ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3ನೇ ಸ್ಥಾನ!

ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3| ಉತ್ತರಾಖಂಡದ ಕಾರ್ಬೆಟ್‌ಗೆ ಪ್ರಥಮ ಸ್ಥಾನ| 2 ಹುಲಿಗಳ ಕೊರತೆಯಿಂದ ನಂ.1 ಪಟ್ಟತಪ್ಪಿಸಿಕೊಂಡ ಕರ್ನಾಟಕ

Tiger headcount in Karnataka highest in Bandipur Nagarahole

ನವದೆಹಲಿ(ಜು.29): ಹುಲಿ ಗಣತಿ ಮುಗಿದ 1 ವರ್ಷದ ನಂತರ ಅದರ ವಿಸ್ತೃತ ವರದಿ ಪ್ರಕಟಗೊಂಡಿದೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕದ ನಾಗರಹೊಳೆ ಅಭಯಾರಣ್ಯ ದೇಶದಲ್ಲೇ 2ನೇ ಸ್ಥಾನ ಹಾಗೂ ಬಂಡೀಪುರ 3ನೇ ಸ್ಥಾನ ಪಡೆದಿವೆ. ಉತ್ತರಾಖಂಡದ ಕಾರ್ಬೆಟ್‌ ಹುಲಿ ರಕ್ಷಿತಾರಣ್ಯ ಭಾರತದ ನಂ.1 ಹುಲಿ ಆವಾಸಸ್ಥಾನ ಎನ್ನಿಸಿಕೊಂಡಿದೆ. ಇದೇ ವೇಳೆ, ರಾಜ್ಯವಾರು ಸಂಖ್ಯೆ ಗಮನಿಸಿದಾಗ ದೇಶದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ ರಾಜ್ಯ ಮಧ್ಯಪ್ರದೇಶ (526)ವಾಗಿದ್ದು, ನಂತರದ ಸ್ಥಾನವನ್ನು ಕರ್ನಾಟಕ (524) ಪಡೆದಿದೆ. ಕೇವಲ 2 ಹುಲಿಗಳ ಕೊರತೆಯಿಂದ ಕರ್ನಾಟಕ ನಂ.1 ಪಟ್ಟತಪ್ಪಿಸಿಕೊಂಡಿದೆ.

ಬುಧವಾರ (ಜುಲೈ 29) ವಿಶ್ವ ಹುಲಿ ದಿನಾಚರಣೆ ಇದೆ. ಈ ನಿಮಿತ್ತ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಮಂಗಳವಾರ 4ನೇ ‘ಅಖಿಲ ಭಾರತ ಹುಲಿ ಅಂದಾಜು-2018’ ಹೆಸರಿನ 600 ಪುಟಗಳ ವರದಿ ಬಿಡುಗಡೆ ಮಾಡಿದರು. ಇದರಲ್ಲಿ ರಾಜ್ಯವಾರು ಹುಲಿಗಳ ಅಂಕಿ- ಅಂಶವಿದೆ. ದೇಶದಲ್ಲಿ ಈಗ ಹುಲಿ ರಕ್ಷಿತಾರಣ್ಯಗಳಲ್ಲಿ 1923 ಹುಲಿಗಳಿವೆ. ಇದು ದೇಶದ ಒಟ್ಟಾರೆ ಹುಲಿಗಳ ಸಂಖ್ಯೆಯ ಶೇ.65ರಷ್ಟಾಗಿದೆ.

ಎಲ್ಲಿ ಎಷ್ಟು ಹುಲಿ?:

ಉತ್ತರಾಖಂಡದ ಕಾರ್ಬೆಟ್‌ ಅರಣ್ಯದಲ್ಲಿ 231 ಹುಲಿಗಳು ಇದ್ದು, ದೇಶದಲ್ಲೇ ಅತಿ ಹೆಚ್ಚು ಹುಲಿಗಳ ತಾಣ ಎನ್ನಿಸಿಕೊಂಡಿದೆ. 2ನೇ ಸ್ಥಾನದಲ್ಲಿ ಕರ್ನಾಟಕದ ನಾಗರಹೊಳೆ (127 ಹುಲಿ) ಹಾಗೂ ಬಂಡೀಪುರ (126) ಇವೆ. ಅಸ್ಸಾಂನ ಕಾಜಿರಂಗಾ ಹಾಗೂ ಮಧ್ಯಪ್ರದೇಶದ ಬಾಂಧವಗಢ ಅರಣ್ಯದಲ್ಲಿ ತಲಾ 104 ಹುಲಿಗಳಿವೆ.

