ಚೆನ್ನೈ(ಸೆ.16): ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತೊಮ್ಮೆ ಹೇಳಿದ್ದಾರೆ.

ಸೋಮವಾರವಷ್ಟೇ ಕರ್ನಾಟಕ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಿದ್ದರು. ‘ಕೇಂದ್ರ ಅರಣ್ಯ ಹಾಗೂ ಜಲಶಕ್ತಿ ಸಚಿವರನ್ನು ಮುಂದಿನ ವಾರ ಮುಖ್ಯ​ಮಂತ್ರಿ​ ಬಿ.ಎಸ್‌. ಯಡಿಯೂರಪ್ಪ ನೇತೃ​ತ್ವ​ದಲ್ಲಿ ಭೇಟಿಯಾಗಲಿ​ದ್ದೇವೆ. ಯೋಜ​ನೆಯ ಪರಿ​ಷ್ಕೃತ ಪ್ರಸ್ತಾ​ವ​ನೆ​ ಸಲ್ಲಿಸಿ ಒಪ್ಪಿಗೆ ಪಡೆಯುತ್ತೇವೆ’ ಎಂದಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿಗಳು ಇದಕ್ಕೆ ಅಡ್ಡಗಾಲು ಹಾಕುವ ಮಾತುಗಳನ್ನು ಆಡಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಪಳನಿಸ್ವಾಮಿ ಅವರು, ‘ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಸ್ಪಷ್ಟವಾಗಿದೆ. ತಮಿಳುನಾಡಿಗೆ ಎಷ್ಟುನೀರು ಕೊಡಬೇಕೋ ಅಷ್ಟುನೀರನ್ನು ಕರ್ನಾಟಕ ಬಿಡಲೇಬೇಕು. ಕರ್ನಾಟಕವು ಕಾವೇರಿ ನದಿಯನ್ನು ತಿರುಗಿಸುವುದು ಅಥವಾ ತಮಿಳುನಾಡಿನತ್ತ ಹರಿಯುವ ನೀರಿಗೆ ತಡೆ ಒಡ್ಡುವುದನ್ನು ಮಾಡಕೂಡದು ಎಂದು ಸುಪ್ರೀಂ ಕೋರ್ಟ್‌ ಆದೇಶವೇ ಸ್ಪಷ್ಟವಾಗಿ ಹೇಳಿದೆ’ ಎಂದರು.

ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕ ಸಂಕಲ್ಪ ಮಾಡಿದ್ದು, ಇದಕ್ಕೆ ತಮಿಳುನಾಡು ಮೊದಲಿನಿಂದಲೂ ವಿರೋಧಿಸುತ್ತಲೇ ಇದೆ. ಸುಪ್ರೀಂ ಕೋರ್ಟ್‌ ಕದವನ್ನೂ ಬಡಿದಿದೆ.