ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ "ಮುಸ್ಲಿಂ ಆಯುಕ್ತ" ವ್ಯಾಖ್ಯೆಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಶಿ ತಿರುಗೇಟು ನೀಡಿದ್ದಾರೆ. ವ್ಯಕ್ತಿಯ ಕೊಡುಗೆಗಳೇ ಮುಖ್ಯವೆಂದು, ಧಾರ್ಮಿಕ ಗುರುತುಗಳಿಂದ ವ್ಯಕ್ತಿಯನ್ನು ವ್ಯಾಖ್ಯಾನಿಸಬಾರದೆಂದು ಹೇಳಿದ್ದಾರೆ. ದುಬೆ, ಖುರೇಶಿ ಅವಧಿಯಲ್ಲಿ ಬಾಂಗ್ಲಾದೇಶಿಗಳಿಗೆ ವೋಟರ್ ಐಡಿ ನೀಡಲಾಗಿದೆ ಎಂದು ಆರೋಪಿಸಿದ್ದರು. ಖುರೇಶಿ ವಕ್ಫ್ ಕಾಯ್ದೆ ಕುರಿತು ಸರ್ಕಾರ ವಿರೋಧಿ ಹೇಳಿಕೆ ನೀಡಿದ್ದಕ್ಕೆ ದುಬೆ ಪ್ರತಿಕ್ರಿಯಿಸಿದ್ದರು.

ನವದೆಹಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ "ಮುಸ್ಲಿಂ ಆಯುಕ್ತ" ವಾಗ್ದಾಳಿಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಶಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಅವನ ಕೊಡುಗೆಗಳಿಂದ ವ್ಯಾಖ್ಯಾನಿಸುವ ಭಾರತದ ಕಲ್ಪನೆಯಲ್ಲಿ ನಾನು ನಂಬಿಕೆ ಇಡುತ್ತೇನೆ. ಕೆಲವರಿಗೆ, ಧಾರ್ಮಿಕ ಗುರುತುಗಳು ತಮ್ಮ ದ್ವೇಷಪೂರಿತ ರಾಜಕೀಯವನ್ನು ಮುನ್ನಡೆಸಲು ಪ್ರಮುಖ ಅಂಶವಾಗಿದೆ. ಭಾರತವು ತನ್ನ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳಿಗಾಗಿ ಹೋರಾಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ಟೀಕೆ: ಬಿಜೆಪಿ ಸಂಸದರ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ನಾನು ಚುನಾವಣಾ ಆಯುಕ್ತರ ಸಾಂವಿಧಾನಿಕ ಹುದ್ದೆಯಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಿದ್ದೇನೆ ಮತ್ತು ಐಎಎಸ್‌ನಲ್ಲಿ ದೀರ್ಘ ಮತ್ತು ತೃಪ್ತಿಕರ ವೃತ್ತಿಜೀವನವನ್ನು ಹೊಂದಿದ್ದೇನೆ. ಒಬ್ಬ ವ್ಯಕ್ತಿಯನ್ನು ಅವರ ಪ್ರತಿಭೆ ಮತ್ತು ಕೊಡುಗೆಗಳಿಂದ ವ್ಯಾಖ್ಯಾನಿಸಲಾಗುತ್ತದೆಯೇ ಹೊರತು ಅವರ ಧಾರ್ಮಿಕ ಗುರುತುಗಳಿಂದಲ್ಲ ಎಂಬ ಭಾರತದ ಕಲ್ಪನೆಯನ್ನು ನಾನು ನಂಬುತ್ತೇನೆ ಎಂದಿದ್ದಾರೆ. ಖುರೇಶಿ ಜುಲೈ 2010 ರಿಂದ ಜೂನ್ 2012 ರವರೆಗೆ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು.

