Asianet Suvarna News Asianet Suvarna News

ಪೋಷಕರೇ ಹುಷಾರ್‌.. ಬಂದಿದೆ ಮಕ್ಕಳ ಜೀವ ತೆಗೆಯೋ ಆಟ!

ಪೋಷಕರೇ ಹುಷಾರ್‌.. ಬಂದಿದೆ ಮಕ್ಕಳ ಜೀವ ತೆಗೆಯೋ ಆಟ!| ಮೂವರು ಜಿಗಿದು ಒಬ್ಬನನ್ನು ದಿಢೀರ್‌ ಬೀಳಿಸುವ ಆಟ| ಆನ್‌ಲೈನ್‌ನಲ್ಲಿ ‘ಸ್ಕಲ್‌ ಬ್ರೇಕರ್‌’ ಜನಪ್ರಿಯ| ಪೋಷಕರು, ಶಿಕ್ಷಕರ ಆತಂಕ

TikTok latest viral challenge Skullbreaker will leave you with broken bones
Author
Bangalore, First Published Feb 16, 2020, 1:26 PM IST

ನವದೆಹಲಿ[ಫೆ.16]: ಈ ಹಿಂದೆ ಕೀಕಿ, ಬ್ಲೂವೇಲ್‌ ಹಾಗೂ ಮೋಮೋ ಚಾಲೆಂಜ್‌ ಎಂಬ ಅಪಾಯಕಾರಿ ಆಟಗಳು ಆನ್‌ಲೈನ್‌ನಲ್ಲಿ ಸದ್ದು ಮಾಡಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದವು. ಇದಕ್ಕೆ ಈಗ ಹೊಸ ಸೇರ್ಪಡೆ ‘ಟ್ರಿಪ್ಪಿಂಗ್‌ ಜಂಪ್‌’ ಅಥವಾ ‘ಸ್ಕಲ್‌ ಬ್ರೇಕರ್‌ ಚಾಲೆಂಜ್‌’.

ಸ್ಕಲ್‌ ಬ್ರೇಕರ್‌ ಚಾಲೆಂಜ್‌ ಎಂಬ ಈ ಆಟ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮತ್ತು ಟಿಕ್‌ಟಾಕ್‌, ಫೇಸ್‌ಬುಕ್‌, ಟ್ವೀಟರ್‌ ಹಾಗೂ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗತೊಡಗಿದೆ. ಹೆಸರೇ ಹೇಳುವಂತೆ ಇದು ‘ತಲೆ ಬುರುಡೆ ಒಡೆಯುವ’ ಸವಾಲಿನ ಆಟ. ಹೀಗಾಗಿ ಮಕ್ಕಳ ಜೀವ ತೆಗೆಯಬಹುದಾದ ಈ ಸವಾಲಿನ ಆಟದ ಬಗ್ಗೆ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಈ ಆಟ ಆಡಿ ಈಗಾಗಲೇ ಅನೇಕರ ತಲೆಬುರುಡೆ ಹಾಗೂ ಭುಜಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ವರದಿಯಾಗಿದೆ. ಇದರ ಬೆನ್ನಲ್ಲೇ ಪೊಲೀಸರು, ವೈದ್ಯರು ಹಾಗೂ ಶಾಲೆಯ ಪ್ರಾಚಾರ್ಯರು ಮಕ್ಕಳಿಗೆ ಈ ಆಟದ ವಿರುದ್ಧ ಎಚ್ಚರಿಕೆಯ ಸಂದೇಶ ನೀಡತೊಡಗಿದ್ದಾರೆ.

ಇಬ್ಬರು ಸೇರಿ ಒಬ್ಬನನ್ನು ಬೀಳಿಸುವ ಆಟ, ಮೂವರು ಮಕ್ಕಳು ಸೇರಿ ಆಡುವ ಆಟವೇ ‘ಸ್ಕಲ್‌ ಬ್ರೇಕರ್‌ ಚಾಲೆಂಜ್‌’

