ದಿಲ್ಲಿ ಪತ್ರಕರ್ತರಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿರುವ ತೆಲುಗು ಟೀವಿ ಚಾನಲ್‌ವೊಂದರ ಪತ್ರಕರ್ತನಿಗೆ ಕೊರೋನಾ ಸೋಂಕು ತಾಕಿದ್ದು, ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ವಾರದವರೆಗೂ ಬಹುತೇಕ ಮಂತ್ರಿಗಳ ಮನೆಗೆ ಎಡತಾಕುತ್ತಾ ಬೈಟ್‌ ತೆಗೆದುಕೊಳ್ಳುತ್ತಿದ್ದ ಪತ್ರಕರ್ತ ಆಸ್ಪತ್ರೆ ಸೇರಿರುವುದರಿಂದ ದಕ್ಷಿಣ ಭಾರತ ಮೂಲದ ಅನೇಕ ಪತ್ರಕರ್ತರಿಗೆ ದಿಗಿಲು ಶುರುವಾಗಿದೆ.

ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

ತೆಲುಗು ಟೀವಿ ಪತ್ರಕರ್ತ, ಕೇಂದ್ರ ಗೃಹ ರಾಜ್ಯ ಸಚಿವ ಕಿಶನ್‌ ರೆಡ್ಡಿ ಮನೆಗೆ ಕೊನೆಯದಾಗಿ ಇಂಟರ್‌ವ್ಯೂ ತೆಗೆದುಕೊಳ್ಳಲು ಹೋಗಿದ್ದರಂತೆ. ಮರುದಿನವೇ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಅಂದಹಾಗೆ, ಟೀವಿ ಪತ್ರಕರ್ತ ಆಸ್ಪತ್ರೆ ಸೇರಿದ ಮೇಲೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸ್ವತಃ ದಕ್ಷಿಣದ ಎಲ್ಲ ಪತ್ರಕರ್ತರಿಗೆ ಫೋನಾಯಿಸಿ ಹಾಲ್‌ಚಾಲ್‌ ವಿಚಾರಿಸಿ ಧೈರ್ಯ ತುಂಬುತ್ತಿದ್ದಾರೆ.

ದೆಹಲಿ ಆರ್‌.ಕೆ ಪುರಂನಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೀಡು ಬಿಟ್ಟಿರುವ ಮಂತ್ರಾಲಯ ಮಠದ ಹಿರಿಯ ಪಂಡಿತರೊಬ್ಬರಿಗೆ ಕೊರೋನಾ ತಗುಲಿ ಅಸ್ಪತ್ರೆಯಲ್ಲಿದ್ದಾರೆ ಎಂಬ ಸುದ್ದಿ ದಿಲ್ಲಿಯಲ್ಲಿರುವ ಕನ್ನಡಿಗರಲ್ಲಿ ಸ್ವಲ್ಪಮಟ್ಟಿಗಿನ ಆತಂಕ ಸೃಷ್ಟಿಸಿತ್ತು. ದಿಲ್ಲಿ ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿಯೇ ಕರ್ನಾಟಕ ಸಂಘವೂ ಇದೆ. ಹೀಗಾಗಿ ದೆಹಲಿ ಕನ್ನಡಿಗರಲ್ಲಿ ಇದು ಹೆದರಿಕೆ ಹುಟ್ಟಿಸಿದ್ದು ಸಹಜ.

ದೇವಸ್ಥಾನ ಸೀಲ್‌ಡೌನ್‌ ಮಾಡಲಾಗಿದೆ, ಮಠದಲ್ಲಿರುವ ಎಲ್ಲರನ್ನೂ ಆಸ್ಪತ್ರೆಗೆ ಒಯ್ಯಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ ಮಂತ್ರಾಲಯ ಮಠದ ಹಿರಿಯ ಪಂಡಿತರು ಯಾರೋ ನನ್ನ ತೇಜೋವಧೆ ಮಾಡಿದ್ದಾರೆಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಹಿರಿಯ ಪಂಡಿತರು ಕೇಂದ್ರ ಸಚಿವರ ಮನೆಗಳಿಗೆ ಎಡ ತಾಕಿದ್ದರಿಂದ ಅವರಿಗೆಲ್ಲ ಕೊರೋನಾ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂಬ ಸುದ್ದಿ ಇನ್ನಷ್ಟುಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಕೇಂದ್ರ ಸಚಿವರು ಪ್ರಧಾನಿ ಮತ್ತು ಅಮಿತ್‌ ಶಾರನ್ನು ಎರಡು ದಿನಕ್ಕೊಮ್ಮೆ ಭೇಟಿ ಆಗುವುದರಿಂದ ಈ ಸುದ್ದಿ ಸ್ವಲ್ಪ ಹೆಚ್ಚು ಹೆದರಿಕೆ ಸೃಷ್ಟಿಸಿದ್ದು ಸುಳ್ಳಲ್ಲ. ಈ ರೀತಿಯ ಫೇಕ್‌ ನ್ಯೂಸ್‌ ನೋಡಿದರೆ, ನಮ್ಮ ಮಠ ಮಂದಿರಗಳಲ್ಲಿ ಯಾವ ಮಟ್ಟದ ಒಳ ರಾಜಕೀಯ ಇರಬಹುದು ಗೊತ್ತಾಗುತ್ತದೆ ನೋಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