ಅಮಿತ್ ಶಾ ಚಪ್ಪಲಿ ಎತ್ತಿಕೊಟ್ಟ ತೆಲಂಗಾಣ ಬಿಜೆಪಿ ಮುಖ್ಯಸ್ಥ: ಗುಜರಾತಿಗಳ ಗುಲಾಮ ಎಂದ ಟಿಆರ್‌ಎಸ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾದರಕ್ಷೆಗಳನ್ನು ಇದ್ದ ಸ್ಥಳದಿಂದ ಎತ್ತಿಕೊಟ್ಟ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ ಕುಮಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಿಕಂದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾದರಕ್ಷೆಗಳನ್ನು ಇದ್ದ ಸ್ಥಳದಿಂದ ಎತ್ತಿಕೊಟ್ಟ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ ಕುಮಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಿನ್ನೆ ಸಿಕಂದರಾಬಾದ್‌ನ ಉಜ್ಜಯಿನಿ ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿದ ಅಮಿತ್ ಶಾ ಹೊರ ಬರುತ್ತಿರುವಾಗ ಸಂಸತ್ತಿನ ಸದಸ್ಯರೂ ಆಗಿರುವ ಸಂಜಯ್ ಕುಮಾರ್, ಅವರು ಅಮಿತ್ ಶಾ ಅವರಿಗಿಂತ ಬೇಗ ಬಂದು ಶಾ ಪಾದರಕ್ಷೆಯನ್ನು ಎತ್ತಿ ಅವರ ಪಾದದ ಮುಂದೆ ಇರಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ತೆಲಂಗಾಣದ ಬಿಜೆಪಿಯ ಪ್ರತಿಸ್ಪರ್ಧಿ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಈ ವಿಡಿಯೋವನ್ನು ಹಲವು ನಾಯಕರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕ ಕೆ.ಟಿ. ರಾಮರಾವ್ ಈ ವಿಡಿಯೋ ಟ್ವೀಟ್ ಮಾಡಿದ್ದು, ತೆಲಂಗಾಣ ಬಿಜೆಪಿ ಅಧ್ಯಕ್ಷರು ಅಮಿತ್ ಷಾ ಚಪ್ಪಲಿ ಎತ್ತಿಕೊಡಲು ಓಡಿ ಬರುತ್ತಿದ್ದು, ಗುಲಾಮಗಿರಿ ಪರಮಾವಧಿ ಇದು ತೆಲಂಗಾಣದ ಬಿಜೆಪಿ ಅಧ್ಯಕ್ಷನನ್ನು 'ಗುಜರಾತಿ ನಾಯಕರ ಗುಲಾಮ' ಎಂದು ಅವರು ಕರೆದಿದ್ದಾರೆ.
ದೆಹಲಿಯ ಚಪ್ಪಲಿಗಳನ್ನು ಎತ್ತುವ ಗುಜರಾತಿಗಳ ಗುಲಾಮನನ್ನು ತೆಲಂಗಾಣದ ನಾಗರಿಕರು ವೀಕ್ಷಿಸುತ್ತಿದ್ದಾರೆ. ತೆಲಂಗಾಣದ ಆತ್ಮಗೌರವಕ್ಕೆ ಅವಹೇಳನ ಮಾಡುವ ಯಾವುದೇ ಪ್ರಯತ್ನವನ್ನು ಜನರೇ ಹಿಮ್ಮೆಟ್ಟಿಸುತ್ತಾರ’ ಎಂದು ರಾಮರಾವ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯಲ್ಲಿ ಹಿಂದುಳಿದ ವರ್ಗದ ನಾಯಕನೊಬ್ಬನಿಗೆ ನೀಡಲಾಗುವ ಸ್ಥಾನಮಾನವನ್ನು ಕಣ್ಣಾರೆ ನೋಡಿ. ಬಂಡಿ ಸಂಜಯ ಕುಮಾರ್, ತೆಲುಗರ ಆತ್ಮಗೌರವವನ್ನು ಅವರ ಕಾಲಡಿ ಇಡುತ್ತಿದ್ದಾರೆ' ಎಂದು ತೆಲಂಗಾಣ ಕಾಂಗ್ರೆಸ್ ಅಧಿಕೃತ ಖಾತೆ ಟ್ವೀಟ್ ಮಾಡಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿದ್ದು, ತೆಲಂಗಾಣ ಹಾಗೂ ಹೈದರಾಬಾದ್‌ನಲ್ಲಿ ಅಮಿತ್ ಷಾ ಓಡಾಡುತ್ತಿದ್ದು, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ)ವನ್ನು ಮರಳಿ ಎನ್‌ಡಿಎ ಪಾಳಯಕ್ಕೆ ಸೇರಿಸುವ ಯತ್ನ ಮಾಡುತ್ತಿದ್ದಾರೆ ಇದಕ್ಕೆ ಖ್ಯಾತ ಉದ್ಯಮಿ ರಾಮೋಜಿರಾವ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ವರದಿ ಆಗಿತ್ತು. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಕೇಂದ್ರ ಸಚಿವ ಅಮಿತ್ ಶಾ ಭಾನುವಾರ ತೆಲಂಗಾಣದ ಮುನುಗೋಡೆಗೆ ಆಗಮಿಸಿದ್ದು ಅಲ್ಲಿಂದ ದೆಹಲಿಗೆ ತೆರಳುವ ಮುನ್ನ ಹೈದ್ರಾಬಾದ್‌ನ ರಾಮೋಜಿರಾವ್ ಸ್ಟುಡಿಯೋದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಜೊತೆ ಅಮಿತ್ ಶಾ ನಡುವೆ ಸಭೆಯೊಂದನ್ನು ಆಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.