ಬಾಂಗ್ಲಾದಲ್ಲಿ ತಾಲಿಬಾನ್ ರೀತಿ ಹಿಂಸೆ: ಅಲ್ಲೇ ಇದ್ದಿದ್ರೆ ನಮ್ಮ ಕಥೆ ಹರೋಹರ
ಬಾಂಗ್ಲಾ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿರುವ ಪರಿಣಾಮ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ 25 ವಿದ್ಯಾರ್ಥಿಗಳು ಸುರಕ್ಷಿತವಾಗಿ ಬೆಳಗಾವಿಗೆ ಬಂದಿದ್ದಾರೆ. ಅವರಲ್ಲೊಬ್ಬ ವಿದ್ಯಾರ್ಥಿ ನೇಹಲ್ ಸವಣೂರು ಬಾಂಗ್ಲಾ ದೇಶದಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದಾರೆ.
ಬೆಳಗಾವಿ: ಬಾಂಗ್ಲಾ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿರುವ ಪರಿಣಾಮ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ 25 ವಿದ್ಯಾರ್ಥಿಗಳು ಸುರಕ್ಷಿತವಾಗಿ ಬೆಳಗಾವಿಗೆ ಬಂದಿದ್ದಾರೆ. ಎಂಬಿಬಿಎಸ್ ಅಧ್ಯಯನಕ್ಕೆಂದು ಬೆಳಗಾವಿಯಿಂದ ಬಾಂಗ್ಲಾದೇಶಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಸಂಸದ ಜಗದೀಶ ಶೆಟ್ಟರ್ ಸಹಾಯದಿಂದ ಸುರಕ್ಷಿತವಾಗಿ ತಾಯ್ತಾಡಿಗೆ ಮರಳಿದ್ದಾರೆ.
ಅಲ್ಲಿಂದ ಸುರಕ್ಷಿತವಾಗಿ ಬಂದು ಬಾಂಗ್ಲಾ ದೇಶದಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಎಂಬಿಬಿಎಸ್ ವಿದ್ಯಾರ್ಥಿ ನೇಹಲ್ ಸವಣೂರು, ಅಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ. ಈ ವೇಳೆ ನಾವು ಅಲ್ಲಿಯೇ ಇದ್ದಿದ್ದರೆ ರೂಂನಲ್ಲಿ ಕೂಡಿಹಾಕಿ ಹಿಂಸೆ ನೀಡುತ್ತಿದ್ದರು. ಸಾಕಷ್ಟು ನೋವು ಅನುಭವಿಸಬೇಕಾಗುತ್ತಿತ್ತು, ಅಲ್ಲಿ ಎಲ್ಲ ಕಡೆಯೂ ಕರ್ಫ್ಯೂ ವಿಧಿಸಲಾಗಿದೆ. ಒಪ್ಪತ್ತಿನ ಊಟಕ್ಕೂ ಪರದಾಡುವ ದುಃಸ್ಥಿತಿ ಎದುರಾಗಿತ್ತು, ಎರಡೇ ನಿಮಿಷದಲ್ಲಿ ತಿನ್ನಲು ಏನಾದರೂ ತಂದು ರೂಂಗೆ ಸೇರಿಕೊಳ್ಳುತ್ತಿದ್ದೆವು. ಮಹಿಳಾ ವಿದ್ಯಾರ್ಥಿನಿಲಯದ ಬಳಿ ಬಹಳಷ್ಟು ಸಮಸ್ಯೆ ಇದೆ ಎಂದರು.
ಹಸೀನಾ ಆಘಾತಗೊಂಡಿದ್ದಾರೆ, ಚೇತರಿಸಿಕೊಂಡು ಮುಂದಿನ ಕ್ರಮ ಅವರೇ ನಿರ್ಧರಿಸಲಿ: ಜೈಶಂಕರ್
ಗಲಭೆಕೋರರು ಹಿಂದೂಗಳನ್ನೇ ಗುರಿಯಾಗಿಸಿಕೊಳ್ಳಲು ಶುರು ಮಾಡಿದರು. ನೆಟ್ವರ್ಕ್ ಸಹ ಇಲ್ಲವಾದ್ದರಿಂದ ಪೋಷಕರ ಜೊತೆಗೆ ಮಾತನಾಡಲೂ ಆಗುತ್ತಿರಲಿಲ್ಲ. ಅಲ್ಲಿನ ಪರಿಸ್ಥಿತಿ ಕಂಡು ಭಯಭೀತನಾಗಿದ್ದೆ. ಈಗಿನ ಪರಿಸ್ಥಿತಿ ಇನ್ನೂ ಭಯಂಕರವಾಗಿದೆ. ಹೇಗೋ ಬಚಾವ್ ಆಗಿ ಅಲ್ಲಿಂದ ನಮ್ಮ ದೇಶಕ್ಕೆ ಬಂದಿದ್ದೇವೆ. ಜಿಲ್ಲಾಧಿಕಾರಿ ಮತ್ತು ಸಂಸದರ ಸಹಾಯದಿಂದ, ಪ್ರಧಾನಿ ಕಚೇರಿ ನೆರವು ನೀಡಿದ್ದರಿಂದ ಸುರಕ್ಷಿತವಾಗಿ ನಾವೆಲ್ಲರೂ ಬರಲು ಅನುಕೂಲವಾಯಿತು ಎಂದು ತಿಳಿಸಿದರು.
