡಿಗಟ್ಟಿದೆ. ಜನವರಿ ಮಾಹೆಯೊಂದರಲ್ಲೇ ದೈನಂದಿನ ಸರಾಸರಿ 3.15 ಕೋಟಿ ರು. ಸಂಗ್ರಹವಾಗಿದೆ.
2020ರ ಜನವರಿಯಲ್ಲಿ 25.62 ಲಕ್ಷ ಭಕ್ತರು (ನಿತ್ಯದ ಸರಾಸರಿ 82,675) ಇಲ್ಲಿ ಭೇಟಿ ನೀಡಿದ್ದರು. ಆಗ 1 ತಿಂಗಳಲ್ಲಿ ಒಟ್ಟಾರೆ 91.88 ಕೋಟಿ ರು. ಕಾಣಿಕೆ ಸಂಗ್ರಹವಾಗಿತ್ತು. ಆದರೆ, ಈ ವರ್ಷದ ಜನವರಿಯಲ್ಲಿ 12.64 ಲಕ್ಷ ಭಕ್ತರು (ನಿತ್ಯದ ಸರಾಸರಿ 40,804) ಮಾತ್ರ ಭೇಟಿ ನೀಡಿದ್ದಾರೆ. ಆದರೂ ಶ್ರೀವಾರಿ ಹುಂಡಿಯಲ್ಲಿ 97.93 ಕೋಟಿ ರು. ಸಂಗ್ರಹವಾಗಿದೆ. ಭಕ್ತರ ಸಂಖ್ಯೆ ಕಳೆದ ವರ್ಷದ ಜನವರಿಗಿಂತ ಕಮ್ಮಿ ಇದ್ದರೂ ಹುಂಡಿ ಸಂಗ್ರಹ ದಾಖಲೆ ಸ್ಥಾಪಿಸಿರುವುದು ಅಚ್ಚರಿಯ ವಿಚಾರ.
ಇನ್ನು ಫೆಬ್ರವರಿ ಮೊದಲ ವಾರದಲ್ಲಿ ನಿತ್ಯ ಸರಾಸರಿ 47,455 ಭಕ್ತರು ದೇಗುಲಕ್ಕೆ ಬಂದಿದ್ದಾರೆ. ಅವರಿಂದ ನಿತ್ಯ 2.99 ಕೋಟಿ ರು. ಹುಂಡಿಗೆ ಬಂದು ಬಿದ್ದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿತ್ಯ ಸರಾಸರಿ 73,923 ಭಕ್ತರು ಬಂದಿದ್ದರು. ನಿತ್ಯ ಸರಾಸರಿ 2.80 ಕೋಟಿ ರು. ಸಂಗ್ರಹವಾಗಿತ್ತು.
ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ವೇಳೆ ದೇಗುಲಕ್ಕೆ 2 ತಿಂಗಳು ಕಾಲ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಬಳಿಕ ಜೂ.11ರಿಂದ ನಿತ್ಯ 6000 ಜನರಂತೆ ಭಕ್ತರಿಗೆ ಪ್ರವೇಶ ಕಲ್ಪಿಸಲಾಗುತ್ತಿತ್ತು. ಇದೀಗ ಆ ಪ್ರಮಾಣವನ್ನು 50000ಕ್ಕೆ ಏರಿಸಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 11, 2021, 7:36 AM IST