* 6 ವರ್ಷದಿಂದ ತೆರಿಗೆ ಪಾವತಿಸದೇ ವಂಚನೆ: ತೆರಿಗೆ ಇಲಾಖೆ* ದೈನಿಕ್‌ ಭಾಸ್ಕರ್‌ ಸಮೂಹದ 700 ಕೋಟಿ ತೆರಿಗೆ ವಂಚನೆ ಪತ್ತೆ

ನವದೆಹಲಿ(ಜು.25): ‘ದೈನಿಕ್‌ ಭಾಸ್ಕರ್‌ ಮಾಧ್ಯಮ ಸಂಸ್ಥೆಯ ಮೇಲೆ ನಡೆದ ದಾಳಿಯ ವೇಳೆ ಕಳೆದ ಆರು ವರ್ಷಗಳಿಂದ 700 ಕೋಟಿ ರು. ತೆರಿಗೆ ಪಾವತಿಸದೇ ವಂಚನೆ ಎಸಗಿರುವ ಸಂಗತಿ ಬೆಳಕಿಗೆ ಬಂದಿದೆ’ ಎಂದು ತೆರಿಗೆ ಇಲಾಖೆ ಶನಿವಾರ ತಿಳಿಸಿದೆ. ಇದೇ ವೇಳೆ, ‘ಸಂಸ್ಥೆ ಅನುಮಾನಾಸ್ಪದವಾಗಿ 2,200 ಕೋಟಿ ರು. ವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆದಿದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ಜು.22ರಂದು ದೈನಿಕ್‌ ಭಾಸ್ಕರ್‌ ಹಾಗೂ ಉತ್ತರ ಪ್ರದೇಶದ ಭಾರತ್‌ ಸಮಾಚಾರ್‌ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದ್ದವು. ಭೋಪಾಲ್‌ನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿರುವ ದೈನಿಕ್‌ ಭಾಸ್ಕರ್‌, ವಿವಿಧ ಉದ್ಯಮದಲ್ಲಿ ತೊಡಗಿಕೊಂಡಿದ್ದು, ವಾರ್ಷಿಕ 6000 ಕೋಟಿ ವಹಿವಾಟು ನಡೆಸುತ್ತಿದೆ. ತನಿಖೆಯ ವೇಳೆ ಕಾಲ್ಪನಿಕ ವ್ಯವಹಾರಗಳಿಗೆ 2,200 ಕೋಟಿ ರು. ವರ್ಗಾವಣೆ ಮಾಡಿರುವುದು ಹಾಗೂ ಉದ್ಯೋಗಿಗಳ ಹೆಸರಿನಲ್ಲಿ ಹಲವು ಕಂಪನಿಗಳನ್ನು ನಡೆಸುತ್ತಿರುವ ಸಂಗತಿ ಬಯಲಾಗಿದೆ. ಈ ಕಂಪನಿಗಳ ಹೆಸರಿನಲ್ಲಿ ನಕಲಿ ಖರ್ಚು- ವೆಚ್ಚಗಳನ್ನು ತೋರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಲಖನೌದ ಹಿಂದಿ ಸುದ್ದಿವಾಹಿನಿ ಭಾರತ್‌ ಸಮಾಚಾರ, ಅನಾಮಧೇಯ ರೀತಿ 200 ಕೋಟಿ ರು. ವರ್ಗ ಮಾಡಿರುವ ಬಗ್ಗೆ ತನಿಖೆ ನಡೆದಿದೆ ಎಂದು ಹೇಳಿದ್ದಾರೆ.