ಗ್ಯಾಸ್, ತೈಲ ದರ ಏರಿಕೆಗೆ ತಾಲೀಬಾನ್ ಬಿಕ್ಕಟ್ಟು ಕಾರಣವೆಂದ ಬೆಲ್ಲದ್!
* ತೈಲ ಮತ್ತು ಅನಿಲ ದರ ಏರಿಕೆಗೆ ಕಾರಣ ಹೇಳಿದ ಅರವಿಂದ್ ಬೆಲ್ಲದ್
* ಅಫ್ಘಾನಿಸ್ತಾನ ಮತ್ತು ತಾಲೀಬಾನ್ ಸಮಸ್ಯೆಯೇ ಮೂಲ ಕಾರಣ
* ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾದ ಹೇಳಿಕೆ
* ಭಾರತ ಅಫ್ಘಾನಿಸ್ತಾನದಿಂದ ತೈಲ ತರಿಸಿಕೊಳ್ಳುವುದಿಲ್ಲ
ಧಾರವಾಡ(ಸೆ. 05) ಎಲ್ಲ ಕಡೆ ಬೆಲೆ ಏರಿಕೆಯ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ಸಾಮಾನ್ಯ ನಾಗರಿಕರು ಸಂಕಷ್ಟದ ಸ್ಥಿತಿ ತಲುಪಿದ್ದಾರೆ. ಈ ನಡುವೆ ಅನಿಲ ಮತ್ತು ತೈಲ ದರ ಏರಿಕೆಗೆ ಕಾರಣ ಏನು ಎಂಬುದನ್ನು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ!
ಅಫ್ಘಾನಿಸ್ತಾನ ಮತ್ತು ತಾಲೀಬಾನ್ ಸಮಸ್ಯೆಯಿಂದ ಅನಿಲ ದರ ಏರಿಕೆಯಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ!
ಧಾರವಾಡದಲ್ಲಿ ಮಾತನಾಡಿ, ತಾಲಿಬಾನ್ ಸಮಸ್ಯೆಯಿಂದಾಗಿ ಬೆಲೆ ಏರಿಕೆಯಾಗಿವೆ. ಅಲ್ಲದೇ ಕಚ್ಚಾ ತೈಲ ಬರುತ್ತಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಎಂದಿರುವುದು ಚರ್ಚೆಗೆ ಕಾರಣವಾಗಿದೆ.
ದರ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ ಎಂದ ಕರ್ನಾಟಕದ ಸಚಿವ
ವಿಶ್ವದ ಎಲ್ಲ ಕಡೆ ಸಮಸ್ಯೆ ಆಗಿದೆ. ಪೆಟ್ರೋಲ್, ಡಿಸೇಲ್ ಪೂರೈಕೆ ಸಮಸ್ಯೆ ಆಗಿದೆ. ಇದೆ ಕಾರಣಕ್ಕೆ ದರ ಏರಿಕೆ ಕಾಣುತ್ತಿದೆ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಭಾರತ ವಿಶ್ವದಲ್ಲಿಯೇ ತೈಲ ಆಮದು ಮಾಡಿಕೊಳ್ಳುವ ಮೂರನೇ ಅತಿದೊಡ್ಡ ರಾಷ್ಟ್ರ. ಸೌದಿ ಅರೇಬಿಯಾ, ಯುಎಸ್‌ಎ, ಯುಎಇ, ನೈಜೀರಿಯಾ ಮತ್ತು ಕೆನಡಾದಿಂದ ಆಮದು ಮಾಡಿಕೊಳ್ಳುತ್ತದೆ. ಅಫ್ಘಾನಿಸ್ತಾನದಲ್ಲಿ ಅಂತ ದೊಡ್ಡ ತೈಲ ನಿಕ್ಷೇಪವೂ ಇಲ್ಲ ಅಲ್ಲದೇ ಭಾರತ ಅಲ್ಲಿಂದ ಆಮದು ಮಾಡಿಕೊಳ್ಳುವುದು ಇಲ್ಲ.
ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಪತ್ರಕರ್ತರು ತಾಲೀಬಾನ್ ಗೆ ತೆರಳಬೇಕು ಎಂದಿದ್ದರು. ಏಕೆಂದರೆ ಅಲ್ಲಿ ಪೆಟ್ರೋಲ್ 50 ರೂ. ಗೆ ಲಭ್ಯವಿದೆ ಎಂಬ ಉದ್ಧಟತನದ ಹೇಳಿಕೆ ನೀಡಿದ್ದರು.
ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಸಿಎಂ ರೇಸ್ ನಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹೆಸರು ಕೇಳಿ ಬಂದಿತ್ತು. ಬೆಲ್ಲದ್ ದೆಹಲಿ ಪ್ರವಾಸವನ್ನು ಮಾಡಿದ್ದರು.