ಅಣಶಿಯಲ್ಲಿ ಇಳಿಕೆ:

ಆದರೆ ಕರ್ನಾಟಕದ ಅಣಶಿ- ದಾಂಡೇಲಿ ಅಭಯಾರಣ್ಯ, ಒಡಿಶಾದ ಸಿಮಿಲಿಪಾಲ್‌, ಆಂಧ್ರಪ್ರದೇಶದ ಶ್ರೀಶೈಲ, ತೆಲಂಗಾಣದ ಕಾವಾಲ್‌ ಹಾಗೂ ಆದಿಲಾಬಾದ್‌, ಜಾರ್ಖಂಡ್‌ನ ಪಲಾಮು, ಮಧ್ಯಪ್ರದೇಶದ ಸಂಜಯ್‌ ಡುಬ್ರಿ, ಅಸ್ಸಾಂನ ನಮೇರಿ ಹಾಗೂ ಮನಾಸ್‌, ಪ.ಬಂಗಾಳದ ಬುಕ್ಸಾ, ಮಿಜೋರಂನ ಡಂಪಾ, ಅರುಣಾಚಲ ಪ್ರದೇಶದ ಪಕ್ಕೆಯಲ್ಲಿ ಎಷ್ಟುಹುಲಿ ಇರಬಹುದು ಎಂದು ಅಂದಾಜಿಸಲಾಗಿತ್ತೋ ಅದಕ್ಕಿಂತ ಕಡಿಮೆ ಹುಲಿಗಳು ಕಂಡುಬಂದಿವೆ. ‘ಅರ್ಥಾತ್‌ ಇಲ್ಲಿ ಹುಲಿಗಳ ಸಂಖ್ಯೆ ಕುಸಿತಗೊಂಡಿದೆ. ಹೀಗಾಗಿ ಹುಲಿ ಸಂರಕ್ಷಣೆಗೆ ಹೆಚ್ಚಿನ ಕೆಲಸ ಇಲ್ಲಿ ಆಗಬೇಕಿದೆ ಎಂದರ್ಥ’ ಎಂದು ವರದಿ ಹೇಳಿದೆ.

ರಕ್ಷಿತಾರಣ್ಯಗಳಲ್ಲಿ..

ಸ್ಥಾನ| ರಕ್ಷಿತಾರಣ್ಯ| ಹುಲಿ ಸಂಖ್ಯೆ

1. ಕಾರ್ಬೆಟ್‌ 231

2. ನಾಗರಹೊಳೆ 127

3. ಬಂಡೀಪುರ 126

ರಾಜ್ಯವಾರು ಹುಲಿ ಸಂಖ್ಯೆ

ಸ್ಥಾನ| ರಾಜ್ಯ| ಹುಲಿ ಸಂಖ್ಯೆ

1. ಮಧ್ಯಪ್ರದೇಶ 526

2. ಕರ್ನಾಟಕ 524

3. ಉತ್ತರಾಖಂಡ 442

ರಾಜ್ಯವಾರು ಹುಲಿ- ಕರ್ನಾಟಕ ನಂ.2:

ರಾಜ್ಯವಾರು ಹುಲಿ ಸಂಖ್ಯೆ ಗಮನಿಸಿದಾಗ ಮಧ್ಯಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ಹುಲಿಗಳಿವೆ. ಇಲ್ಲಿನ ಹುಲಿಗಳ ಸಂಖ್ಯೆ 526. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದ್ದು, ಹುಲಿಗಳ ಸಂಖ್ಯೆ 524. ಈ ಮೂಲಕ ಕೇವಲ 2 ಹುಲಿಗಳ ಕೊರತೆಯ ಮೂಲಕ ಮೊದಲ ಸ್ಥಾನವನ್ನು ಕೂದಲೆಳೆ ಅಂತರದಲ್ಲಿ ‘ಮಿಸ್‌’ ಮಾಡಿಕೊಂಡಿದೆ.

3ನೇ ಸ್ಥಾನದಲ್ಲಿ ಉತ್ತರಾಖಂಡ ಇದ್ದು ಅಲ್ಲಿನ ಹುಲಿ ಸಂಖ್ಯೆ 442.

ಕಳೆದ ವರ್ಷ ನರೇಂದ್ರ ಮೋದಿ ಅವರು 4 ವರ್ಷಕ್ಕೊಮ್ಮೆ ನಡೆವ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದರು. ಆಗ ಹುಲಿಗಳ ಸಂಖ್ಯೆ 2014ರ 1400ರಷ್ಟಿದ್ದ ಹುಲಿಗಳ ಸಂಖ್ಯೆ 2019ರಲ್ಲಿ 2967ಕ್ಕೇರಿದ್ದು ಕಂಡುಬಂದಿತ್ತು.

Latest Videos
Follow Us:
Download App:
  • android
  • ios