'ಕೋರ್ಟೇ ಕಾಯ್ದೆ ಮಾಡೋದಾದ್ರೆ ಸಂಸತ್ತೇಕೆ ಮುಚ್ಚಿಬಿಡಿ' ಸುಪ್ರೀಂ ನಡೆಗೆ ಮತ್ತೊಬ್ಬ ಸಂಸದ ಕಿಡಿ

ನಿಶಿಕಾಂತ್‌ ದುಬೆ ಹೇಳಿದ್ದೇನು?
ಸುಪ್ರೀಂ ಕೋರ್ಟ್‌ ತೀರ್ಪುಗಳ ಬಗ್ಗೆ ಕಿಡಿಕಾರಿ ಸುದ್ದಿಯಲ್ಲಿರುವ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಶಿ ವಿರುದ್ಧ ವಾಗ್ದಾಳಿ ನಡೆಸಿ ಖುರೇಶಿ ಅ‍ವರು ಎಲೆಕ್ಷನ್ ಕಮಿಷನರ್‌ ಆಗಿರಲಿಲ್ಲ, ಮುಸ್ಲಿಂ ಕಮಿಷನರ್‌ ಆಗಿದ್ದರು’ ಎಂದು ಆರೋಪಿಸಿದ್ದರು. ವು ಪ್ರತಿನಿಧಿಸುವ ಗೊಡ್ಡಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಾರ್ಖಂಡ್‌ನ ಸಂಥಾಲ್‌ ಪರಗಣದಲ್ಲಿ ಬಾಂಗ್ಲಾದೇಶಿಯರಿಗೆ ಅತಿ ಹೆಚ್ಚು ವೋಟರ್‌ ಐಡಿ ನೀಡಿದ್ದೇ ಖುರೇಶಿ ಕಾಲದಲ್ಲಿ ಎಂದು ದುಬೆ ಆರೋಪಿಸಿದ್ದರು.

ಖುರೇಶಿ ವಿರುದ್ಧ ಯಾಕೆ ಕಿಡಿ?: 
ವಿವಾದಿತ ವಕ್ಫ್‌ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರ್ಕಾರ ಮುಸ್ಲಿಮರ ಜಾಗ ಅತಿಕ್ರಮಿಸಲು ಉದ್ದೇಶಿಸಿದೆ. ಕೇಂದ್ರ ಸರ್ಕಾರದ ಈ ದುಷ್ಟಯೋಜನೆಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡುವ ವಿಶ್ವಾಸವಿದೆ ಎಂದು ಖುರೇಶಿ ಹೇಳಿದ್ದರು.

ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಶಿಕಾಂತ್‌ ದುಬೆ ತೀವ್ರ ಕಿಡಿಕಾರಿದ್ದು, ‘ನೀವು ಚುನಾವಣಾ ಆಯುಕ್ತರಲ್ಲ, ನೀವು ಮುಸ್ಲಿಂ ಕಮಿಷನರ್‌ ಆಗಿದ್ದೀರಿ. ನಿಮ್ಮ ಕಾಲಾವಧಿಯಲ್ಲಿ ಜಾರ್ಖಂಡ್‌ನ ಸಂಥಾಲ್‌ ಪರಗಣದಲ್ಲಿ ಅತಿಹೆಚ್ಚು ಬಾಂಗ್ಲಾದೇಶಿ ನುಸುಳುಕೋರರಿಗೆ ವೋಟರ್‌ ಕಾರ್ಡ್‌ ನೀಡಲಾಗಿತ್ತು’ ಎಂದು ಆರೋಪಿಸಿದ್ದರು.

‘ಇಸ್ಲಾಂ ಭಾರತಕ್ಕೆ ಕಾಲಿಟ್ಟದ್ದು ಕ್ರಿಸ್ತಶಕ 712ರಲ್ಲಿ. ಅದಕ್ಕೂ ಮೊದಲೇ ಈ ಭೂಮಿ ಹಿಂದೂಗಳಿಗೆ ಅಥವಾ ಗುಡ್ಡಗಾಡು ಜನರು, ಜೈನರು, ಬೌದ್ಧರಿಗೆ ಸೇರಿದ್ದಾಗಿತ್ತು. ನಮ್ಮ ಗ್ರಾಮ ವಿಕ್ರಮಶಿಲವನ್ನು ಬಕ್ತಿಯಾರ್‌ ಖಿಲ್ಜಿ 1189ರಲ್ಲಿ ಸುಟ್ಟುಹಾಕಿದ್ದ. ಅತಿಶ ದೀಪಾಂಕರ್‌ ರೂಪದಲ್ಲಿ ವಿಶ್ವಕ್ಕೆ ಮೊದಲ ಕುಲಪತಿ ನೀಡಿದ ಕೀರ್ತಿ ವಿಕ್ರಮಶಿಲಕ್ಕಿದೆ. ನೀವು ದೇಶವನ್ನು ಒಗ್ಗೂಡಿಸಿ, ಇತಿಹಾಸ ಓದಿರಿ. ವಿಭಜನೆಯಿಂದ ಪಾಕಿಸ್ತಾನದ ಸೃಷ್ಟಿಯಾಯಿತು, ಇನ್ನು ಮುಂದೆ ಯಾವುದೇ ವಿಭಜನೆ ಆಗುವುದಿಲ್ಲ’ ಎಂದಿದ್ದರು.