ನವದೆಹಲಿ[ಜ.13]: ಭಾರತದ ಸಂಸತ್ತು ಒಪ್ಪಿದ್ದೇ ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರು ವಶ ಮಾಡಿಕೊಳ್ಳಲು ಸೇನೆ ಸರ್ವಸನ್ನದ್ಧವಾಗಿದೆ ಎಂದಿರುವ ಭಾರತ ಸೇನೆಯ ನೂತನ ಮುಖ್ಯಸ್ಥ ಜ| ಎಂ.ಎಂ ನರವಣೆ ಅವರಿಗೆ, ‘ಕಡಿಮೆ ಮಾತನಾಡಿ, ಹೆಚ್ಚು ಕೆಲಸ ಮಾಡಿ’ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಸಲಹೆ ನೀಡಿದ್ದಾರೆ.

ಸಂಸತ್ ಆದೇಶಕ್ಕಾಗಿ ಕಾಯುತ್ತಿದ್ದೇವೆ: ಸೇನಾ ಮುಖ್ಯಸ್ಥರ ಸ್ಫೋಟಕ ಹೇಳಿಕೆ!

ಈ ಬಗ್ಗೆ ಭಾನುವಾರ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಸಂಸದ ಚೌಧರಿ, ‘ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಭಾಗ ಎಂಬ ಗೊತ್ತುವಳಿಯನ್ನು ಭಾರತದ ಸಂಸತ್ತು 1994ರಲ್ಲೇ ಅಳವಡಿಸಿಕೊಂಡಿದೆ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಹಾಗೂ ಸೇನೆಗೆ ನಿರ್ದೇಶನ ನೀಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಸರ್ಕಾರ ಹೊಂದಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಕುರಿತಾಗಿ ನೀವು ಮಾತನಾಡಲೇಬೇಕು ಎಂದಾದರೆ, ಪ್ರಧಾನಿ ಕಚೇರಿ ಹಾಗೂ ಸಂಯೋಜಿತ ರಕ್ಷಣಾ ಸೇವೆಗಳ ಜೊತೆ ಹರಟೆ ಹೊಡೆಯಿರಿ. ಆದಾಗ್ಯೂ, ಹೆಚ್ಚು ಕೆಲಸ ಮಾಡಿ, ಕಡಿಮೆ ಮಾತನಾಡಿ’ ಎಂದು ವ್ಯಂಗ್ಯ ರೂಪದ ಕಿವಿಮಾತು ಹೇಳಿದ್ದಾರೆ.

'ಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದಿರುವ ನರವಣೆ, ಸಂಸತ್ತು ಅನುಮತಿ ನೀಡಿದರೆ ಪಿಒಕೆ ಮೇಲೆ ದಾಳಿಗೆ ಸರ್ವ ಸನ್ನದ್ಧವಾಗಿದ್ದೇವೆ. ಸರ್ಕಾರ ಆದೇಶಿಸುವ ಯಾವುದೇ ಕಾರ್ಯಾಚರಣೆಯನ್ನು ಸಫಲಗೊಳಿಸುವುದು ಸೇನೆಯ ಜವಾಬ್ದಾರಿಯಾಗಿದ್ದು, ಸಂಸತ್ತು ಪಿಒಕೆ ಮರುವಶ ಬಯಸಿದರೆ ಅದಕ್ಕೆ ನಾವು ಸಿದ್ಧ' ಎಂದು ನರವಣೆ ಹೇಳಿದ್ದರು.