* ಕೊರೋನಾ ಲಸಿಕೆ ಉಚಿತವಾಗಿ ನಿಡುತ್ತಿರುವ ಸರ್ಕಾರ* ಉಚಿತ ಕೋವಿಡ್‌ ಲಸಿಕೆ ಕೊಟ್ಟಿದ್ದರಿಂದ ಪೆಟ್ರೋಲ್‌ ದರ ಹೆಚ್ಚಳ: ಸಚಿವ ತೇಲಿ* ಪ್ರತಿ ಡೋಸ್‌ ಲಸಿಕೆಗೆ 1,200 ರು. ವೆಚ್ಚವಾಗುತ್ತದೆ

ಗುವಾಹಟಿ(ಅ.12): ಜನರಿಗೆ ಕೋವಿಡ್‌ ಲಸಿಕೆಯನ್ನು ಉಚಿತವಾಗಿ(Free Covid Vaccine) ನೀಡುತ್ತಿರುವ ಕಾರಣ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ ಎಂದು ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವರ್‌ ತೇಲಿ(Union Minister of State for Petroleum and Natural Gas Rameswar Teli) ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮೇಶ್ವರ್‌ ತೇಲಿ(Rameswar Teli) ‘‘ಪೆಟ್ರೋಲ್‌(Petrol) ಬೆಲೆ ದುಬಾರಿಯಲ್ಲ. ಕೇಂದ್ರ ಮತ್ತು ರಾಜ್ಯಗಳು ವಿಧಿಸುತ್ತಿರುವ ತೆರಿಗೆಯಿಂದಾ(tax) ಅದು ದುಬಾರಿಯಾಗುತ್ತಿದೆ. ನೀವೆಲ್ಲರೂ ಉಚಿತವಾಗಿ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದೀರಿ. ಅದನ್ನು ಪೂರೈಕೆ ಮಾಡಲು ಹಣ ಎಲ್ಲಿಂದ ಬಂದಿತು. ದೇಶದ 130 ಕೋಟಿ ಜನರಿಗೆ ಉಚಿತವಾಗಿ 2 ಡೋಸ್‌ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಡೋಸ್‌ ಲಸಿಕೆಗೆ 1,200 ರು. ವೆಚ್ಚವಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗಲಿದೆ. ಲಸಿಕೆಗಾಗಿ(vaccine) ಹಣವನ್ನು ಪೆಟ್ರೋಲ್‌ ತೆರಿಗೆಯ ಮೂಲಕ ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

‘ಹಿಮಾಲಯದ ನೀರಿನ ಒಂದು ಬಾಟಲ್‌ ಖರೀದಿಸುವುದಕ್ಕೆ ಸುಮಾರು 100 ರು. ನೀಡಬೇಕು. ಆದರೆ ಪೆಟ್ರೋಲ್‌ ಅದಕ್ಕಿಂತ ಅಗ್ಗವಾಗಿ ದೊರೆಯುತ್ತದೆ. ಪೆಟ್ರೋಲ್‌ ಬೆಲೆಯನ್ನು ನಮ್ಮ ಸಚಿವಾಲಯ ನಿರ್ಧರಿಸುವುದಿಲ್ಲ. ಕಚ್ಚಾ ತೈಲದ ಬೆಲೆಯಲ್ಲಿ ಬದಲಾವಣೆ ಉಂಟಾದರೆ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲೂ ಬದಲಾವಣೆ ಉಂಟಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ವಾರದಲ್ಲಿ ಪೆಟ್ರೋಲ್‌ 2.13 ರು., ಡೀಸೆಲ್‌ 2.55 ರು. ಹೆಚ್ಚಳ

ಸೋಮವಾರ ಕೂಡಾ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕ್ರಮವಾಗಿ 30 ಮತ್ತು 35 ಪೈಸೆಯಷ್ಟುಹೆಚ್ಚಳ ಮಾಡಿವೆ. ಇದರೊಂದಿಗೆ ಕಳೆದೊಂದು ವಾರದಲ್ಲಿ ಬೆಂಗಳೂರಿನಲ್ಲಿ 1 ಲೀಟರ್‌ ಪೆಟ್ರೋಲ್‌ ಬೆಲೆ 2.13 ರು.ನಷ್ಟುಮತ್ತು ಡೀಸೆಲ್‌ ಬೆಲೆ 2.55 ರು.ನಷ್ಟು ಹೆಚ್ಚಳವಾದಂತೆ ಆಗಿದೆ.

ಸೋಮವಾರದ ದರ ಏರಿಕೆ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀ.ಗೆ 108.08 ರು. ಮತ್ತು ಡೀಸೆಲ್‌ ದರ 98.89 ರು.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ನಿರಂತರವಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಹೆಚ್ಚಳ ಮಾಡುತ್ತಿವೆ.

ರಾಜ್ಯದಲ್ಲಿ 110 ರೂ ಗಡಿ ದಾಟಿದ ಪೆಟ್ರೋಲ್‌

ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯದಲ್ಲಿ(karnataka) ಲೀಟರ್‌ಗೆ 100 ರು. ಗಡಿ ದಾಟಿದ್ದ ಪೆಟ್ರೋಲ್‌(Petrol) ಇದೀಗ 110 ರು. ಗಡಿ ದಾಟಿ ವಾಹನ ಸವಾರರ ಜೇಬಿಗೆ ಬಿಸಿ ಮುಟ್ಟಿಸಿದೆ. ರಾಜ್ಯದಲ್ಲಿ ಮೊದಲ ಬಾರಿ ಉತ್ತರ ಕನ್ನಡದ ಶಿರಸಿಯಲ್ಲಿ(Sirsi, Uttara Kannada) ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 110.33 ರು. ಆಗಿದೆ. ಇದೇ ವೇಳೆ, ರಾಜ್ಯದ ಇನ್ನೂ 4 ಕಡೆ ಡೀಸೆಲ್‌(Diesel) ಬೆಲೆ 100 ರು. ಗಡಿ ದಾಟಿದೆ.

ಸತತ 7ನೇ ದಿನವೂ ಸೋಮವಾರ ದೇಶದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ಅದರ ಪರಿಣಾಮ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 31 ಪೈಸೆ ಮತ್ತು ಡೀಸ್‌ಲ್‌ಗೆ 37 ಪೈಸೆ ಏರಿಕೆಯಾಗಿದೆ. ಒಟ್ಟಾರೆ ಕಳೆದ 11 ದಿನಗಳಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ .3.15 ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ .3.81ರವರೆಗೆ ಹೆಚ್ಚಳವಾಗಿದೆ.