ಹೈದರಾಬಾದ್‌(ಜ.07): ಜನರನ್ನು ಸಾಲದ ವಿಷವರ್ತುಲಕ್ಕೆ ತಳ್ಳುತ್ತಿರುವ ಆನ್‌ಲೈನ್‌ ಸಾಲ ನೀಡುವ ಮೊಬೈಲ್‌ ಆ್ಯಪ್‌ಗಳ ವಿರುದ್ಧ ತೆಲಂಗಾಣ ಪೊಲೀಸರು 50 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಮೋಸದ ಜಾಲದಲ್ಲಿ 113 ಆ್ಯಪ್‌ಗಳು ತೊಡಗಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ಸಂಬಂಧ ಈ ಎಲ್ಲಾ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕುವಂತೆ ಪೊಲಿಸರು ಗೂಗಲ್‌ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಕೆಲವೇ ಕೆಲವು ಆ್ಯಪ್‌ಗಳನ್ನು ಮಾತ್ರ ಗೂಗಲ್‌ ನಿಷೇಧಿಸಿದೆ. ಸಾಲ ಪಡೆದ ಗ್ರಾಹಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಹೈದರಾಬಾದ್‌ ಪೊಲೀಸರು 29 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರೆ, ಸೈಬರಾಬಾದ್‌ನಲ್ಲಿ 10, ವಾರಂಗಲ್‌ನಲ್ಲಿ 7 ಮತ್ತು ರಾಚಕೊಂಡದಲ್ಲಿ 4 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತುರ್ತು ಸಾಲ ನೀಡುವ 80 ಆ್ಯಪ್‌ಗಳನ್ನು ಗುರುತಿಸಲಾಗಿದೆ.

ಇನ್ನೂ 8 ಆ್ಯಪ್‌ ನಿಷೇಧಿಸಿ ಟ್ರಂಪ್‌ ಆದೇಶ: ಚೀನಾ ತೀವ್ರ ವಿರೋಧ

ಚೀನಾದ ಆ್ಯಪ್‌ಗಳ ವಿರುದ್ಧ ಸಮರ ಮುಂದುವರೆಸಿರುವ ಅಮೆರಿಕ ಸರ್ಕಾರ, ಅಲಿ ಪೇ, ವಿ ಚಾಟ್‌ ಸೇರಿದಂತೆ 8 ಚೀನಾ ಆ್ಯಪ್‌ ನಿಷೇಧಿಸಿ ಆದೇಶ ಹೊರಡಿಸಿದೆ. ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಿ ನೀತಿ ಮತ್ತು ಆರ್ಥಿಕತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಸರ್ಕಾರ ತಿಳಿಸಿದೆ.

ಅಲಿ ಪೇ, ಕ್ಯಾಮ್‌ ಸ್ಕಾ್ಯನರ್‌, ಕ್ಯುಕ್ಯು ವ್ಯಾಲೆಟ್‌, ಶೇರಿಟ್‌, ಟೆನ್ಸೆಂಟ್‌ ಕ್ಯುಕ್ಯು, ವಿ ಮೇಟ್‌, ವಿ ಚಾಟ್‌ ಪೇ ಮತ್ತು ಡಬ್ಲ್ಯುಪಿಎಸ್‌ ಆಫೀಸ್‌ ಆ್ಯಪ್‌ಗಳನ್ನು ನಿಷೇಧಿಸಿದ್ದು, 45 ದಿನಗಳ ಒಳಗಾಗಿ ಆದೇಶ ಕಾರ‍್ಯಗತವಾಗಲಿದೆ. ಆದರೆ ಈ ಆದೇಶದ ಬೆನ್ನಲ್ಲೇ ಚೀನಾ, ಅಮೆರಿಕ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.