ನವದೆಹಲಿ(ಮಾ.03): ಡಿಜಿಟಲ್‌ ಮೀಡಿಯಾಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಠಿಣ ನಿಯಮಾವಳಿಗಳನ್ನು ಘೋಷಿಸಿದ ಬೆನ್ನಲ್ಲೇ, ಆ ನಿಯಮಗಳ ಆಧಾರದಲ್ಲಿ ಮಣಿಪುರದ ಆನ್‌ಲೈನ್‌ ವೇದಿಕೆಯೊಂದಕ್ಕೆ ದೇಶದಲ್ಲೇ ಮೊದಲ ಬಾರಿಗೆ ಲೀಗಲ್‌ ನೋಟಿಸ್‌ ಜಾರಿ ಮಾಡಲಾಗಿದೆ.

‘ಖಾನಾಸಿ ನೀನಾಸಿ’ ಎಂಬ ಹೆಸರಿನಲ್ಲಿ ವಾರಾಂತ್ಯಗಳಲ್ಲಿ ವಾಕ್‌ ಸ್ವಾತಂತ್ರ್ಯದ ಕುರಿತು ಕಾರ್ಯಕ್ರಮ ನಡೆಸುವ ಫೇಸ್‌ಬುಕ್‌ ಪುಟದ ಪ್ರಕಾಶಕರಿಗೆ ಮಾ.1ರ ಸೋಮವಾರ ಇಂಫಾಲ ಪೂರ್ವ ಜಿಲ್ಲೆಯ ಜಿಲ್ಲಾಧಿಕಾರಿ ನೌರೆಮ್‌ ಪ್ರವೀಣ್‌ ಸಿಂಗ್‌ ಅವರು ನೋಟಿಸ್‌ ಜಾರಿ ಮಾಡಿದ್ದಾರೆ. 6ರಿಂದ 7 ಸಮವಸ್ತ್ರಧಾರಿ ಪೊಲೀಸರು ಫೇಸ್‌ಬುಕ್‌ ಪುಟ ಮುನ್ನಡೆಸುತ್ತಿರುವ ಫ್ರಂಟಿಯರ್‌ ಮಣಿಪುರ್‌ ಸಂಪಾದಕ ಪೌಜೆಲ್‌ ಚಾವೋಬಾ ಅವರನ್ನು ಭೇಟಿಯಾಗಿ ಮಂಗಳವಾರ ಬೆಳಗ್ಗೆ 9ಗಂಟೆಗೆ ಈ ನೋಟಿಸ್‌ ಜಾರಿ ಮಾಡಿದ್ದಾರೆ.

ನೋಟಿಸ್‌ ಏಕೆ?:

ಖಾನಾಸಿ ನೀನಾಸಿ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರತಿವಾರ ವಾಕ್‌ ಸ್ವಾತಂತ್ರ್ಯ ಕುರಿತು ಆನ್‌ಲೈನ್‌ ಸಂವಾದ ನಡೆಯುತ್ತದೆ. ಮಣಿಪುರ ಮಾತ್ರವಲ್ಲದೆ ವಿವಿಧೆಡೆಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇಲ್ಲಿವರೆಗೆ 4 ಸಂವಾದಗಳು ನಡೆದಿವೆ. ಕಳೆದ ಸಂವಾದದಲ್ಲಿ ಡಿಜಿಟಲ್‌ ಮೀಡಿಯಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ನಿಯಮಗಳ ಕುರಿತು ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದು, ಮಾಹಿತಿ ತಂತ್ರಜ್ಞಾನದ ನಿಯಮಾವಳಿಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂಬುದರ ಕುರಿತು ದಾಖಲೆಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.