ಭಾರತೀಯರೆಂದು ಸಾಬೀತಿಗೆ ಹಿಂದಿ ಕಲೀಬೇಕಿಲ್ಲ: ಅಣ್ಣಾಮಲೈ

* ಹಿಂದಿ ಕಲಿಬೇಕಾಗಿರುವುದು ಕಡ್ಡಾಯವಲ್ಲ

* ರಾಷ್ಟ್ರೀಯ ಸಂಪರ್ಕ ಭಾಷೆಯಾಗುವ ಎಲ್ಲಾ ಅರ್ಹತೆ ತಮಿಳು ಭಾಷೆಗೆ ಇದೆ

* ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ

Tamil Nadu BJP will not accept Hindi imposition says state party chief Annamalai pod

ಚೆನ್ನೈ(ಏ.14): ಭಾರತೀಯರು ಎಂದು ನಮ್ಮನ್ನು ನಾವು ಸಾಬೀತು ಮಾಡಿಕೊಳ್ಳಲು ಹಿಂದಿ ಕಲಿಬೇಕಾಗಿರುವುದು ಕಡ್ಡಾಯವಲ್ಲ. ರಾಷ್ಟ್ರೀಯ ಸಂಪರ್ಕ ಭಾಷೆಯಾಗುವ ಎಲ್ಲಾ ಅರ್ಹತೆ ತಮಿಳು ಭಾಷೆಗೆ ಇದೆ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವಾಗಲೀ, ಜನರಾಗಲೀ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯವರೇ ಆದ ಅಣ್ಣಾಮಲೈ ಹೇಳಿಕೆಗೆ ಮಹತ್ವ ಬಂದಿದೆ.

‘ಭಾರತೀಯರು ಎಂದು ಸಾಬೀತು ಮಾಡಲು ಒಂದು ಭಾಷೆಯನ್ನು ಕಲಿಯಬೇಕಾದ ಕಡ್ಡಾಯ ಸ್ಥಿತಿ ಇಲ್ಲ. ಉದ್ಯೋಗ ಅಥವಾ ಜೀವನಕ್ಕೆ ಅಗತ್ಯವಿದ್ದರೆ ಅವರಾಗಿಯೇ ಹಿಂದಿ ಕಲಿಯುತ್ತಾರೆ. ನಾವು ಯಾವುದೇ ಭಾಷೆಯನ್ನು ವಿರೋಧಿಸುತ್ತಿಲ್ಲ. ಆದರೆ ತಮಿಳನ್ನು ಬದಲಾಯಿಸುವ ಯಾವುದೇ ಭಾಷೆ ಹೇರಿಕೆಯನ್ನು ನಾವು ಸಹಿಸುವುದಿಲ್ಲ. ಭಾರತ ವಿಶ್ವಗುರು ಆಗಬೇಕು ಎಂದು ನಾವು ಬಯಸುತ್ತೇವೆ. ಅದೇ ರೀತಿ ತಮಿಳುನಾಡು ಭಾರತದ ಗುರು ಆಗಬೇಕು’ ಎಂದು ಹೇಳಿದ್ದಾರೆ.

ಶಾ ಹಿಂದಿ ಹೇಳಿಕೆ: ತೆಲಂಗಾಣ ಸರ್ಕಾರ, ಡಿಎಂಕೆ ವಿರೋಧ

ದೇಶದ ರಾಜ್ಯಗಳು ಇಂಗ್ಲಿಷ್‌ ಬದಲಿಗೆ ಹಿಂದಿಯನ್ನು ಸಂವಹನ ಭಾಷೆಯನ್ನಾಗಿ ಬಳಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಗೆ ತಮಿಳುನಾಡಿನ ಡಿಎಂಕೆ ಹಾಗೂ ತೆಲಂಗಾಣದ ಪ್ರಭಾವಿ ಸಚಿವ ಕೆ.ಟಿ ರಾಮ ರಾವ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮಿಳುನಾಡಿನ ಆಡಳಿತರೂಢ ಡಿಎಂಕೆಯ ಮುಖವಾಣಿ ಪತ್ರಿಕೆಯಲ್ಲಿ ಬರೆಯಲಾಗಿದ್ದು, ಮಾಜಿ ಸಿಎಂ ಕರುಣಾನಿಧಿಯವರ ಘೋಷಣೆಯೊಂದರ ಮೂಲಕ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಬಲವಂತದ ಭಾಷಾ ಕಲಿಕೆಯ ಹೇರಿಕೆ ಸಲ್ಲದು ಎಂದಿದೆ. ಇದರ ವಿರುದ್ಧ ಒಂದಾಗಲು ಜನತೆಗೆ ಕರೆಯನ್ನೂ ಕೊಟ್ಟಿದೆ.

