* ದೇಗುಲ ಭೇಟಿಗಗೆ ಹೊರಟಿದ್ದ ತೆಲಂಗಾಣ ಸಿಎಂ ಆರೋಗ್ಯದಲ್ಲಿ ಏರುಪೇರು* ದೇಗುಲ ಭೇಟಿ ಕ್ಯಾನ್ಸಲ್, ಆಸ್ಪತ್ರೆಗೆ ದೌಡು* ವರದಿಯಲ್ಲಿ ಯಾವುದೇ ದೋಷವಿಲ್ಲ ಎಂದ ವೈದ್ಯರು
ಹೈದರಾಬಾದ್(ಮಾ.11): ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಆರೋಗ್ಯ ಹದಗೆಟ್ಟಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಮುಖ್ಯಮಂತ್ರಿಯವರಿಗೆ ಹೃದಯಕ್ಕೆ ಸಂಬಂಧಿಸಿದ ಆಂಜಿಯೋಗ್ರಾಮ್ ಪರೀಕ್ಷೆಯನ್ನು ವೈದ್ಯರು ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಅವರ ಎಡಗೈಯಲ್ಲಿ ಸೆಳೆತವಿತ್ತು ಎಂದು ಹೇಳಲಾಗುತ್ತಿದೆ. ವೈದ್ಯರು ಎಲ್ಲಾ ರೀತಿಯ ಪರೀಕ್ಷೆ ನಡೆಸಿ, ಮುಖ್ಯಮಂತ್ರಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ವರದಿಯಲ್ಲಿ ಯಾವುದೇ ದೋಷವಿಲ್ಲ ಎಂದ ವೈದ್ಯರು
ಯಶೋದಾ ಆಸ್ಪತ್ರೆಯ ವೈದ್ಯ ಎಂ.ವಿ.ರಾವ್ ಅವರ ಪ್ರಕಾರ ಮುಖ್ಯಮಂತ್ರಿ ಕೆಸಿಆರ್ ಅವರ ಹೃದಯ ಸಂಬಂಧಿ ಆಂಜಿಯೋಗ್ರಾಮ್ ಪರೀಕ್ಷೆ ಮಾಡಲಾಗಿದೆ. ವರದಿಯಲ್ಲಿ ಯಾವುದೇ ಆತಂಕಕಾರಿ ಅಂಶವಿಲ್ಲ ಎಂದಿದ್ದಾರೆ. ಎಡಗೈ ಮತ್ತು ಎಡಗಾಲಿನ ಮೇಲೆ ಒತ್ತಡ ಉಂಟಾಗಿದ್ದರಿಂದ ಅವರಿಗೆ ಹೀಗನಿಸಿರಬಹುದು, ಅವರು ಆರೋಗ್ಯವಾಗಿದ್ದಾರೆ. ಎಚ್ಚರಿಕೆಗಾಗಿ ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಎಲ್ಲಾ ವರದಿಗಳು ಬಂದ ನಂತರ ಅವರಿಗೆ ಹೆಚ್ಚಿನ ಸಲಹೆಗಳನ್ನು ನೀಡಲಾಗುವುದು ಎಂದಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಕೆಸಿಆರ್ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ತಮ್ಮ ಆರೋಗ್ಯ ತಪಾಸಣೆಗೆ ಬರುತ್ತಾರೆ ಎಂದೂ ತಿಳಿಸಿದ್ದಾರೆ.
ಉದ್ಯೋಗಕ್ಕೆ ಸಂಬಂಧಿಸಿದಂತೆ ಸಿಎಂ ಘೋಷಣೆ
ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ರಾಜ್ಯ ವಿಧಾನಸಭೆಯಲ್ಲಿ ದೊಡ್ಡ ಘೋಷಣೆ ಮಾಡುತ್ತಾ, ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸಿದ್ಧತೆ ಪ್ರಾರಂಭವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಶೀಘ್ರವೇ 91 ಸಾವಿರದ 142 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಸಿಎಂ ಕೆ. ಚಂದ್ರಶೇಖರ ರಾವ್ ಅವರು, ಇಂದಿನಿಂದ ಉದ್ಯೋಗಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ. 80,093 ಉದ್ಯೋಗಗಳಿಗೆ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಇನ್ನೂ 11,103 ಗುತ್ತಿಗೆ ಉದ್ಯೋಗಗಳನ್ನು ಕಾಯಂಗೊಳಿಸಲಾಗುವುದು ಎಂದು ಸಿಎಂ ಹೇಳಿದರು. 95ರಷ್ಟು ಹುದ್ದೆಗಳು ಸ್ಥಳೀಯರಿಗೆ, ಶೇಕಡ 5ರಷ್ಟು ಹುದ್ದೆಗಳು ಹೊರಗಿನವರಿಗೆ ಮಾತ್ರ ಎಂದು ಚಂದ್ರಶೇಖರ ರಾವ್ ಹೇಳಿದ್ದರು.
