ಊಟಿಯಲ್ಲಿ ತಾಪಮಾನ ಶೂನ್ಯಕ್ಕೆ ಕುಸಿತ: ಕೆಲವೆಡೆ -2ರಷ್ಟು ತಾಪ ದಾಖಲು: ಹೆಪ್ಪುಗಟ್ಟಿದ ಜಲಮೂಲ
ಜನಪ್ರಿಯ ಪ್ರವಾಸಿ ತಾಣ ಊಟಿಯಲ್ಲಿ ತಾಪಮಾನ ಶೂನ್ಯಕ್ಕೆ ತಲುಪಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜಲಮೂಲಗಳು ಹೆಪ್ಪುಗಟ್ಟಿವೆ. ವಿಪರೀತ ಚಳಿಯಿಂದಾಗಿ ಟೀ ತೋಟಗಳಿಗೆ ಹಾನಿಯಾಗುತ್ತಿದ್ದು, ಬೆಳೆಗಾರರು ಚಿಂತಿತರಾಗಿದ್ದಾರೆ. ಉತ್ತರ ಭಾರತದಲ್ಲೂ ಚಳಿ ಹೆಚ್ಚಾಗಿದೆ.
ಉದಕಮಂಡಲ: ಜನಪ್ರಿಯ ಪ್ರವಾಸಿ ತಾಣವಾಗಿರುವ ಉದಕಮಂಡಲದಲ್ಲಿ (ಊಟಿ) ತಾಪಮಾನ ಶೂನ್ಯಕ್ಕೆ ತಲುಪಿದೆ. ಇದೇ ವೇಳೆ ಊಟಿ ಸನಿಹದ ಎವಲಾಂಚ್ ಎಂಬಲ್ಲಿ ತಾಪಮಾನ -2 ಡಿಗ್ರಿಗೆ ಕುಸಿದಿದೆ. ಊಟಿ, ಕಂಥಲ್, ಥಲೈಕುಂಥ ಪ್ರದೇಶಗಳಲ್ಲಿನ ಜಲಮೂಲಗಳು ಹೆಪ್ಪುಗಟ್ಟಿವೆ. ಇದರಿಂದ ಜನರು ಪರದಾಡುವಂತಾಗಿದೆ. ಅತ್ತ ವಿಪರೀತ ಚಳಿಯಿಂದಾಗಿ ಟೀ ತೋಟಗಳಿಗೆ ಹಾನಿಯಾಗುತ್ತಿದ್ದು, ಬೆಳೆಗಾರರು ಚಿಂತಿತರಾಗಿದ್ದಾರೆ. ಈ ಚಳಿಯು ಇನ್ನೂ ಕೆಲ ದಿನಗಳ ಕಾಲ ಹೀಗೆಯೇ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರವೂ ಚಳಿಗೆ ತರ ತರ:
ಈ ನಡುವೆ, ಉತ್ತರ ಭಾರತವೂ ಚಳಿಯಿಂದ ನಡುಗುತ್ತಿದೆ ಕಾಶ್ಮೀರದಲ್ಲಿ ಮೈನಸ್ 7.8, ರಾಜಸ್ಥಾನದಲ್ಲಿ 2.5, ಹರ್ಯಾಣದಲ್ಲಿ 5 ಡಿಗ್ರಿ, ದಿಲ್ಲಿಯಲ್ಲಿ 10.5 ಡಿಗ್ರ ಉಷ್ಣಾಂಶ ದಾಖಲಾಗಿದೆ.
ನಾಳೆ ಬೆಳಗ್ಗೆ 8 ಗಂಟೆಗೆ ಇಸ್ರೋ ಸ್ಪೇಡೆಕ್ಸ್ ಡಾಕಿಂಗ್
ನವದೆಹಲಿ: ತಾನು ಕಳಿಸಿದ್ದ ಸ್ಪೇಡೆಕ್ಸ್ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಕ್ರಿಯೆ ಗುರುವಾರ ಬೆಳಗ್ಗೆ 8ರಿಂದ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ.ಮಂಗಳವಾರ ಟ್ವೀಟ್ ಮಾಡಿರುವ ಅವರು, https://www.youtube.com/live/UCs1UWAo2I0 ಮೂಲಕ ನೇರಪ್ರಸಾರ ವೀಕ್ಷಿಸಬಹುದು ಎಂದು ತಿಳಿಸಿದೆ.
ಡಿ.30ರಂದು ಇಸ್ರೋ, ಸ್ಪೇಡೆಕ್ಸ್ 1 ಮತ್ತು ಸ್ಪೇಡೆಕ್ಸ್ 2 ಎಂಬ ಎರಡು ನೌಕೆಗಳನ್ನು ಹಾರಿಬಿಟ್ಟಿತ್ತು. ಅದರ ಡಾಕಿಂಗ್‌ನಲ್ಲಿ ಯಶ ಕಂಡರೆ ಅಮೆರಿಕ, ರಷ್ಯಾ ಹಾಗೂ ಚೀನಾ ಬಳಿಕ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು
ಹೈದರಾಬಾದ್: ಪುಷ್ಪ-2 ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನನ್ನು ನಟ ಅಲ್ಲು ಅರ್ಜುನ್ ಮಂಗಳವಾರ ಭೇಟಿಯಾಗಿದ್ದಾರೆ.ಅಲ್ಲು ಸುಮಾರು 10 ನಿಮಿಷಗಳನ್ನು ಗಾಯಾಳು ಶ್ರೀತೇಜ್(8)ನೊಂದಿಗೆ ಕಳೆದಿದ್ದು, ನಿರ್ಮಾಪಕ ಹಾಗೂ ತೆಲಂಗಾಣ ಫಿಲಂ ಡೆವಲಪ್ಮೆಂಟ್ ಕಾರ್ಪೊರೇಷನ್‌ನ ಅಧ್ಯಕ್ಷರಾಗಿರುವ ವೆಂಕಟರಮಣ ರೆಡ್ಡಿ ಕೂಡ ಅವರೊಂದಿಗಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತು ಒದಗಿಸಲಾಗಿತ್ತು.
ಈ ಮೊದಲು ಜ.5ರಂದು ಅಲ್ಲು ಆಸ್ಪತ್ರೆಗೆ ಭೇಟಿ ನೀಡಬೇಕಿತ್ತಾದರೂ, ನಂತರ ಅದು ರದ್ದಾಗಿತ್ತು.ಯಾವುದೇ ಬಾಹ್ಯ ಬೆಂಬಲವಿಲ್ಲದೆ ಶ್ರೀತೇಜ್‌ರ ಪ್ರಮುಖ ಪ್ಯಾರಾಮೀಟರ್‌ಗಳು ಉತ್ತಮವಾಗಿದ್ದು, ರೋಗನಿರೋಧಕ ಕೊಡುವುದನ್ನು ನಿಲ್ಲಿಸಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.