ಮೂರೂ ಮಕ್ಕಳು ಅಕ್ಕಪಕ್ಕ ನಿಲ್ಲುತ್ತಾರೆ. ಮೊದಲು ಅಕ್ಕ-ಪಕ್ಕದ ಇಬ್ಬರೂ ಮಕ್ಕಳು ಜಿಗಿಯಲು ಆರಂಭಿಸುತ್ತಾರೆ. ನಂತರ ಮಧ್ಯದಲ್ಲಿರುವವನು ಜಿಗಿಯಲು ಆರಂಭಿಸುತ್ತಾನೆ. ಹೀಗೆ ಮೂವರೂ ಏಕಕಾಲಕ್ಕೆ ಜಂಪ್‌ ಮಾಡುತ್ತಿರುವಾಗ ಅಕ್ಕ-ಪಕ್ಕದಲ್ಲಿರುವವರು, ಮಧ್ಯದವನ ಕಾಲಿಗೆ ಒದ್ದು ತೊಡರುಗಾಲು ಹಾಕುತ್ತಾರೆ. ಆಗ ಮಧ್ಯದಲ್ಲಿರುವವನು ಕೆಳಕ್ಕೆ ಬಿದ್ದು, ಆತನ ತಲೆ ಅಥವಾ ಭುಜ ನೆಲಕ್ಕೆ ರಭಸವಾಗಿ ತಾಗುವ ಸಾಧ್ಯತೆ ಇರುತ್ತದೆ. ಹೀಗಾದಲ್ಲಿ ತಲೆಬುರುಡೆಗೆ ಪೆಟ್ಟಾಗಬಹುದು. ಮರಣವೂ ಸಂಭವಿಸಬಹುದು. ಇದೇ ‘ಸ್ಕಲ್‌ ಬ್ರೇಕರ್‌ ಚಾಲೆಂಜ್‌’.

ಈಗಾಗಲೇ ಅನೇಕ ವಿದ್ಯಾರ್ಥಿಗಳು ಈ ಆಟವನ್ನು ಆಡಿ, ಇದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದು, ಅದನ್ನು ಟಿಕ್‌ಟಾಕ್‌, ಫೇಸ್‌ಬುಕ್‌, ಟ್ವೀಟರ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಹರಿಬಿಡುತ್ತಿದ್ದಾರೆ. ತನ್ಮೂಲಕ ಇತರರು ಆಡಲು ಪ್ರೇರಣೆ ನೀಡುತ್ತಿದ್ದಾರೆ.

ಸ್ಪೇನ್‌ ಮೂಲದ ಡೇಂಜರ್‌ ಗೇಮ್‌

ಸ್ಕಲ್‌ ಬ್ರೇಕರ್‌ ಚಾಲೆಂಜ್‌ ಉಗಮವಾಗಿದ್ದು ಸ್ಪೇನ್‌ನಲ್ಲಿ. ‘ರಾಂಪ್‌ಕ್ರೆನೋಸ್‌’ ಎಂದು ಸ್ಪ್ಯಾನಿಷ್‌ ಭಾಷೆಯಲ್ಲಿ ಇದನ್ನು ಕರೆಯುತ್ತಾರೆ. ಈ ಪದದ ಇಂಗ್ಲಿಷ್‌ ಅರ್ಥ ‘ಸ್ಕಲ್‌ ಬ್ರೇಕರ್‌’ ಎಂದು. ಈಗ ಈ ಆಟ ವಿಶ್ವದೆಲ್ಲೆಡೆ ಹರಡತೊಡಗಿದೆ.

ಆಟ ನಿಷೇಧಿಸಲು ಪೋಷಕರ ಬೇಡಿಕೆ

‘ಮಕ್ಕಳು ಇಂದು ಮೊಬೈಲ್‌ನಲ್ಲಿ ಚುರುಕಾಗಿರುತ್ತಾರೆ. ಮೊಬೈಲ್‌ನಲ್ಲಿ ಏನೇನೋ ವಿಡಿಯೋಗಳನ್ನು ನೋಡುತ್ತಿರುತ್ತಾರೆ. ಅಂಥದ್ದರಲ್ಲಿ ಸ್ಕಲ್‌ ಬ್ರೇಕರ್‌ನಂಥ ಆಟ ನೋಡಿ ಪ್ರಭಾವಗೊಂಡರೆ ಅದು ಆತಂಕಕಾರಿ. ಇದಕ್ಕೆ ನಿಷೇಧ ಹೇರಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ. ಈ ಆಟವು ಅತಿ ಅಪಾಯಕಾರಿ. ಇದರಿಂದ ದೇಹದ ಕೀಲುಗಳು, ಮಂಡಿ, ಬೆನ್ನು, ಸೊಂಟ, ತಲೆಬುರುಡೆ ಹಾಗೂ ಭುಜಕ್ಕೆ ಹಾನಿಯಾಗಬಹುದು. ಜೋರಾಗಿ ಪೆಟ್ಟು ಬಿದ್ದರೆ ಮರಣವೂ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಇನ್ನು ಹಲವು ಶಾಲೆಗಳ ಪ್ರಾಚಾರ್ಯರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಮಕ್ಕಳಿಗೆ ಈ ಆಟದ ವಿರುದ್ಧ ಜಾಗೃತಿ ಮೂಡಿಸಲು ಯತ್ನಿಸಲಾಗುವುದು’ ಎಂದು ಹೇಳಿದ್ದಾರೆ. ಪೊಲೀಸರು ಈ ಆಟದ ವಿರುದ್ಧ ಅನೇಕ ದೇಶಗಳಲ್ಲಿ ಸಮರ ಸಾರಿದ್ದು, ಇದನ್ನು ಉತ್ತೇಜಿಸುವವರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios