Asianet Suvarna News Asianet Suvarna News

ಸ್ಕ್ಯಾನಿಯಾ ಬಸ್‌ ಭಾರೀ ಹಗರಣ ಸ್ಫೋಟ : ಸಚಿವರೊಬ್ಬರಿ ಭಾರಿ ಲಂಚದ ಹಣ

ಸ್ವೀಡನ್‌ ಮೂಲದ ಬಸ್‌ ಹಾಗೂ ಟ್ರಕ್‌ ತಯಾರಿಕಾ ಕಂಪನಿ ಸ್ಕ್ಯಾನಿಯಾ, ತನ್ನ ಬಸ್‌ಗಳನ್ನು ಮಾರಾಟ ಮಾಡುವ ಸಲುವಾಗಿ ಭಾರತದ 7 ರಾಜ್ಯಗಳಲ್ಲಿ ಲಂಚ ನೀಡಿತ್ತು. ಅಲ್ಲದೇ ಸಚಿವರೊಬ್ಬರಿಗೂ ಭಾರೀ ಹಣ ನೀಡಿತ್ತು ಎನ್ನುವ ವಿಚಾರವೀಗ ಬೆಳಕಿಗೆ ಬಂದಿದೆ. 

Sweden Media Reveal About Scania bus Scandal in India snr
Author
Bengaluru, First Published Mar 12, 2021, 7:57 AM IST

ಬರ್ಲಿನ್‌/ ಬೆಂಗಳೂರು (ಮಾ.12):  ಸ್ವೀಡನ್‌ ಮೂಲದ ಬಸ್‌ ಹಾಗೂ ಟ್ರಕ್‌ ತಯಾರಿಕಾ ಕಂಪನಿ ಸ್ಕ್ಯಾನಿಯಾ, ತನ್ನ ಬಸ್‌ಗಳನ್ನು ಮಾರಾಟ ಮಾಡುವ ಸಲುವಾಗಿ ಭಾರತದ 7 ರಾಜ್ಯಗಳಲ್ಲಿ ಲಂಚ ನೀಡಿತ್ತು. ಭಾರತದ ಸಚಿವರೊಬ್ಬರಿಗೂ ಕಿಕ್‌ಬ್ಯಾಕ್‌ ಸಂದಾಯ ಮಾಡಿತ್ತು ಎಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಕುತೂಹಲಕರ ಸಂಗತಿಯೆಂದರೆ ಕರ್ನಾಟಕ ಸರ್ಕಾರ ಕೂಡ ಈ ಕಂಪನಿಯಿಂದ 75 ಬಸ್‌ಗಳನ್ನು ಖರೀದಿಸಿದ್ದು, ಅವು ಈಗಲೂ ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ. 2016ರಲ್ಲಿ ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ ತಲಾ 25 ಬಸ್‌ಗಳಂತೆ 2 ಬಾರಿ ಸ್ಕ್ಯಾನಿಯಾ  ಬಸ್‌ಗಳನ್ನು ಖರೀದಿಸಲಾಗಿದೆ. ಬಳಿಕ 2018ರಲ್ಲಿ ಮತ್ತೆ 25 ಬಸ್‌ ಖರೀದಿಸಲಾಗಿದೆ.

ಕರ್ನಾಟಕದ ಕೋಲಾರದ ನರಸಾಪುರದಲ್ಲಿ ಭಾರತದ ಏಕೈಕ ಘಟಕವನ್ನು ಹೊಂದಿರುವ ಸ್ಕ್ಯಾನಿಯಾ ಕಂಪನಿ ನಡೆಸಿದ್ದ ಅಕ್ರಮವನ್ನು 2017ರಿಂದಲೇ ತನಿಖೆ ನಡೆಸಿ ಜರ್ಮನಿ, ಸ್ವೀಡನ್‌ ಹಾಗೂ ಭಾರತದ ಮೂರು ಮಾಧ್ಯಮ ಸಂಸ್ಥೆಗಳು ಬಯಲಿಗೆಳೆದಿವೆ. ಆದರೆ ಈ ಕಂಪನಿಯಿಂದ ಲಂಚ ಪಡೆದ ಭಾರತೀಯ ಸಚಿವ ಯಾರು ಮತ್ತು 7 ರಾಜ್ಯ ಸರ್ಕಾರಗಳು ಯಾವುವು ಎಂಬುದನ್ನು ಸಂಸ್ಥೆಗಳು ತಿಳಿಸಿಲ್ಲ.