ಏತನ್ಮಧ್ಯೆ ತೆಲಂಗಾಣದ ಪ್ರಭಾವಿ ಸಚಿವ ಕೆ.ಟಿ. ರಾಮರಾವ್‌ ಕೂಡ ಇದನ್ನು ವಿರೋಧಿಸಿದ್ದು, ‘ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ನಾವೆಲ್ಲರೂ ವಸುಧೈವ ಕುಟುಂಬಂ ಎಂಬಂತೆ ಬಾಳುವವರು. ಆದ್ದರಿಂದ ನಾವು ಹಿಂದಿಯನ್ನೇ ಕಲಿಯಬೇಕು ಎಂದು ಕಡ್ಡಾಯಗೊಳಿಸುವುದು ಅಸಮಂಜಸ. ಬದಲಿಗೆ ಸ್ಥಳೀಯ ಭಾಷೆ ಜೊತೆಗೆ ಹಿಂದಿ ಪರ್ಯಾಯವಾಗಿರಬೇಕಷ್ಟೆ’ ಎಂದು ಎಂದಿದ್ದಾರೆ.

ಕರ್ನಾಟಕದಲ್ಲಿ ಎಂದಿಗೂ ಹಿಂದಿ ಹೇರಿಕೆ ಆಗೋಲ್ಲ

 

ಕರ್ನಾಟಕದಲ್ಲಿ ಎಂದಿಗೂ ಹಿಂದಿ ಹೇರಿಕೆ ಆಗೋಲ್ಲ. ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಬಸವಕಲ್ಯಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಮಿತ್‌ ಶಾ ಅವರು ಹಿಂದಿ ಹೇರುವಂತೆಯೂ, ಕಡ್ಡಾಯವಂತೂ ಹೇಳಿಲ್ಲ ಆದರೆ ಅವರ ಮಾತನ್ನು ಅನಗತ್ಯವಾಗಿ ಕೆಲವರು ತಪ್ಪಾಗಿ ಅರ್ಥೈಸಿ ಜನರ ಮುಂದಿಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿಂದಿ ಹೇರಿಕೆ ಗುಲಾಮಗಿರಿತನದ ಹೆಗ್ಗುರುತು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಮುಸ್ಲಿಂ ಚಾಲಕರ ಬಾಯ್ಕಾಟ್‌ ವಿಚಾರವಾಗಿ ಭಾರತೀಯ ರಕ್ಷಣಾ ಸಮಿತಿ ನೀಡಿರುವ ಅಭಿಯಾನದ ಹೇಳಿಕೆ ಬಗ್ಗೆಯೂ ಸಿಎಂ ಪ್ರತಿಕ್ರಿಯಿಸಿ, ಇದನ್ನೆಲ್ಲ ಸರ್ಕಾರ ಒಪ್ಪೊಲ್ಲ, ಸರ್ವ ಧರ್ಮ ಸಮನ್ವಯತೆಯು ಸರ್ಕಾರದ ಧ್ಯೇಯ. ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ್‌ ಅವರ ವಕ್ಫ್ ಬೋರ್ಡ ಬ್ಯಾನ್‌ ಅಭಿಯಾನದ ಬಗ್ಗೆಯೂ ಪ್ರತಿಕ್ರಿಯಿಸಿ, ಸರ್ಕಾರ ಕಾನೂನಿನಂತೆ ನಡೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಮುತಾಲಿಕ್‌ ಮಾತಿಗೆ ಬೆಂಬಲ ಇಲ್ಲ ಎಂಬುವದನ್ನು ಪರೋಕ್ಷವಾಗಿ ತಿಳಿಸಿದರು. ಅಲ್ಲದೆ ಅರ್ಚಕರ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ನಮಗೆ ಅರ್ಚಕರ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios