Asianet Suvarna News Asianet Suvarna News

ರಾಜ್ಯಗಳಿಗೆ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗ, ತಡೆ ಹಿಡಿವ ಅಧಿಕಾರ ನನಗಿಲ್ಲ: ವಿತ್ತ ಸಚಿವೆ

ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಸರ್ಕಾರ ಸಜ್ಜಾಗಿರುವಾಗಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಾರತಮ್ಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

The Finance Commission allocates grants to the states I have no authority to stop Union Finance Minister hits back to Karnataka goverment akb
Author
First Published Feb 6, 2024, 7:40 AM IST
  • ರಾಜ್ಯಗಳಿಗೆ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗ, ತಡೆ ಹಿಡಿವ ಅಧಿಕಾರ ನನಗಿಲ್ಲ
  • ಅನುದಾನ ಕಡಿಮೆಯಾಗಿದೆ ಎಂದರೆ ಹಣಕಾಸು ಆಯೋಗಕ್ಕೆ ನಿಮ್ಮ ಬೇಡಿಕೆಗಳನ್ನು ಸಲ್ಲಿಕೆ ಮಾಡಿ
  • 6 ತಿಂಗಳ ಹಿಂದೆ ಸರಿ ಇತ್ತು, ಈಗ ಏನಾಯ್ತು? । ನಿಗದಿತ ಉದ್ದೇಶಗಳಿಗೇ ಖರ್ಚು ಮಾಡುತ್ತಿದ್ದೀರಾ?
  • ಕರ್ನಾಟಕ ಸರ್ಕಾರದ ದೆಹಲಿ ಪ್ರತಿಭಟನೆಗೂ ಮುನ್ನ ಸಂಸತ್ತಿನಲ್ಲಿ ಹಣಕಾಸು ಸಚಿವೆ ತರಾಟೆ
  • ಕರ್ನಾಟಕದ್ದು ರಾಜಕೀಯಪ್ರೇರಿತ ಆರೋಪ: ನಿರ್ಮಲಾ ಸೀತಾರಾಮನ್‌ ಕಿಡಿಕಿಡಿ

ನವದೆಹಲಿ: ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಸರ್ಕಾರ ಸಜ್ಜಾಗಿರುವಾಗಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಾರತಮ್ಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಬಿಜೆಪಿಯೇತರ ಸರ್ಕಾರಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂಬುದು ರಾಜಕೀಯ ಪ್ರೇರಿತ ಆರೋಪ. ಅದನ್ನು ಹೇಳಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳಿಗೆ ಸಂತೋಷವಿದೆ ಎಂದು ಚಾಟಿ ಬೀಸಿದ್ದಾರೆ.

ಕೇಂದ್ರ ಸರ್ಕಾರ ತನಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಆರೋಪಿಸುತ್ತಿದೆ ಎಂದು ಲೋಕಸಭೆಯ ಶೂನ್ಯವೇಳೆಯಲ್ಲಿ ಸೋಮವಾರ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ, ಆ ರೀತಿ ಆಗಲು ಸಾಧ್ಯವೇ ಇಲ್ಲ. ಏಕೆಂದರೆ, ವ್ಯವಸ್ಥೆ ಅತ್ಯುತ್ತಮವಾಗಿದೆ. ಹಣಕಾಸು ಆಯೋಗದ ವರದಿಯನುಸಾರ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಚರ್ಚೆಯಾದ ಕರ್ನಾಟಕದ 73 ಸಾವಿರ ಕೋಟಿ ಅನುದಾನ ಬಾಕಿ!

‘ನನಗೆ ಈ ರಾಜ್ಯ ಇಷ್ಟವಿಲ್ಲ, ಅನುದಾನ ನಿಲ್ಲಿಸಿಬಿಡಿ’ ಎಂದು ಯಾವುದೇ ಹಣಕಾಸು ಸಚಿವರು ಕೂಡ ಮಧ್ಯಪ್ರವೇಶಿಸಿ ಸೂಚನೆ ನೀಡಲು ಆಗದು. ಆ ರೀತಿ ಆಗಲು ಅವಕಾಶವೇ ಇಲ್ಲ. ಏಕೆಂದರೆ ವ್ಯವಸ್ಥೆ ಅತ್ಯುತ್ತಮವಾಗಿದೆ. ನನ್ನ ಮನಸ್ಸಿಗೆ ತೋಚಿದಂತೆ ನಿಯಮಗಳನ್ನು ಬದಲಾವಣೆ ಮಾಡಲು ಆಗುವುದಿಲ್ಲ. ನಾನು ಶೇ.100ರಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದನ್ನೇ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಎಲ್ಲ ಹಣಕಾಸು ಸಚಿವರೂ ಅದನ್ನೇ ಮಾಡುತ್ತಾರೆ. ಹಣಕಾಸು ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.

