ಜೈಪುರ(ಫೆ.28): ಕಳ್ಳತನ ಮಾಡಿದ ಹಣದಲ್ಲಿ ಮನೆ ಖರೀದಿ ಮಾಡುವುದು ಗೊತ್ತು. ಆದರೆ ರಾಜಸ್ಥಾನದ ಜೈಪುರದಲ್ಲಿ ಕಳ್ಳರ ತಂಡವೊಂದು ಕಳ್ಳತನ ಮಾಡಲೆಂದೇ ಭರ್ಜರಿ 87 ಲಕ್ಷ ರು. ತೆತ್ತು ಮನೆ ಖರೀದಿಸಿದ ಘಟನೆ ನಡೆದಿದೆ. ಅಷ್ಟುಮಾತ್ರವಲ್ಲ ತಮ್ಮ ಗುರಿಯಲ್ಲಿ ಯಶಸ್ವಿಯೂ ಆಗಿರುವ ಕಳ್ಳರ ತಂಡ ತಾವು ಖರೀದಿಸಿದ ಪಕ್ಕದ ಮನೆಗೆ 15 ಅಡಿ ಆಳ ಮತ್ತು 20 ಅಡಿ ಉದ್ದದ ಸುರಂಗ ಕೊರೆದು ಭಾರೀ ಪ್ರಮಾಣದ ಬೆಳ್ಳಿ ಕದ್ದೊಯ್ದಿದ್ದಾರೆ.

ಮನೆಯ ಮಾಲಿಕ ಸುನಿತ್‌ ಸೋನಿ ವೃತ್ತಿಯಲ್ಲಿ ಡಾಕ್ಟರ್‌. ಮನೆಯ ನೆಲಮಾಳಿಗೆಯಲ್ಲಿ 3 ಬಾಕ್ಸ್‌ಗಳಲ್ಲಿ ಅಗಾಧ ಪ್ರಮಾಣದ ಬೆಳ್ಳಿ ಹೂತಿಟ್ಟಿದ್ದರು. ವಿಷಯ ಅರಿತ ಕಳ್ಳರು ಈ ಮನೆಯ ಹಿಂಭಾಗದ ಮನೆಯೊಂದನ್ನು ಕಳೆದ ಜನವರಿಯಲ್ಲಿ 87 ಲಕ್ಷ ರು. ಗೆ ಕೊಂಡುಕೊಂಡಿದ್ದರು. ಬಳಿಕ ತಮ್ಮ ಮನೆ ಯಾರಿಗೂ ಕಾಣದಂತೆ ತಗಡಿನ ಡಬ್ಬಗಳಿಂದ ಮುಚ್ಚಿ, ಯಾರೊಬ್ಬರಿಗೂ ಸುಳಿವೇ ಸಿಗದಂತೆ ಸುರಂಗ ಕೊರೆದು ಡಾಕ್ಟರ್‌ ಮನೆಯ ನೆಲೆಮಾಳಿಗೆಯಲ್ಲಿದ್ದ ಬೆಳ್ಳಿ ದೋಚಿದ್ದಾರೆ.

ನೆಲಮಾಳಿಗೆಯ ನೆಲ ಕೊರೆದ್ದನ್ನು ಕಂಡ ಮಾಲಿಕ ಡಾ.ಸುನಿತ್‌ ಸೋನಿ ಕಳೆದ ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋನಿ ಅವರ ಆಪ್ತ ಸ್ನೇಹಿತನೇ ಈ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಆದರೆ ನೆಲ ಮಾಳಿಗೆಯಲ್ಲಿ ಎಷ್ಟುಪ್ರಮಾಣದ ಬೆಳ್ಳಿ ಇತ್ತು ಎಂಬ ಬಗ್ಗೆ ಮಾಲಿಕ ಸೋನಿ ಬಾಯ್ಬಿಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.