ಇಂದಿನಿಂದ 4 ದಿನ ಲಸಿಕಾ ಉತ್ಸವ: ಕೊರೋನಾ ವಿರುದ್ಧ ಹೋರಾಟಕ್ಕೆ ಪಣ!
ಇಂದಿನಿಂದ 4 ದಿನ ಲಸಿಕಾ ಉತ್ಸವ| ಕೊರೋನಾ ವಿರುದ್ಧ ಹೋರಾಟಕ್ಕೆ ಪಣ| ಮೋದಿ ಕರೆ ನೀಡಿದಂತೆ ಉತ್ಸವಕ್ಕೆ ಸಿದ್ಧತೆ| ಹೆಚ್ಚು ಜನರಿಗೆ ಲಸಿಕೆ ಕೊಡಿಸಲು ನಿರ್ಧಾರ| ಅನೇಕ ರಾಜ್ಯಗಳಿಂದ ಪೂರ್ವಸಿದ್ಧತೆ ಪ್ರಗತಿಯಲ್ಲಿ
ನವದೆಹಲಿ(ಏ.11): ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಲಸಿಕಾ ಉತ್ಸವ’ ಭಾನುವಾರದಿಂದ ಬುಧವಾರದವರೆಗೆ ದೇಶಾದ್ಯಂತ ನಡೆಯಲಿದೆ.
‘ಲಸಿಕಾಕರಣ ತೀವ್ರಗೊಳಿಸಿ ಕೊರೋನಾ ನಿರ್ಮೂಲನೆ ಮಾಡಬೇಕು. ಏಪ್ರಿಲ್ 11ರಿಂದ 14ರವರೆಗೆ 4 ದಿನ ‘ಲಸಿಕಾ ಉತ್ಸವ’ವನ್ನು ದೇಶದಲ್ಲಿ ಆಚರಿಸಬೇಕು. ಲಸಿಕೆ ಪಡೆಯಲು ಅರ್ಹರಾಗಿರುವ 45 ವರ್ಷ ಮೇಲ್ಪಟ್ಟಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕಾ ಕೇಂದ್ರಗಳಿಗೆ ಕರೆತಂದು ಚುಚ್ಚುಮದ್ದು ಕೊಡಿಸಬೇಕು’ ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಮನವಿ ಮಾಡಿದ್ದ ಮೋದಿ ಮನವಿ ಮಾಡಿದ್ದರು.
ಇದಕ್ಕೆ ಓಗೊಟ್ಟಿರುವ ರಾಜ್ಯಗಳು ಅಂದು ಲಸಿಕಾ ಉತ್ಸವಕ್ಕೆ ಸಿದ್ಧತೆ ಆರಂಭಿಸಿವೆ. ಆಂಧ್ರಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ 4 ದಿನದ ಅವಧಿಯಲ್ಲಿ ತಲಾ 25 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಲಸಿಕಾ ಕೇಂದ್ರಗಳನ್ನು 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಇನ್ನು ಗೋವಾದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಲಸಿಕೆ ನೀಡಿಕೆ ಅಭಿಯಾನ ನಡೆಸಲಾಗುತ್ತದೆ. ಇದೇ ರೀತಿ ಅನೇಕ ಸಂಸದರು, ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಲಸಿಕೆ ಕೇಂದ್ರಗಳಿಗೆ ಕರೆತಂದು ಉತ್ಸವದ ಯಶಸ್ಸಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಆದರೂ, ಹಲವು ರಾಜ್ಯಗಳು ಲಸಿಕೆ ಕೊರತೆ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಿವೆ. ಹೀಗಾಗಿ ಲಸಿಕಾ ಉತ್ಸವದ ಯಶಸ್ಸಿಗೆ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಲಸಿಕೆ ಪೂರೈಸಲಿದೆ ಎಂಬುದನ್ನು ಕಾದು ನೋಡಬೇಕಿದೆ.