ಯಾರಿಗಾದರೂ ನಾನು ಅನುದಾನ ತಡೆ ಹಿಡಿದಿದ್ದೇನೆ ಎಂದು ಅನ್ನಿಸಿದರೆ, ಅಂಥವರು ಹಣಕಾಸು ಆಯೋಗದ ಜತೆ ಮಾತನಾಡಿ. ಬೇಡಿಕೆಗಳು, ಅವಶ್ಯಕತೆಗಳು ಹಾಗೂ ಸ್ಥಿತಿಗತಿಯನ್ನು ಹೇಳಿಕೊಳ್ಳಿ. ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗವೇ ನಿರ್ಧಾರ ಕೈಗೊಳ್ಳಲಿ. ಕರ್ನಾಟಕದ ಉಪಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅವರಿಗೆ ವಾಸ್ತವ ತಿಳಿಸಿದ್ದೇನೆ ಎಂದು ವಿವರಿಸಿದರು.

ದಕ್ಷಿಣದಲ್ಲಿ ನಮ್ಮ ಕೆಲಸದ ಬಗ್ಗೆ ತಪ್ಪುಕಲ್ಪನೆ: ಸಚಿವೆ ನಿರ್ಮಲಾ ಸೀತಾರಾಮನ್‌

ಹಣಕಾಸು ಆಯೋಗ ಹೇಳಿದ್ದನ್ನು ಬಿಟ್ಟು ನಾನು ಬೇರೆ ಏನೂ ಮಾಡಲು ಆಗುವುದಿಲ್ಲ. ಹಣಕಾಸು ಆಯೋಗ ಇಂಥದ್ದು ಮಾಡು ಎಂದರೆ, ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ. ಹಣಕಾಸು ಆಯೋಗದ ಶಿಫಾಸುಗಳ ವಿಚಾರದಲ್ಲಿ ನನಗೆ ನನ್ನದೇ ಆದ ವಿವೇಚನೆ ಇದೆ ಎಂದು ಕಲ್ಪಿಸಿಕೊಳ್ಳಬೇಡಿ. ದಯವಿಟ್ಟು ಹಣಕಾಸು ಆಯೋಗದ ಜತೆ ಮಾತನಾಡಿ ಎಂದರು.

ಗ್ಯಾರಂಟಿ ಸ್ಕೀಂಗಳಿಗೂ ಚಾಟಿ:

ಆರು ತಿಂಗಳ ಹಿಂದೆ ಎಲ್ಲವೂ ಸರಿ ಇತ್ತು. ಈಗ ಏನಾಗಿದೆ? ನಿಗದಿತ ಉದ್ದೇಶಗಳಿಗೆ ಹಣವನ್ನು ಖರ್ಚು ಮಾಡಲಾಗಿದೆಯೇ? ನಾನು ಇದನ್ನು ಪ್ರಶ್ನಿಸುತ್ತಿಲ್ಲ. ನೀವು ಖರ್ಚು ಮಾಡಿ. ಆದರೆ ನಮ್ಮ ಮೇಲೆ ಗೂಬೆ ಕೂರಿಸಬೇಡಿ. ಕೇಂದ್ರ ಸರ್ಕಾರ ನಿಯಮಗಳ ಪ್ರಕಾರ ನಡೆದುಕೊಳ್ಳುತ್ತದೆ. ಅದರ ಮೇಲೂ ಆರೋಪ ಮಾಡಬೇಡಿ. ನಿಮ್ಮ ಬಜೆಟ್‌ಗಿಂತ ಮೀರಿದ ವೆಚ್ಚಗಳಿಗೆ ನಾನು ಉತ್ತರದಾಯಿ ಅಲ್ಲ ಎಂದು ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
 

 

 

Follow Us:
Download App:
  • android
  • ios