ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಆನ್‌ಲೈನ್ ಮೂಲಕ ಆಡಿ ಕಾರನ್ನು ಬಾಡಿಗೆಗೆ ಪಡೆದು ಅಜಾಗರೂಕತೆಯಿಂದ ಚಾಲನೆ ಮಾಡಿ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಓರ್ವ ಪಾದಚಾರಿ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಬಾಲಕನನ್ನು ಬಂಧಿಸಿದ್ದು, ಕಾರು ನೀಡಿದ ಕಂಪನಿಯ ವಿರುದ್ಧವೂ ತನಿಖೆ ನಡೆಸುತ್ತಿದ್ದಾರೆ.
ನವದೆಹಲಿ (ಅಕ್ಟೋಬರ್ 8): ನಮ್ಮ ದೇಶದಲ್ಲಿ ಅಪ್ರಾಪ್ತರು ಯಾವುದೇ ವಾಹನವನ್ನು ಓಡಿಸುವಂತಿಲ್ಲ. ಕಾನೂನು ಪ್ರಕಾರ ಲೈಸೆನ್ಸ್ ಕೂಡ ನೀಡುವಂತಿಲ್ಲ. ಆದರೆ ದೆಹಲಿಯಲ್ಲಿ 17 ವರ್ಷದ ಬಾಲಕ ಮಾಡಿದ ಕಿತಾಪತಿ ಅಂತಿಂಥದ್ದಲ್ಲ. ಆತ ಮಾಡಿರುವ ಅನಾಹುತಕ್ಕೆ ಯಾರೆಲ್ಲ ತಗ್ಲಾಕಿಕೊಂಡಿದ್ದಾರೆ? ಯಾರೆಲ್ಲ ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ.. 17 ವರ್ಷದ ಬಾಲಕ. ಆತನ ಸ್ನೇಹಿತನ ಹುಟ್ಟುಹಬ್ಬ ಆಗಿತ್ತು. ಹೀಗಾಗಿ ಐಷಾರಾಮಿ ಆಡಿ ಕಾರನ್ನು ಬಾಡಿಗೆ ಪಡೆದು ಹೊರಟಿದ್ದ. ಕಾರು ಓಡಿಸುವ ಕ್ರೇಜ್‌ಗೆ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಓರ್ವ ಪಾದಚಾರಿ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾಕ್ಕೆ ಕಾರಣ ಏನು?
ಪೊಲೀಸ್ ತನಿಖೆ ವೇಳೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಅಪಘಾತ ಮಾಡಿದ ಬಾಲಕ.. ಆನ್‌ಲೈನ್ ಆಪ್ ಮೂಲಕ ರಾತ್ರಿ 16 ಸಾವಿರ ರೂಪಾಯಿಗೆ ಆಡಿ ಕಾರನ್ನು ಬಾಡಿಗೆ ಪಡೆದುಕೊಂಡಿದ್ದ. ಅಕ್ಟೋಬರ್ 4 ರಂದು ಬೆಳಗಿನ ಜಾವ 2.30ರ ಸುಮಾರಿಗೆ ಕಿಶನ್‌ಗಢ ಕೆಂಪುದೀಪದಲ್ಲಿರುವ ಸಿಎನ್‌ಜಿ ಪಂಪ್ ಬಳಿ ಅಪಘಾತ ಮಾಡಿದ್ದಾನೆ.
ಪೊಲೀಸರ ಪ್ರಕಾರ.. ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ. ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ 45 ವರ್ಷದ ಉಮಾಶಂಕರ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸರು ಅಪರಾಧಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿದ್ದರು. ಅಪರಾಧಕ್ಕೆ ಕಾರಣವಾಗಿದ್ದ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಬಿಎನ್‌ಎಸ್ ಸೆಕ್ಷನ್ 281, 106 (1) ಮೋಟಾರ್ ವಾಹನ ಕಾಯ್ದೆ ಸೆಕ್ಷನ್ 3/181 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬಾಲಕನಿಗೆ ಕಾರನ್ನು ಬಾಡಿಗೆಗೆ ನೀಡಿದ್ದ ಕಂಪನಿಯ ಪ್ರಮುಖರನ್ನೂ ವಿಚಾರಣೆ ನಡೆಸ್ತಿದ್ದಾರೆ.
ಅಲ್ಲದೇ ಅಪಘಾತ ಹೇಗಾಯಿತು? ಉದ್ದೇಶಪೂರ್ವಕವಾಗಿ ನಡೆಯಿತಾ ಎಂದು ತಿಳಿದುಕೊಳ್ಳಲು ಸಿಸಿಟಿವಿಯನ್ನ ವಶಕ್ಕೆ ಪಡೆದಿದ್ದಾರೆ. ಅಪಘಾತದ ವೇಳೆ ಆಡಿ ಕಾರಿನಲ್ಲಿ ಒಬ್ಬನೇ ಇದ್ದನೇ? ಅಥವಾ ಬೇರೆ ಯಾರಾದರೂ ಇದ್ದರೇ ಅನ್ನೋದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಪ್ರಪ್ತನಿಗೆ ಕಾರು ನೀಡಿದ ಆರೋಪದ ಮೇಲೆ ಕಂಪನಿ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬಹುದು ಅನ್ನೋದ್ರ ಬಗ್ಗೆ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಇನ್ನು ಅಪಘಾತದಲ್ಲಿ ಆಡಿ ಕಾರು ಕೂಡ ಪುಡಿಪುಡಿಯಾಗಿದೆ. ರಾತ್ರಿ ವೇಳೆ ಅಪಘಾತ ಹಿನ್ನೆಲೆಯಲ್ಲಿ ದುರಂತಗಳು ತಪ್ಪಿವೆ. ಒಂದು ವೇಳೆ ಹಗಲಲ್ಲಿ ಅಪಘಾತ ನಡೆದಿದ್ದರೆ ಆ ಪ್ರದೇಶದಲ್ಲಿ ಜನಜಂಗುಳಿ ತುಂಬಿರುತ್ತಿತ್ತು. ಇದರಿಂದ ತುಂಬಾ ಅನಾಹುತ ಆಗುವ ಸಾಧ್ಯತೆ ಹೆಚ್ಚಾಗಿತ್ತು. ಸದ್ಯ ಬಾಲಾಪರಾಧಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರಿದಿದೆ..


