40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಗೆ ಖರ್ಚಾಗಿದ್ದು ಐದೇ ಲಕ್ಷ..!
ಕಳೆದ ವರ್ಷ ಲೋಕಸಭಾ ಚುನಾವಣೆಗೂ ಮುನ್ನ ನಡೆದ ಪುಲ್ವಾಮಾ ದಾಳಿಗೆ ಖರ್ಚಾಗಿದ್ದು ಕೇವಲ 5.70 ಲಕ್ಷ ರುಪಾಯಿ ಎನ್ನುವ ವಿಚಾರ ಬಯಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.28): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರ ವಾಹನದ ಮೇಲೆ ನಡೆಸಿದ ದಾಳಿಗೆ ಖರ್ಚು ಮಾಡಿದ್ದು ಕೇವಲ 5.7 ಲಕ್ಷ ರುಪಾಯಿ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದೇ ವೇಳೆ, ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಜೈಷ್ ಎ ಮೊಹಮ್ಮದ್ ಉಗ್ರ ಉಮರ್ ಫಾರೂಖ್‌ಗೆ ಪಾಕಿಸ್ತಾನದಿಂದ 10 ಲಕ್ಷ ರು. ಸಂದಾಯವಾಗಿತ್ತು ಎಂದೂ ಗೊತ್ತಾಗಿದೆ.
ಎನ್‌ಐಎ ಇತ್ತೀಚೆಗೆ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ 13,800 ಪುಟಗಳ ಆರೋಪಪಟ್ಟಿ ಮಾಧ್ಯಮಗಳಿಗೆ ಲಭ್ಯವಾಗಿದೆ. ‘ಪಾಕಿಸ್ತಾನದಿಂದ 2019ರ ಜನವರಿ ಹಾಗೂ ಫೆಬ್ರವರಿಯಲ್ಲಿ ಉಮರ್ ಫಾರೂಖ್‌ಗೆ 10 ಲಕ್ಷ ರು. ಹಣವು ಪಾಕಿಸ್ತಾನಿ ಕರೆನ್ಸಿ ರೂಪದಲ್ಲಿ 5 ಕಂತುಗಳಲ್ಲಿ ಅಲೈಡ್ ಬ್ಯಾಂಕ್ ಹಾಗೂ ಮೀಜನ್ ಬ್ಯಾಂಕ್‌ಗಳ 2 ಖಾತೆಗಳಿಗೆ ಜಮೆ ಆಗಿದೆ. ಜೈಷ್ ಉಗ್ರರಾದ ರೌಫ್ ಅಸ್ಗರ್ ಅಲ್ವಿ ಹಾಗೂ ಅಮ್ಮರ್ ಅಲ್ವಿಗೆ ಹಣ ಕಳಿಸುವಂತೆ ಫಾರೂಖ್ ಸೂಚಿಸಿದ್ದ’ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.
40 ಸಿಆರ್‌ಪಿಎಫ್ ಯೋಧರ ಬಲಿಪಡೆದ ಪುಲ್ವಾಮಾ ದಾಳಿ ಹಿಂದಿನ ರಹಸ್ಯ ಬಯಲು!
ಸಿಆರ್‌ಪಿಎಫ್ ಯೋಧರಿದ್ದ ಬಸ್ ಮೇಲೆ ದಾಳಿ ನಡೆಸಲು ಬಳಸಲಾಗಿದ್ದ ಸೆಕೆಂಡ್ ಹ್ಯಾಂಡ್ ಮಾರುತಿ ಕಾರನ್ನು 1.85 ಲಕ್ಷ ರು. ನೀಡಿ ಖರೀದಿಸಲಾಗಿತ್ತು. ಸ್ಫೋಟಕವನ್ನು ಇರಿಸಲು ಕಾರಿನ ಒಳಭಾಗ ಮರುವಿನ್ಯಾಸಕ್ಕೆ 35 ಸಾವಿರ ರು. ಖರ್ಚು ಮಾಡಲಾಯಿತು. 2.25 ಲಕ್ಷ ರು.ಗಳನ್ನು 200 ಕೇಜಿ ತೂಕದ 2 ಐಇಡಿ ಬಾಂಬ್ ತಯಾರಿಸಲು ಹಾಗೂ 35 ಸಾವಿರ ರು.ಗಳನ್ನು ಅಲ್ಯುಮಿನಿಯಂ ಖರೀದಿಸಲು ಬಳಸಲಾಯಿತು. ಈ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲಾಗಿತ್ತು’ ಎಂದು ಎನ್‌ಐಎ ಹೇಳಿದೆ.
ಉಮರ್ ಭಾರತದಲ್ಲಿ ಇನ್ನೊಂದು ದಾಳಿಗೆ ಸಂಚು ರೂಪಿಸಿದ್ದ. ಆದರೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್ ಸರ್ಜಿಕಲ್ ದಾಳಿ ನಡೆಸಿದ ಕಾರಣ ಆತನ ಯತ್ನಗಳು ವಿಫಲವಾದವು ಎಂದು ಅಧಿಕಾರಿಗಳು ಹೇಳಿದ್ದಾರೆ. 2019ರ ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ ಕರ್ನಾಟಕದ ಮಂಡ್ಯ ಮೂಲದ ಯೋಧ ಗುರು ಸೇರಿದಂತೆ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಉಗ್ರರಿಂದ ಯಾವುದಕ್ಕೆ ಎಷ್ಟುಖರ್ಚು?
ಸೆಕೆಂಡ್ ಹ್ಯಾಂಡ್ ಮಾರುತಿ ಕಾರು ಖರೀದಿಗೆ 1.85 ಲಕ್ಷ ರು.
ಸ್ಫೋಟಕ ಇಡಲು ಕಾರಿನ ಮರು ವಿನ್ಯಾಸಕ್ಕೆ 35,000 ರು.
200 ಕೇಜಿಯ 2 ಐಇಡಿ ಬಾಂಬ್ ತಯಾರಿಗೆ 2.25 ಲಕ್ಷ ರು.
ಅಲ್ಯುಮಿನಿಯಂ ಖರೀದಿಗೆ 35,000 ರು.