ಅಹಮದಾಬಾದ್(ಏ.15): 2018ರಿಂದ ವಿಶ್ವದ ಅತೀ ಉದ್ದದ ಕೂದಲುಳ್ಳ ಬಾಲಕಿ ಎಂದೇ ಖ್ಯಾತಿ ಗಳಿಸಿದ್ದ ಗುಜರಾತ್‌ನ ಮೊಡಸಾದ ನಿಲಾಂಶಿ ಪಟೇಲ್ ಕೊನೆಗೂ ತಮ್ಮ ಉದ್ದದ ಕೇಶರಾಶಿಗೆ ಕತ್ತರಿ ಹಾಕಿದ್ದಾರೆ. ಬರೋಬ್ಬರಿ ಹ್ನನೆರಡು ವರ್ಷದ ಬಳಿಕ ಅವರು ತಮ್ಮ ಹೇರ್‌ಕಟ್‌ ಮಾಡಿಸಿಕೊಂಡಿದ್ದಾರೆ.

ನಿಲಾಂಶಿಯವರು ಹದಿನಾರು ವರ್ಷದವರಿದ್ದಾಗ ಅವರ ಕೂದಲು 170.5 ಸೆಂ. ಮೀ (5 ಅಡಿ 7 ಇಂಚು) ಉದ್ದವಿತ್ತು. ಕಳೆದ ಜುಲೈ, ಅಂದರೆ ನಿಲಾಂಶಿಯವರ ಹದಿನೆಂಟನೇ ವರ್ಷದ ಹುಟ್ಟುಹಬ್ಬದ ವೇಳೆ ಅವರ ಕೂದಲು 200 ಸೆಂ. ಮೀ (6 ಅಡಿ 6.7 ಇಂಚು)ನಷ್ಟು ಉದ್ದ ಬೆಳೆದಿತ್ತು. ಈ ಮೂಲಕ ಅವರು ವಿಶ್ವದ ಅತೀ ಉದ್ದದ ಕೂದಲಿರುವ ವ್ಯಕ್ತಿ ಎಂಬ ಹೆಗ್ಗಳಿಕೆ ಜೊತೆ, ವಿಶ್ವದ ಅತೀ ಉದ್ದದ ಕೂದಲುಳ್ಳ ಹದಿಹರೆಯದ ಬಾಲಕಿ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು.

24 ಗಂಟೆಯಲ್ಲಿ 2.5 ಕಿ.ಮೀ ಚತುಷ್ಪಥ ರಸ್ತೆ ನಿರ್ಮಿಸಿ ವಿಶ್ವ ದಾಖಲೆ ಬರೆದ ಭಾರತ!

ನಿಲಾಂಶಿ ಆರು ವರ್ಷದವರಿದ್ದಾಗ ತಮ್ಮ ಕೂದಲು ಕಟ್‌ ಮಾಡಿಸಿಕೊಳ್ಳುವುದನ್ನು ಬಿಟ್ಟಿದ್ದರು. ಇದಕ್ಕೆ ಕಾರಣ ಹೇರ್‌ ಕಟ್ಟಿಂಗ್ ಮಾಡುವಾತ ಕೆಟ್ಟದಾಗಿ ಕೂದಲು ಕಟ್‌ ಮಾಡಿದ್ದು. ತನ್ನ ಕೂದಲೇ ತನ್ನ 'ಲಕ್ಕಿ ಚಾರ್ಮ್' ಎನ್ನುತ್ತಿದ್ದ ನಿಲಾಂಶಿ ಹನ್ನೆರಡು ವರ್ಷಗಳವರೆಗೆ ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ.

ಆದರೆ ದಶಕಕ್ಕೂ ಅಧಿಕ ವರ್ಷ ಕೂದಲು ಬೆಳೆಸಿ, ಮೂರು ಗಿನ್ನೆಸ್ ವರ್ಲ್ಡ್‌ ರೆಕಾರ್ಡ್‌ ನಿರ್ಮಿಸಿರುವ ನಿಲಾಂಶಿ ಸದ್ಯ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ. ಕೂದಲು ಕತ್ತರಿಸಿಕೊಳ್ಳುವುದಕ್ಕೂ ಮುನ್ನ ಮಾತನಾಡಿದ ನಿಲಾಂಶಿ, ನನ್ನ ಕೂದಲು ನನಗೆ ಬಹಳಷ್ಟು ಕೊಡುಗೆ ನೀಡಿದೆ, ಈಗ ಬದಲಾವಣೆ ಸಮಯ ಎಂದಿದ್ದಾರೆ.

12,638 ವಜ್ರದಿಂದ ತಯಾರಾದ ಉಂಗುರ ಗಿನ್ನಿಸ್ ರೆಕಾರ್ಡ್‌

ಇನ್ನು ಕೂದಲು ಕತ್ತರಿಸಿಕೊಂಡಿಟ್ಟಿರುವ ನಿಲಾಂಶಿ ಇದನ್ನೇನು ಮಾಡುತ್ತಾರೆ ಎಂಬುವುದೇ ಎಲ್ಲರಿಗೂ ಇರುವ ಕುತೂಹಲ. ಯಾಕೆಂದರೆ ನಿಲಾಂಶಿ ಬಳಿ ಕತ್ತರಿಸಿದ ತಮ್ಮ ಕೂದಲನ್ನು ಹರಾಜು ಹಾಕುವ, ಚಾರಿಟಿಗೆ ದಾನ ಮಾಡುವ ಅಥವಾ ಮ್ಯೂಸಿಯಂಗೆ ದಾನ ಮಾಡುವ ಮೂರು ಆಯ್ಕೆಗಳಿವೆ.

ಈ ಬಗ್ಗೆಡ ತನ್ನ ತಾಯಿ ಜೊತೆ ಮಾತನಾಡಿ ನಿರ್ಧಾರ ತೆಗೆದುಕೊಂಡಿರುವ ನಿಲಾಂಶಿ, ತನ್ನಂತೆ ಇತರರೂ ತಮ್ಮ ಕೂದಲು ಬೆಳೆಸಿಕೊಳ್ಳಬೇಕು. ಇದು ಇತರರಿಗೆ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ಮ್ಯೂಸಿಯಂಗೆ ನೀಡಲು ಮುಂದಾಗಿದ್ದಾರೆ.