Asianet Suvarna News Asianet Suvarna News

ಗಣರಾಜ್ಯೋತ್ಸವ ದಿನ ರಕ್ತಪಾತಕ್ಕೆ ಐಸಿಸ್‌ ಉಗ್ರರ ಬಳಸಿ ಪಾಕ್‌ ಸಂಚು!

ಗಣರಾಜ್ಯೋತ್ಸವ ದಿನ ರಕ್ತಪಾತಕ್ಕೆ ಐಸಿಸ್‌ ಉಗ್ರರ ಬಳಸಿ ಪಾಕ್‌ ಸಂಚು| ದೆಹಲಿ ಅಥವಾ ಗುಜರಾತ್‌ನಲ್ಲಿ ಉಗ್ರ ದಾಳಿಗೆ ಯೋಜನೆ| ದಕ್ಷಿಣ ಭಾರತದ ಇಬ್ಬರು ಉಗ್ರರಿಂದ ದಾಳಿ ಸಂಭವ| ಬೆಂಗಳೂರಲ್ಲಿ ನೆಲೆಸಿದ್ದ ಮೊಯಿದ್ದೀನ್‌ ಸಂಗಡಿಗರು ಇವರು

Terrorist attack backed by Pakistan ISI likely in Delhi Gujarat Ahead Of Republic Day January 26
Author
Bangalore, First Published Jan 15, 2020, 9:11 AM IST

ನವದೆಹಲಿ[ಜ.15]: ಜ.26ರ ಗಣರಾಜ್ಯೋತ್ಸವ ವೇಳೆ ರಾಷ್ಟ್ರ ರಾಜಧಾನಿ ದೆಹಲಿ ಅಥವಾ ಗುಜರಾತಿನಲ್ಲಿ ಐಸಿಸ್‌ ಉಗ್ರಗಾಮಿಗಳನ್ನು ಬಳಸಿ ರಕ್ತಪಾತ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹೊಂಚು ಹಾಕಿದೆ ಎಂಬ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲೂ ಕೆಲ ದಿನ ನೆಲೆಸಿದ್ದ, ಸದ್ಯ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಖ್ವಾಜಾ ಮೊಯಿದ್ದೀನ್‌ ಒಳಗೊಂಡ ಆರು ಮಂದಿಯ ತಂಡದಲ್ಲಿದ್ದ ಇಬ್ಬರು ಈ ದಾಳಿಯನ್ನು ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಹೈ ಅಲರ್ಟ್‌ ಆಗಿದ್ದಾರೆ. ಆ ಇಬ್ಬರೂ ಉಗ್ರರಿಗೆ ತೀವ್ರ ಶೋಧ ನಡೆಸಿದ್ದಾರೆ.

ಐಸಿಸ್‌ ಉಗ್ರಗಾಮಿಗಳಿಂದ ದಾಳಿ ನಡೆಸುವ ಮೂಲಕ, ಆ ದಾಳಿಯ ಹೊಣೆಯನ್ನು ಐಸಿಸ್‌ ತಲೆಗೇ ಕಟ್ಟುವುದು ಪಾಕಿಸ್ತಾನದ ಐಎಸ್‌ಐ ಹುನ್ನಾರ. ಆದರೆ ಈ ದಾಳಿಯ ಹಿಂದಿನ ಸೂತ್ರಧಾರ ಅದೇ ಸಂಸ್ಥೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯ ಹಿಂದು ಸಂಘಟನೆ ನಾಯಕ ಕೆ.ಪಿ. ಸುರೇಶ್‌ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಆರು ಮಂದಿ ಉಗ್ರರು ತಮಿಳುನಾಡಿನಂದ ಪರಾರಿಯಾಗಿದ್ದರು. ಈ ಗುಂಪು ಹತ್ಯೆ ಬಳಿಕ ಬೆಂಗಳೂರಿನಲ್ಲಿ ನೆಲೆ ನಿಂತು, ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಿತ್ತು. ಅಲ್ಲಿಂದ ನೇಪಾಳಕ್ಕೆ ಪ್ರಯಾಣಿಸಿ, ಮತ್ತೆ ಭಾರತ ಪ್ರವೇಶಿಸಿತ್ತು. ಈ ಪೈಕಿ ಖ್ವಾಜಾ ಮೊಯಿದ್ದೀನ್‌, ಅಬ್ದುಲ್‌ ಸಮದ್‌ ಸೇರಿ ಮೂವರನ್ನು ದೆಹಲಿಯಲ್ಲಿ ಹಾಗೂ ನಾಲ್ಕನೆಯವನನ್ನು ಗುಜರಾತಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಈ ಗುಂಪಿನ ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಅವರು ಜ.26ರಂದು ದೆಹಲಿ ಅಥವಾ ಗುಜರಾತಿನಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ. ಆ ದಾಳಿ ಜಂಟಿಯಾಗಿ ಬೇಕಾದರೂ ನಡೆಯಬಹುದು, ಇಬ್ಬರೂ ಏಕಾಂಗಿಯಾಗಿ ಬೇರೆ ಕಡೆ ದಾಳಿ ಮಾಡಲೂಬಹುದು ಎಂದು ಹೇಳಲಾಗುತ್ತಿದೆ. ಈ ಇಬ್ಬರೂ ಉಗ್ರರಿಗೆ ವಿದೇಶದ ನಿಯಂತ್ರಕರೊಬ್ಬರಿಂದ ಸಹಾಯ ಸಿಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಜ.26ಕ್ಕೆ ಮುನ್ನ ಬೃಹತ್‌ ದಾಳಿಯನ್ನು ನಡೆಸುವಂತೆ ತನಗೆ ಸೂಚನೆ ಇತ್ತು ಎಂದು ನಾಲ್ಕನೇ ಆರೋಪಿ ಹೇಳಿದ್ದಾನೆ. ಈತ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದು, ಆತನಿಂದ ಮಾಹಿತಿ ಹೆಕ್ಕಲು ತಮಿಳು ತರ್ಜುಮೆಕಾರನನ್ನು ಪೊಲೀಸರು ಬಳಸಿಕೊಂಡಿದ್ದಾರೆ.

Follow Us:
Download App:
  • android
  • ios