* 2 ಟೀವಿ ಚಾನಲ್‌ ವಿರುದ್ಧ ಕ್ರಮ ಕೈಗೊಳ್ಳದಂತೆ ಸೂಚನೆ* ಸರ್ಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ: ಸುಪ್ರೀಂ* ಯಾವುದು ದೇಶದ್ರೋಹ? ವ್ಯಾಖ್ಯಾನಿಸಲು ಇದು ಸಕಾಲ

ನವದೆಹಲಿ(ಜೂ.01): ‘ಸರ್ಕಾರವನ್ನು ಟೀಕಿಸುವುದು ದೇಶದ್ರೋಹವಾಗುವುದಿಲ್ಲ. ದೇಶದ್ರೋಹ ಅಂದರೆ ಏನು ಎಂಬುದನ್ನು ವ್ಯಾಖ್ಯಾನಿಸಲು ಇದು ಸರಿಯಾದ ಸಮಯ. ಹಾಗೆಯೇ ಪತ್ರಿಕಾ ಸ್ವಾತಂತ್ರ್ಯದಡಿ ಯಾವುದು ದೇಶದ್ರೋಹವಾಗುತ್ತದೆ ಎಂಬುದನ್ನೂ ನಿರ್ಧರಿಸಬೇಕಿದೆ’ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಇಬ್ಬರು ಸಂಸದರ ವಿವಾದಿತ ಭಾಷಣಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ದೇಶದ್ರೋಹದ ಪ್ರಕರಣ ಎದುರಿಸುತ್ತಿರುವ ಆಂಧ್ರದ ಎರಡು ತೆಲುಗು ಸುದ್ದಿ ವಾಹಿನಿಗಳ ವಿರುದ್ಧ ಮುಂದಿನ ಆದೇಶದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆಯೂ ಪೊಲೀಸರಿಗೆ ಸೂಚನೆ ನೀಡಿದೆ.

ವೈಎಸ್‌ಆರ್‌ ಕಾಂಗ್ರೆಸ್‌ ಸಂಸದರಾದ ಕಣುಮೂರಿ ರಾಘು ಹಾಗೂ ರಾಮಕೃಷ್ಣ ರಾಜು ಅವರ ವಿವಾದಿತ ಭಾಷಣವನ್ನು ಪ್ರಸಾರ ಮಾಡಿದ್ದಕ್ಕಾಗಿ ಟಿವಿ5 ಹಾಗೂ ಎಬಿಎನ್‌ ಆಂಧ್ರಜ್ಯೋತಿ ಸುದ್ದಿವಾಹಿನಿಗಳ ವಿರುದ್ಧ ಆಂಧ್ರ ಪೊಲೀಸರು ಭಾರತೀಯ ದಂಡಸಂಹಿತೆಯ ಸೆಕ್ಷನ್‌ 124ಎ ಅಡಿ ದೇಶದ್ರೋಹದ ಕೇಸು ದಾಖಲಿಸಿದ್ದರು. ಇದನ್ನು ರದ್ದುಪಡಿಸಲು ಕೋರಿ ಸುದ್ದಿವಾಹಿನಿಗಳು ಸುಪ್ರೀಂಕೋರ್ಟ್‌ಗೆ ಹೋಗಿದ್ದವು. ಸೋಮವಾರ ಅದರ ವಿಚಾರಣೆಯ ವೇಳೆ ನ್ಯಾ

ಡಿ.ವೈ.ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ, ‘ಐಪಿಸಿ ಸೆಕ್ಷನ್‌ 124ಎ ಹಾಗೂ 153ನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಅಗತ್ಯವಿದೆ. ಅದರಲ್ಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಇವುಗಳ ಬಳಕೆ ಹೇಗಿರಬೇಕೆಂಬುದನ್ನು ನಿರ್ಧರಿಸಬೇಕಿದೆ. ಟೀವಿ ಚಾನಲ್ಲೊಂದು ಏನೋ ಹೇಳಿದಾಕ್ಷಣ ಅದನ್ನು ದೇಶದ್ರೋಹ ಎಂದು ಕರೆಯಲು ಆಗುವುದಿಲ್ಲ’ ಎಂದು ಹೇಳಿತು. ಅಲ್ಲದೆ ಮುಂದಿನ ವಿಚಾರಣೆಯವರೆಗೆ ಸದರಿ ಟೀವಿ ಚಾನಲ್‌ಗಳ ವಿರುದ್ಧ ಹಾಗೂ ಅದರ ಪತ್ರಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿ, ಆಂಧ್ರ ಮತ್ತು ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಲು ಸೂಚಿಸಿ, ವಿಚಾರಣೆಯನ್ನು 4 ವಾರ ಮುಂದೂಡಿತು.