ನವದೆಹಲಿ(ಜ.12): ಸಾಮಾಜಿಕ ಜಾಲತಾಣದ ಜಾಗತಿಕ ದೈತ್ಯ ಸಂಸ್ಥೆಯಾಗಿರುವ ಟ್ವೀಟರ್‌ಗೆ ಪರಾರ‍ಯಯವಾಗಿ ದೇಶೀಯ ಜಾಲತಾಣವೆಂದೇ ಬಿಂಬಿಸಲಾದ ‘ಟೂಟರ್‌’ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಬಿಜೆಪಿಯ ಯಾವುದೇ ನಾಯಕರು ಖಾತೆ ಹೊಂದಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

ಈ ಸಂಬಂಧ ಸೋಮವಾರ ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ಉಸ್ತುವಾರಿ ಅಮಿತ್‌ ಮಾಳವೀಯ ಅವರು ಸ್ಪಷ್ಟನೆ ರೂಪದ ಟ್ವೀಟ್‌ ಮಾಡಿದ್ದಾರೆ.

ಸ್ವಯಂಘೋಷಿತ ಸ್ವದೇಶಿ ಸಾಮಾಜಿಕ ಜಾಲತಾಣವಾದ ಟೂಟರ್‌ನಲ್ಲಿ ನೀಲಿ ಟಿಕ್‌ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಖಾತೆ ಚಾಲ್ತಿಯಲ್ಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನೇ ರದ್ದುಪಡಿಸಿದ ಟ್ವೀಟರ್‌ ಕ್ರಮ ವಿರೋಧಿಸಿ, ಟ್ವೀಟರ್‌ನ ಈ ಕ್ರಮವು ದೊಡ್ಡ-ದೊಡ್ಡ ಟೆಕ್‌ ಕಂಪನಿಗಳಿಂದ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟಾ್ರಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದರು. ಇದರ ಬೆನ್ನಲ್ಲೇ, ಟೂಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಬಿಜೆಪಿಯ ನಾಯಕರ ಫೋಟೋ ಸಹಿತದ ಖಾತೆಗಳಿರುವಂತೆ ಭಾಸವಾಗಿತ್ತು.