ಕಾಂಗ್ರೆಸ್ ದೊಡ್ಮನೆ ಮತದಾನ ಮಾಡಿದ ಕ್ಷೇತ್ರದಲ್ಲಿ 'ಕೈ' ಅಭ್ಯರ್ಥಿಯೇ ಇಲ್ಲ!
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಅವರ ಪತಿ ರಾಬಟ್ರಾ ವಾದ್ರಾ ಹಾಗೂ ಮಗ-ಮಗಳು ಸಹ ಇಂದು ದೆಹಲಿಯಲ್ಲಿ ಮತದಾನ ಚಲಾಯಿಸಿದರು.
ನವದೆಹಲಿ: ಕಾಂಗ್ರೆಸ್ ದೊಡ್ಮನೆಯ ಸದಸ್ಯರು ಮತದಾನ ಮಾಡುವ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಯೇ ಇಲ್ಲದಂತಾಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತದಾನ ಮಾಡುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧೆ ಮಾಡಿಲ್ಲ. ಐಎನ್‌ಡಿಐಎ ಮೈತ್ರಿಯ ಭಾಗವಾಗಿ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಮಿತ್ರ ಪಕ್ಷದ ಎಎಪಿಗೆ ಬಿಟ್ಟುಕೊಟ್ಟಿದೆ.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನವದೆಹಲಿಯ ಜನಪತ್ ರಸ್ತೆಯ ನಿರ್ಮಾಣ್ ಭವನದ ಮತಗಟ್ಟೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಅವರ ಪತಿ ರಾಬಟ್ರಾ ವಾದ್ರಾ ಹಾಗೂ ಮಗ-ಮಗಳು ಸಹ ಇಂದು ದೆಹಲಿಯಲ್ಲಿ ಮತದಾನ ಚಲಾಯಿಸಿದರು.
ಮತದಾನದ ಬಳಿಕ ರಾಹುಲ್ ಗಾಂಧಿ ಸಂದೇಶ
ನಾನು ಮತ್ತು ತಾಯಿ ಸೋನಿಯಾ ಗಾಂಧಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ನಮ್ಮ ಹಕ್ಕನ್ನು ಚಲಾಯಿಸಿದ್ದೇವೆ. ನೀವು ಮನೆಯಿಂದ ಹೊರಗೆ ಬಂದು ನಿಮ್ಮ ಹಕ್ಕು ಹಾಗೂ ಭವಿಷ್ಯದ ಕುಟುಂಬಕ್ಕಾಗಿ ಮತ ಚಲಾಯಿಸಲು ಬನ್ನಿ ಎಂದು ರಾಹುಲ್ ಗಾಂಧಿ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಾಯಿ ಜೊತೆಗಿನ ಫೋಟೋ ಹಂಚಿಕೊಂಡಿರುವ ರಾಹುಲ್ ಗಾಂಧಿ, 30 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಯುವಕರಿಗೆ ವರ್ಷಕ್ಕೆ 1 ಲಕ್ಷ ರೂ.ಗಳ ಮೊದಲ ಉದ್ಯೋಗ ಖಾತರಿ ಯೋಜನೆ ಪ್ರಾರಂಭಿಸಬೇಕು. ಬಡ ಕುಟುಂಬದ ಮಹಿಳೆಯರ ಖಾತೆಗೆ ತಿಂಗಳಿಗೆ 8,500 ರೂಪಾಯಿ ಸಿಗಬೇಕು. ರೈತರು ಸಾಲದಿಂದ ಋಣಮುಕ್ತರಾಗಿ ತಮ್ಮ ಬೆಳೆಗಳಿಗೆ ಸರಿಯಾದ MSP ಅನ್ನು ಪಡೆಯಬೇಕು. ಕೂಲಿಕಾರರಿಗೆ ದಿನಗೂಲಿ 400 ರೂಪಾಯಿ ನೀಡಲಾಗುವುದು ಎಂದು ತಮ್ಮ ಪ್ರಣಾಳಿಕೆಯ ಅಂಶಗಳನ್ನು ಬರೆದುಕೊಂಡಿದ್ದಾರೆ.
ದೇಶದ ಚುನಾವಣೆಯ ಅನಧಿಕೃತ ಎಕ್ಸಿಟ್ ಪೋಲ್, ಏನಿದು ಫಲೋಡಿ ಸತ್ತಾ ಬಜಾರ್?
ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಮತ ಚಲಾಯಿಸಿ
ಮತ ನಿಮ್ಮ ಜೀವನವನ್ನು ಸುಧಾರಿಸುವುದಲ್ಲದೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುತ್ತದೆ. ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬಕ್ಕೆ ನಾನು ಮತ್ತು ತಾಯಿ ಮತದಾನದ ಮೂಲಕ ಕೊಡುಗೆ ನೀಡಿದ್ದೇವೆ. ನೀವೆಲ್ಲರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಮನೆಗಳಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗಾಗಿ ಮತ್ತು ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
2009ರಲ್ಲಿ ಕಾಂಗ್ರೆಸ್‌ನ ಅಜಯ್ ಮಕೇನ್ ಕೊನೆಯ ಬಾರಿ ಗೆದ್ದಿದ್ದರು.ವ 2014 ಮತ್ತು 2019ರಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದರು. ಈ ಬಾರಿ ಅಭ್ಯರ್ಥಿಯಲ್ಲಿ ಬದಲಾವಣೆ ಮಾಡಿರುವ ಬಿಜೆಪಿ ನವದೆಹಲಿ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿ ಬನ್ಸೂರಿ ಸ್ವರಾಜ್ ಅವರಿಗೆ ನೀಡಲಾಗಿದೆ. ಆಪ್‌ನಿಂದ ಸೋಮನಾಥ್ ಭಾರತಿ ಸ್ಪರ್ಧಿಸಿದ್ದಾರೆ.
ಗೆದ್ದ 3 ದಿನಗಳಲ್ಲೇ ಇಂಡಿಯಾ ಪ್ರಧಾನಿ ಆಯ್ಕೆ: ಜೈರಾಂ ರಮೇಶ್
ಎಎಪಿಗೆ ವೋಟ್ ಹಾಕುವೆ
ಕೆಲ ದಿನಗಳ ಹಿಂದೆ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನಾನು ಆಪ್ ಅಭ್ಯರ್ಥಿಗೆ ಮತ ಹಾಕುವೆ ಎಂದು ಹೇಳಿಕೊಂಡಿದ್ದರು. ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಸಹ ರಾಜಕಾರಣ ಬದಲಾಗಿದೆ. ರಾಹುಲ್ ಗಾಂಧಿ ಎಎಪಿಗೆ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್‌ಗೆ ಮತ ಹಾಕ್ತಾರೆ ಎಂದು ಹೇಳಿದ್ದರು.
ಲೋಕಸಭೆಯ 6ನೇ ಹಂತದ ಚುನಾವಣೆ ಮೇ 25ರಂದು ನಡೆಯಲಿದೆ. ಈ ಹಂತದಲ್ಲಿ 6 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 889 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಒಡಿಶಾ ವಿಧಾನಸಭೆಯ 42 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.
6ನೇ ಹಂತದಲ್ಲಿ ಒಟ್ಟು 11.13 ಕೋಟಿ ಮತದಾರರಿದ್ದು, 1.4 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 5.84 ಕೋಟಿ ಪುರುಷ ಮತದಾರರು, 5.29 ಕೋಟಿ ಮಹಿಳಾ ಮತದಾರರು ಹಾಗೂ 5120 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.