ತೂತುಕುಡಿ(ಜೂ.28): ಲಾಕ್‌ಡೌನ್‌ ವೇಳೆಯಲ್ಲಿ ಮೊಬೈಲ್‌ ಅಂಗಡಿ ತೆರೆದಿದ್ದ ವಿಚಾರಕ್ಕೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ್ದಾರೆನ್ನಲಾದ ಹಲ್ಲೆಯಿಂದ ಸಂಭವಿಸಿದ ಅಪ್ಪ-ಮಗನ ಲಾಕಪ್‌ ಡೆತ್‌ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತೂತುಕುಡಿ ಜಿಲ್ಲೆಯ ಸಂತಕುಲಂ ಪಟ್ಟಣದಲ್ಲಿ ಕಳೆದ ವಾರ ಬೆನಿಕ್ಸ್‌ ಎಂಬ 31 ವರ್ಷದ ಯುವಕ ರಾತ್ರಿ 8ರ ವೇಳೆಯಲ್ಲಿ ಮೊಬೈಲ್‌ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ. ಆಗ ಕಫä್ರ್ಯ ಇದ್ದರೂ ಅಂಗಡಿ ಮುಚ್ಚಿಲ್ಲ ಎಂದು ಪೊಲೀಸರು ಪ್ರಶ್ನಿಸಿದ್ದಾರೆನ್ನಲಾಗಿದೆ. ಆ ವೇಳೆ ಪೊಲೀಸರ ಜೊತೆಗೆ ಜಗಳ ನಡೆದಿದ್ದು, ಬೆನಿಕ್ಸ್‌ ಹಾಗೂ ಅಲ್ಲೇ ಇದ್ದ ಆತನ 58 ವರ್ಷದ ತಂದೆ ಜಯರಾಜ್‌ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಮರುದಿನ ಜಯರಾಜ್‌ನನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿ ಮತ್ತೆ ಹಲ್ಲೆ ನಡೆಸಿದ್ದಾರೆ. ಅದನ್ನು ಪ್ರಶ್ನಿಸಲು ಹೋದ ಬೆನಿಕ್ಸ್‌ನನ್ನೂ ಬಂಧಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ನಂತರ ಇಬ್ಬರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಠಾಣೆಯಲ್ಲಿ ಪೊಲೀಸರು ಬೆನಿಕ್ಸ್‌ಗೆ ಲೈಂಗಿಕ ಕಿರುಕುಳ ನೀಡಿ ಪೃಷ್ಠದ ಭಾಗದಲ್ಲಿ ತೀವ್ರ ಹಲ್ಲೆ ನಡೆಸಿದ್ದಾರೆಂದೂ ಆರೋಪಿಸಲಾಗಿದೆ. ತಂದೆ-ಮಗನಿಗೆ 8 ಲುಂಗಿ ಬದಲಿಸಿದರೂ ಎಲ್ಲಾ ಲುಂಗಿಗಳು ರಕ್ತದಿಂದ ತೋಯ್ದುಹೋಗಿದ್ದವು ಎಂದು ಬೆನಿಕ್ಸ್‌ನ ಸ್ನೇಹಿತ ವಕೀಲರು ಹೇಳಿದ್ದಾರೆ.

ಈ ಘಟನೆಗೆ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿ, ಕಳೆದ ಬುಧವಾರ ಇಡೀ ರಾಜ್ಯದಲ್ಲಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರು. ನಂತರ ದೇಶಾದ್ಯಂತ ಈ ಘಟನೆ ಸುದ್ದಿಯಾಗಿದ್ದು, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಅಸಂಖ್ಯಾತರು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್‌ ಹಿಂಸಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆನಿಕ್ಸ್‌ನ ತಂಗಿ ಪರ್ಸಿ ತನ್ನ ತಂದೆ ಹಾಗೂ ಸೋದರನನ್ನು ಪೊಲೀಸರು ಕುತ್ತಿಗೆ ಹಿಡಿದು ನೆಲಕ್ಕೆ ಮಲಗಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾಳೆ. ಇತ್ತೀಚೆಗೆ ಅಮೆರಿಕದ ಮಿನೆಸೋಟಾದಲ್ಲಿ ಜಾಜ್‌ರ್‍ ಫ್ಲಾಯ್ಡ್‌ ಎಂಬ ಕಪ್ಪುವರ್ಣೀಯನನ್ನು ಪೊಲೀಸರು ಈ ರೀತಿ ನೆಲಕ್ಕೆ ಒತ್ತಿ ಹಲ್ಲೆ ನಡೆಸಿ ಆತ ಸಾವನ್ನಪ್ಪಿದ ಘಟನೆ ನಡೆದಿದ್ದು, ಅದರ ವಿರುದ್ಧ ಅಮೆರಿಕದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ತೂತುಕುಡಿಯ ಘಟನೆ ಬಗ್ಗೆ ತಮಿಳುನಾಡು ಹೈಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದೆ. ಈ ಘಟನೆ ತಮಿಳುನಾಡಿನಲ್ಲಿ ರಾಜಕೀಯ ಸಮರಕ್ಕೂ ಕಾರಣವಾಗಿದೆ. ಆಡಳಿತಾರೂಢ ಎಐಎಡಿಎಂಕೆ ಮತ್ತು ಪ್ರತಿಪಕ್ಷ ಡಿಎಂಕೆ ಬೆನಿಕ್ಸ್‌ನ ಕುಟುಂಬಕ್ಕೆ ತಲಾ 25 ಲಕ್ಷ ರು. ನೆರವು ನೀಡಿವೆ. ಸರ್ಕಾರ 10 ಲಕ್ಷ ರು. ನೀಡಿದೆ.