ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ರಾಮ ಮಂದಿರಕ್ಕೆ ಅಡಿಪಾಯ ನಿರ್ಮಾಣ ಕಾಮಗಾರಿ ಪೂರ್ಣ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ರಾಮ ಜನ್ಮಭೂಮಿ ಟ್ರಸ್ಟ್‌ ಮೊದಲ ಬಾರಿಗೆ ಮಂದಿರ ನೆಲಗಟ್ಟಿನ ಫೋಟೋ ಬಿಡುಗಡೆ ಮಾಡಿದೆ

ಅಯೋಧ್ಯೆ (ಸೆ.17): ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ರಾಮ ಮಂದಿರಕ್ಕೆ ಅಡಿಪಾಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ರಾಮ ಜನ್ಮಭೂಮಿ ಟ್ರಸ್ಟ್‌ ಮೊದಲ ಬಾರಿಗೆ ಮಂದಿರ ನೆಲಗಟ್ಟಿನ ಫೋಟೋ ಬಿಡುಗಡೆ ಮಾಡಿದೆ.

ಮೂರು ಅಂತಸ್ತಿನ ಕಟ್ಟಡದ ತಳಪಾಯಕ್ಕೆ ಭದ್ರ ಅಡಿಪಾಯ ಹಾಕಲು ಗಟ್ಟಿಮಣ್ಣು ಬರುವ ತನಕ 40 ಅಡಿ ಆಳದವರೆಗೂ ಭೂಮಿಯನ್ನು ಅಗೆಯಲಾಗಿದೆ. ಅಡಿಪಾಯ ತೋಡಿದ ಜಾಗದಲ್ಲಿ 1 ಅಡಿ ಎತ್ತರದ 47 ಸ್ತರದ ಕಾಂಕ್ರೀಟ್‌ ಹಾಕಲಾಗಿದೆ. ಅಡಿಪಾಯದ ಕಂಬಗಳು 60 ಅಡಿ ಎತ್ತರವಾಗಿರಲಿದೆ ಎಂದು ಕಾಮಗಾರಿಯ ಹೊಣೆ ಹೊತ್ತಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶಿವ, ವಿಷ್ಣು ಸೇರಿ ಅಯೋಧ್ಯೆ ರಾಮ ಮಂದಿರ ಪ್ರಾಂಗಣದಲ್ಲಿ ತಲೆ ಎತ್ತಲಿದೆ 6 ದೇವಸ್ಥಾನ!

ಇದೇ ವೇಳೆ ಕಾಮಗಾರಿ ನಿಗದಿಯಂತೆಯೇ ನಡೆಯುತ್ತಿದ್ದು, 2024ರ ಲೋಕಸಭೆ ಚುನಾವಣೆಗೂ ಮುನ್ನ ಅಯೋಧ್ಯೆ ರಾಮಮಂದಿರದ ಮೊದಲ ಹಂತ ಬಹುತೇಕ ಪೂರ್ಣಗೊಳ್ಳಲಿದೆ. ಅಲ್ಲದೇ ಭಕ್ತರ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಟ್ರಸ್ಟ್‌ ತಿಳಿಸಿದೆ.

ಕಳೆದ ವರ್ಷ ಆ.5ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ವೇಳೆ 2023ರ ಡಿಸೆಂಬರ್‌ ವೇಳೆಗೆ ಮಂದಿರ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು.

ದೇವಾಲಯ ನಿರ್ಮಾಣಕ್ಕೆ ರಾಜಸ್ಥಾನದಿಂದ ತರಲಾದ 4 ಲಕ್ಷ ಕ್ಯುಬಿಕ್‌ ಅಡಿ ಕಲ್ಲುಗಳು ಮತ್ತು ಮಾರ್ಬಲ್‌ಗಳನ್ನು ಬಳಕೆ ಮಾಡಲಾಗುತ್ತದೆ. ಕಟ್ಟಡ ಗರ್ಭಗುಡಿ 161 ಅಡಿ ಎತ್ತರವಾಗಿರಲಿದೆ. ಮಂದಿರ ನಿರ್ಮಾಣಕ್ಕೆ ಉಕ್ಕು ಮತ್ತು ಇಟ್ಟಿಗೆ ಬಳಕೆ ಆಗುವುದಿಲ್ಲ. ಮಂದಿರದ ನೆಲ ಮಹಡಿಯಲ್ಲಿ 160 ಕಂಬಗಳು, ಮೊದಲ ಮಹಡಿಯಲ್ಲಿ 132 ಕಂಬಗಳು ಮತ್ತು 2ನೇ ಮಹಡಿಯಲ್ಲಿ 74 ಕಂಬಗಳು ಇರಲಿವೆ. ಮಂದಿರದಲ್ಲಿ 5 ಮಂಟಪಗಳನ್ನು ಕಾಣಬಹುದಾಗಿದೆ.