ನಾಗಪುರ[ಡಿ.16]: ‘ಬಿಜೆಪಿ ಮುಂದೆ ಕ್ಷಮೆ ಕೇಳಲು ನಾನೇನೂ ರಾಹುಲ್‌ ಸಾವರ್ಕರ್‌ ಅಲ್ಲ’ ಎಂಬ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆಯು ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಸರ್ಕಾರಕ್ಕೆ ಇಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ. ‘ಸಾವರ್ಕರ್‌ ಅಥವಾ ರಾಹುಲ್‌- ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಸಾವರ್ಕರ್‌ ಅವರ ಮೊಮ್ಮಗ ರಂಜೀತ್‌ ಸಾವರ್ಕರ್‌ ಹಾಗೂ ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ನಾಯಕರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್‌ ಅವರ ಮೊಮ್ಮಗ ರಂಜೀತ್‌ ಸಾವರ್ಕರ್‌, ‘ವೀರ ಸಾವರ್ಕರ್‌ ಅವರನ್ನು ಅವಮಾನಿಸಿದ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ದಾವೆ ಹೂಡುವೆ. ಇದೇ ವಿಚಾರದಲ್ಲಿ ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರವು ಕಾಂಗ್ರೆಸ್‌ ಜತೆಗಿನ ಮೈತ್ರಿ ಕಡಿದುಕೊಳ್ಳಬೇಕು ಎಂದು ಆಗ್ರಹಿಸಿದರು.

‘ಉದ್ಧವ್‌ ಠಾಕ್ರೆ ಅವರನ್ನು ಭೇಟಿ ಮಾಡಿ ಈ ವಿಷಯ ಕುರಿತಂತೆ ಚರ್ಚಿಸುವೆ. ರಾಹುಲ್‌ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುವೆ’ ಎಂದರು.

‘ಶಿವಸೇನೆಯ ಬೆನ್ನೆಲುಬು ಹಿಂದುತ್ವ. ಹೀಗಾಗಿ ಒಂದೋ ತತ್ವವನ್ನು ಶಿವಸೇನೆ ಪಾಲಿಸಬೇಕು ಇಲ್ಲವೇ ಕಾಂಗ್ರೆಸ್‌ ಜತೆಗಿನ ಮೈತ್ರಿಯನ್ನು ಅದು ಕಡಿದುಕೊಳ್ಳಬೇಕು. ಕಾಂಗ್ರೆಸ್‌ ಸಚಿವರನ್ನೂ ಠಾಕ್ರೆ ಅವರು ವಜಾ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ಕಾಂಗ್ರೆಸ್‌ ಜತೆ ಶಿವಸೇನೆ ಮೈತ್ರಿ ಕಡಿದುಕೊಂಡು ಅಲ್ಪಮತದ ಸರ್ಕಾರ ನಡೆಸಬೇಕು. ಬಿಜೆಪಿ ಈ ವಿಚಾರದಲ್ಲಿ ಶಿವಸೇನೆ ವಿರುದ್ಧ ಮತ ಹಾಕದು’ ಎಂದು ರಂಜೀತ್‌ ಅಭಿಪ್ರಾಯಪಟ್ಟರು.

2ರಲ್ಲಿ ಒಂದು ಆಯ್ಕೆ ಮಾಡಿ:

‘ಶಿವಸೇನೆಯು ಒಂದೋ ಸಾವರ್ಕರ್‌ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವೇ ಅಧಿಕಾರಕ್ಕಾಗಿ ಕಾಂಗ್ರೆಸ್ಸನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಶಹನವಾಜ್‌ ಹುಸೇನ್‌ ಆಗ್ರಹಿಸಿದ್ದಾರೆ. ಇದೇ ವೇಳೆ, ‘ಈಗ ಶಿವಸೇನೆಯು ಎಂಥವರ ಜತೆ ಸರ್ಕಾರ ನಡೆಸುತ್ತಿದೆ ಎಂಬುದು ಈಗ ಜಗಜ್ಜಾಹೀರಾಗಿದೆ. ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆಗಾಗಿ ಕ್ಷಮೆ ಕೋರಬೇಕು’ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಒತ್ತಾಯಿಸಿದರು.

ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಈ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟಾರ್ಗೆಟ್‌ ಮಾಡಿದ್ದು, ‘ಸಾವರ್ಕರ್‌ ಅವರನ್ನು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಶಿವಸೇನೆ ಜತೆ ಕಾಂಗ್ರೆಸ್‌ ಏಕೆ ಮೈತ್ರಿ ಮುಂದುವರಿಸಿದೆ?’ ಎಂದು ಪ್ರಶ್ನಿಸಿದ್ದಾರೆ.