ಬಾಂಗ್ಲಾದಲ್ಲಿ ತಾಲಿಬಾನ್ ರೀತಿ ಹಿಂಸೆ
ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲ್ಲೇ ಸೋಮವಾರ ಬಾಂಗ್ಲಾದೇಶದಲ್ಲಿ ದೇಶವ್ಯಾಪಿ ಭಾರೀ ಹಿಂಸಾಚಾರ ನಡೆದಿತ್ತು. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಸಂಸದರು. ನಾಯಕರು, ಕಾರ್ಯಕರ್ತರನ್ನು ಗುರಿಯಾಗಿಸಿ ಪ್ರತಿಪಕ್ಷಗಳ ಕಾರ್ಯಕರ್ತರು, ಮತೀಯವಾದಿಗಳು ಭಾರೀ ಹಿಂಸಾಚಾರ ನಡೆಸಿದ್ದು, ಒಂದೇ ದಿನ 110ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಹಿಂಸಾಚಾರದ ವೇಳೆ ಅವಾಮಿ ಲೀಗ್ ಪಕ್ಷದ ನಾಯಕರ ಹತ್ಯೆಗೈದು ಅವರನ್ನು ಸೇತುವೆಯ ಅಕ್ಕಪಕ್ಕ ತಲೆಕೆಳಗಾಗಿ ನೇತು ಹಾಕಿರುವ ಭೀಕರ ಘಟನೆ ನಡೆದಿದೆ. ಇನ್ನೊಂದು ಘಟನೆಯಲ್ಲಿ ಬಾಂಗ್ಲಾದ ಸಂಸದ ಎನ್ನಲಾದ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಸುಡಲಾಗಿದೆ ಎನ್ನಲಾದ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆಯಾದರೂ ಅದು ಖಚಿತಪಟ್ಟಿಲ್ಲ.ಇದು ಕೆಲ ವರ್ಷಗಳ ಹಿಂದೆ ಆಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡ ಬಳಿಕ ತಾಲಿಬಾನಿ ಉಗ್ರರು ನಡೆಸಿದ ವಿಕೃತಿಯನ್ನು ನೆನಪಿಸಿದೆ.
ರಫೇಲ್ ರಕ್ಷಣೆಯಲ್ಲಿ ಭಾರತಕ್ಕೆ ಬಂದಿದ್ದ ಶೇಕ್ ಹಸೀನಾ: ರಾಜೀನಾಮೆ ಬಳಿಕ ಬಾಂಗ್ಲಾದಲ್ಲಿ ಹಿಂಸೆಗೆ 110 ಬಲಿ
ಅವಾಮಿ ಲೀಗ್ ಗುರಿ:
ಉದ್ಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಮೀಸಲು ನೀಡುವ ನೀತಿಯ ಪರವಾಗಿದ್ದ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಿ ಗೊಳಿಸುವಲ್ಲಿ ಯಶಸ್ವಿಯಾದ ದಂಗೆಕೋರರು ಇದೀಗ ಅವರ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಅವಾಮಿ ಲೀಗ್ ಪಕ್ಷದ ಸಂಸದ, ಮಾಜಿ ಕ್ರಿಕೆಟಿಗೆ ಮುತ್ರಫೆ ಮೊರ್ತಜಾ ಅವರ ಮನೆಗೂ ಬೆಂಕಿ ಹಚ್ಚಲಾಗಿದೆ. ಅವಾಮಿ ಲೀಗ್ ಪಕ್ಷದ ನಾಯಕ ಶಾಹಿನ್‌ಗೆ ಸೇರಿದ ಜೆಸ್ಟರ್‌ನ ಹೋಟೆಲ್ ಒಂದಕ್ಕೆ ದುಷ್ಕರ್ಮಿಗಳು ಸೋಮವಾರ ಬೆಂಕಿ ಹಚ್ಚಿದ್ದು ಕಟ್ಟಡವೊಂದರಲ್ಲೇ 24 ಜನರು ಸುಟ್ಟುಕರಕಲಾಗಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದೇಶದಲ್ಲಿ ಇದೀಗ ಯಾವುದೇ ಸರ್ಕಾರ ಇಲ್ಲದೇ ಇರುವ ಕಾರಣ ಮತೀಯವಾದಿಗಳು, ದೇಶದ್ರೋಹಿ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ಹಿಂಸಾಚಾರ, ಲೂಟಿ, ಅಪಹರಣ, ಅತ್ಯಾಚಾರದಂಥ ಹೇಯ ಕೃತ್ಯಗಳಲ್ಲಿ ತೊಡಗಿವೆ.