ನವದೆಹಲಿ, (ಜುಲೈ.03): ಚೀನಾದ ಟಿಕ್‌ಟಾಕ್‌ ಆ್ಯಪ್‌ ಅನ್ನು ಭಾರತ ನಿಷೇಧಿಸಿರುವುದರಿಂದ ಟಿಕ್‌ಟಾಕ್‌ನ ಮಾತೃ ಕಂಪನಿ ಬೈಟ್‌ಡ್ಯಾನ್ಸ್‌ಗೆ 45,000 ಕೋಟಿ ರು. (ಸುಮಾರು 6 ಬಿಲಿಯನ್‌ ಡಾಲರ್‌) ನಷ್ಟವಾಗುವ ಸಾಧ್ಯತೆಯಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಟಿಕ್‌ಟಾಕ್‌ ಸೇರಿದಂತೆ 59 ಆ್ಯಪ್‌ಗಳನ್ನು ಭಾರತ ನಿಷೇಧಿಸಿದೆ. ಇವುಗಳ ಪೈಕಿ ಟಿಕ್‌ಟಾಕ್‌ ಭಾರತದಲ್ಲಿ ಅತಿಹೆಚ್ಚು ಬಳಕೆದಾರರನ್ನು (20 ಕೋಟಿಗೂ ಹೆಚ್ಚು) ಹೊಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಬೈಟ್‌ಡ್ಯಾನ್ಸ್‌ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಟಿಕ್‌ಟಾಕ್‌ ಜನಪ್ರಿಯಗೊಳಿಸಲು 7500 ಕೋಟಿ ರು.ಗಿಂತ ಹೆಚ್ಚು ಹೂಡಿಕೆ ಮಾಡಿತ್ತು. ಈಗ ಅದರ ನಿಷೇಧದಿಂದಾಗಿ ಅಷ್ಟೂಹಣ ಬೈಟ್‌ಡ್ಯಾನ್ಸ್‌ಗೆ ನಿವ್ವಳ ನಷ್ಟವಾಗಲಿದೆ.

ಚೀನೀ ಆ್ಯಪ್‌ ನಿಷೇಧದ ಬಳಿಕ ಭಾರತದ ಆ್ಯಪ್‌ಗಳಿಗೆ ಬಂಪರ್‌!

ಅಚ್ಚರಿಯ ಸಂಗತಿಯೆಂದರೆ ಟಿಕ್‌ಟಾಕ್‌ಗೆ ಭಾರತದ ಮಾರುಕಟ್ಟೆಯೇ ಅತಿದೊಡ್ಡ ಮಾರುಕಟ್ಟೆಯೇನೂ ಅಲ್ಲ. ಹಲವು ದೊಡ್ಡ ಮಾರುಕಟ್ಟೆಗಳಲ್ಲಿ ಟಿಕ್‌ಟಾಕ್‌ಗೆ ಭಾರತವೂ ಒಂದಾಗಿತ್ತು.

ಆದರೂ, ಭಾರತ ಸರ್ಕಾರ ನಿಷೇಧಿಸಿರುವ ಇನ್ನೆಲ್ಲಾ ಆ್ಯಪ್‌ಗಳಿಗೆ ಉಂಟಾದ ಒಟ್ಟು ನಷ್ಟದಷ್ಟುಮೊತ್ತದ ನಷ್ಟಟಿಕ್‌ಟಾಕ್‌ನ ಬೈಟ್‌ಡ್ಯಾನ್ಸ್‌ ಕಂಪನಿಯೊಂದಕ್ಕೇ ಆಗುತ್ತಿದೆ. ಇದು ಬೈಟ್‌ಡ್ಯಾನ್ಸ್‌ನ ವ್ಯವಹಾರಕ್ಕೆ ಬಹುದೊಡ್ಡ ಹೊಡೆತ ನೀಡಿದೆ ಎಂದು ಹೇಳಲಾಗುತ್ತಿದೆ.