ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಫೋನ್ ಕಾಲ್; ಇಲ್ಲಿದೆ ಮಾತುಕತೆ ಸಾರಾಂಶ!
ಭಾರತದ ಗಡಿಯಲ್ಲಿ ಚೀನಾ ತಂಡೆ, ಕೊರೋನಾ ವೈರಸ್ ಮಾಹಾಮಾರಿ ಸೇರಿದಂತೆ ಹಲವು ಬಿಕ್ಕಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಟಿಲಿಫೋನ್ ಸಂಭಾಷಣೆ ನಡೆಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಪುಟಿನ್ ಸಂಭಾಷಣೆ ವಿವರ ಇಲ್ಲಿದೆ.
ನವದೆಹಲಿ(ಜು.02): ಪ್ರಧಾನಿ ನರೇಂದ್ರ ಮೋದಿಯ ಪ್ರತಿಯೊಂದು ನಡೆಯನ್ನು ನೆರೆ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಹಾಗೂ ನೇಪಾಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತದ ಗಡಿ ಹಂಚಿಕೊಂಡಿರುವ ಮೂರು ರಾಷ್ಟ್ರಗಳಿಗೆ ಒಳಗೊಳಗೆ ಆತಂಕವೂ ಇದೆ. ಕಾರಣ ರಷ್ಯಾ, ಅಮೆರಿಕ ಸೇರಿದಂತೆ ಬಲಿಷ್ಠ ರಾಷ್ಟ್ರಗಳು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಗಡಿ ತಂಟೆ, ಕೊರೋನಾ ವೈರಸ್ ಮಾಹಾಮಾರಿ ನಡುವೆ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ.
ಇಂದು(ಜು.02) ರಂದ ಮೋದಿ ಹಾಗೂ ಪುಟಿನ್ ನಡೆಸಿದ ಟೆಲಿಫೋನ್ ಸಂಭಾಷಣೆ ವಿವರ ಬಹಿರಂಗವಾಗಿದೆ. ಭಾರತದ ವಿದೇಶಾಂಗ ಇಲಾಖೆ ಈ ಮಾಹಿತಿಯನ್ನು ಹಂಚಿಕೊಂಡಿದೆ. ಮೋದಿ ಹಾಗೂ ಪುಟಿನ್ ಮಾತುಕತೆ ವಿವರ ಇಲ್ಲಿದೆ.
ಟೆಲಿಫೋನಿಕ್ ಸಂಭಾಷಣೆಯ ಆರಂಭದಲ್ಲೇ ಪ್ರಧಾನಿ ಮೋದಿ ರಷ್ಯಾಗೆ ಶುಭಾಶಯ ತಿಳಿಸಿದ್ದಾರೆ. ಕಾರಣ ಎರಡನೆ ಮಹಾಯುದ್ಧ ಗೆದ್ದ ರಷ್ಯಾ 75ನೇ ವರ್ಷದ ಸಂಭ್ರಮಾಚರಣೆ ನಡೆಸುತ್ತಿದೆ. ಇದರ ಜೊತೆಗೆ ಸಾಂವಿಧಾನಿಕ ತಿದ್ದುಪಡಿಯನ್ನು ಯಶಸ್ವಿಯಾಗಿಸಿರುವುದಕ್ಕೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಅಭಿನಂದನೆ ತಿಳಿಸಿದ್ದಾರೆ.
75ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ರಷ್ಯಾದ ಮಾಸ್ಕೋದಲ್ಲಿ ಆಯೋಜಿಸಲಾಗಿದ್ದ ಮಿಲಿಟರಿ ಪರೇಡ್‌ನಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಂಡಿದ್ದರು. ಫೋನ್ ಸಂಭಾಷಣೆಯಲ್ಲಿ ಮೋದಿ, ಇದು ಭಾರತ ಹಾಗೂ ರಷ್ಯಾದ ಸ್ನೇಹದ ಸಂಕೇತ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಕೊರೋನಾ ವೈರಸ್ ನಿಯಂತ್ರಣ ಹಾಗೂ ಸವಾಲುಗಳ ಕುರಿತು ಮೋದಿ ಹಾಗೂ ಪುಟಿನ್ ಚರ್ಚಿಸಿದ್ದಾರೆ. ಇಷ್ಟೇ ಅಲ್ಲ ಕೊರೋನಾ ವೈರಸ್ ವಿರುದ್ಧ ಜಂಟಿಯಾಗಿ ಹೋರಾಡುವ ಕುರಿತು ಚರ್ಚೆ ನಡೆಸಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ದ್ವಿಪಕ್ಷೀಯ ಸಮಿಟ್‌ಗೆ ರಷ್ಯಾ ಅಧ್ಯಕ್ಷರನ್ನು ಮೋದಿ ಆಹ್ವಾನಿಸಿದ್ದಾರೆ. ಇದೇ ವೇಳೆ ಪುಟಿನ್, ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಭಾರತಕ್ಕೆ ರಷ್ಯಾದಿಂದ ಎಲ್ಲಾ ಸಹಕಾರ ಸಿಗಲಿದೆ ಎಂದು ಪುಟಿನ್ ಭರವಸೆ ನೀಡಿದ್ದಾರೆ.