1999ರ ಕಾರ್ಗಿಲ್ ಯುದ್ಧದ ಸಮಯ ಪಾಕ್ ದಾಳಿ ಬಗ್ಗೆ ಸೇನೆಗೆ ಮೊದಲ ಮಾಹಿತಿ ಕೊಟ್ಟಿದ್ದ ತಾಶಿ ನಿಧನ!
1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಒಳನುಸುಳುವಿಕೆಯ ಬಗ್ಗೆ ಭಾರತೀಯ ಸೇನೆಗೆ ಮೊದಲು ಮಾಹಿತಿ ನೀಡಿದ್ದ ಕುರಿಗಾಹಿ ತಾಶಿ ನಮ್ಗ್ಯಾಲ್ ನಿಧನರಾಗಿದ್ದಾರೆ. ತಾಶಿ ಅವರು ಕಾಣೆಯಾದ ಯಾಕ್‌ಗಳನ್ನು ಹುಡುಕುತ್ತಿದ್ದಾಗ ಪಾಕಿಸ್ತಾನಿ ನುಸುಳುಕೋರರನ್ನು ಗುರುತಿಸಿ ಮಾಹಿತಿ ನೀಡಿದ್ದರು.
ಲಡಾಖ್ (ಡಿ.22): ಕಾರ್ಗಿಲ್ ಪ್ರದೇಶದಲ್ಲಿ 1999ರಲ್ಲಿ ಪಾಕಿಸ್ತಾನ ಸೇನೆ ಒಳನುಸುಳಿರುವ ಬಗ್ಗೆ ಭಾರತೀಯ ಸೇನೆಗೆ ಮೊತ್ತಮೊದಲು ಮಾಹಿತಿ ಕೊಟ್ಟಿದ್ದ ಕುರಿಗಾಹಿ ತಾಶಿ ನಮ್ಗ್ಯಾಲ್ (58) ಲಡಾಖ್‌ನ ಆರ್ಯನ್ ಕಣಿವೆಯಲ್ಲಿ ನಿಧನರಾಗಿದ್ದಾರೆ.
ತಾಶಿ ಅವರಿಗೆ ಭಾರತೀಯ ಸೇನೆ ಶ್ರದ್ಧಾಂಜಲಿ ಸಲ್ಲಿಸಿದ್ದು, ‘ಒಬ್ಬ ದೇಶಭಕ್ತ ನಮ್ಮನ್ನು ಅಗಲಿದ್ದಾರೆ. ಲಡಾಖ್‌ನ ಧೈರ್ಯಶಾಲಿಗೆ ಶಾಂತಿ ಸಿಗಲಿ. ಆಪರೇಷನ್ ವಿಜಯ್‌ಗೆ ಅವರು ನೀಡಿದ ಕೊಡುಗೆಯನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗುವುದು’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಈ ವರ್ಷ ಜು.26ರಂದು ನಡೆದ 25ನೇ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ತಾಶಿ ತಮ್ಮ ಪುತ್ರಿ ತ್ಸೆರಿಂಗ್ ಡೋಲ್ಕರ್ ಅವರೊಂದಿಗೆ ಭಾಗಿಯಾಗಿದ್ದರು.
PM Modi in Kuwait: ಪ್ರಧಾನಿ ಮೋದಿ ಕುವೈತ್ ಭೇಟಿಯಿಂದ ಭಾರತಕ್ಕೇನು ಲಾಭ?
ತಾಶಿ ಅವರ ಕೊಡುಗೆಯೇನು?:
ಮೇ ತಿಂಗಳ ಒಂದು ದಿನ ತಾಶಿ ತಮ್ಮ ಕಾಣೆಯಾದ ಯಾಕ್‌ಗಳನ್ನು ಹುಡುಕುತ್ತಿದ್ದಾಗ ಕೆಲವರು ಬಟಾಲಿಕ್ ಪರ್ವತದ ಬಳಿ ಬಂಕರ್ ತೋಡುವುದನ್ನು ಕಂಡರು. ಅವರು ಪಠಾಣಿ(ಪಾಕಿಸ್ತಾನದ) ಪೋಷಾಕಿನಲ್ಲಿದ್ದುದನ್ನು ಗಮನಿಸಿದ ತಾಶಿ, ಕೂಡಲೇ ಭಾರತೀಯ ಸೇನೆಗೆ ಮಾಹಿತಿ ನೀಡಿದರು. ಇದರಿಂದ ಎಚ್ಚೆತ್ತ ಸೇನೆಗೆ, ಸಮಯ ಕೈಮೀರುವ ಮೊದಲೇ ಸನ್ನದ್ಧವಾಗಲು ಅನುಕೂಲವಾಯಿತು.
ಬಳಿಕ ನಿಯಮ ಉಲ್ಲಂಘಿಸಿ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನದ ನುಸುಳುಕೋರರೊಂದಿಗೆ ಮೇ.3ರಿಂದ ಜು.26ರ ವರೆಗೆ ‘ಆಪರೇಷನ್ ವಿಜಯ್’ ಹೆಸರಲ್ಲಿ ಕಾರ್ಯಾಚರಣೆಗಿಳಿದು ಸೆಣೆಸಿದ ಭಾರತೀಯ ಸೇನೆ ಕಾರ್ಗಿಲ್ ಪ್ರಾಂತ್ಯವನ್ನು ಮರುವಶಪಡಿಸಿಕೊಂಡಿತು.