ಮಾ.16ರಿಂದ ಸಾರಿಗೆ ಬಸ್‌ಗಳು ರಸ್ತೆಗಿಳಿಯೋದು ಡೌಟ್..? ..

2007ರಿಂದ ಸ್ಕ್ಯಾನಿಯಾ ಕಂಪನಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ವೋಕ್ಸ್‌ವ್ಯಾಗನ್‌ ಕಂಪನಿಯ ವಾಣಿಜ್ಯ ಉದ್ದೇಶದ ವಾಹನ ತಯಾರಿಕಾ ಸಂಸ್ಥೆಯಾದ ಟ್ರೇಟನ್‌ ಎಸ್‌ಇಗೆ ಸೇರಿದ ಸ್ಕ್ಯಾನಿಯಾ 2011ರಲ್ಲಿ ಕೋಲಾರದಲ್ಲಿ ಉತ್ಪಾದನಾ ಘಟಕ ತೆರೆದಿತ್ತು. 2013ರಿಂದ 2016ರವರೆಗೆ ಭಾರತದಲ್ಲಿ ಬಸ್‌ಗಳ ಮಾರಾಟ ಗುತ್ತಿಗೆಗಾಗಿ 7 ರಾಜ್ಯಗಳಿಗೆ ಲಂಚ ನೀಡಿತ್ತು ಎಂದು ಸ್ವೀಡನ್‌ನ ಸುದ್ದಿ ವಾಹಿನಿ ಎಸ್‌ವಿಟಿ, ಜರ್ಮನ್‌ ಮಾಧ್ಯಮ ಸಂಸ್ಥೆ ಝಡ್‌ಡಿಎಫ್‌ ಹಾಗೂ ಭಾರತದ ಕಾನ್‌ಫ್ಲುಯೆನ್ಸ್‌ ಮೀಡಿಯಾಗಳು ವರದಿ ಮಾಡಿವೆ.

ಈ ವರದಿಗಳನ್ನು ಸ್ಕಾ್ಯನಿಯಾ ಸಿಇಒ ಹೆನ್ರಿಕ್‌ ಹೆನ್ರಿಕ್‌ಸನ್‌ ಕೂಡ ಒಪ್ಪಿಕೊಂಡಿದ್ದು, ‘ಈ ಅವ್ಯವಹಾರದಲ್ಲಿ ತೊಡಗಿದ್ದ ಎಲ್ಲರೂ ಈಗಾಗಲೇ ಕಂಪನಿ ತೊರೆದಿದ್ದಾರೆ. ಉದ್ಯಮ ಪಾಲುದಾರರ ಜತೆಗಿನ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ. ನಾವು ಅನನುಭವಿಗಳಾಗಿದ್ದರೂ ಭಾರತದಲ್ಲಿ ಲಂಚ ನೀಡಲು ನಮ್ಮ ಕಂಪನಿಯ ಕೆಲವರು ಮುಂದಾಗಿದ್ದರು. ಭಾರತದಲ್ಲಿನ ಅಪಾಯಗಳನ್ನು ಕಡೆಗಣಿಸಿ ಈ ಕೆಲಸ ಮಾಡಿದ್ದರು’ ಎಂದು ಹೇಳಿದ್ದಾರೆ.

ಅಕ್ರಮವಾಗಿ ಟ್ರಕ್‌ ಮಾರಾಟ:  ತಪ್ಪು ಚಾಸಿ ನಂಬರ್‌ ಹಾಗೂ ಲೈಸೆನ್ಸ್‌ ಪ್ಲೇಟ್‌ಗಳನ್ನು ಬಳಸಿ ಭಾರತೀಯ ಗಣಿ ಕಂಪನಿಯೊಂದಕ್ಕೆ ಸ್ಕಾ್ಯನಿಯಾ 85 ಕೋಟಿ ರು.ಗೆ ಟ್ರಕ್‌ಗಳನ್ನು ಮಾರಾಟ ಮಾಡಿದೆ ಎಂದೂ ತನಿಖಾ ವರದಿಗಳು ತಿಳಿಸಿವೆ.

ಪ್ರೀಮಿಯಂ ಬಸ್‌ಗಳಿಗೆ ಬೇಡಿಕೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಸದ್ಯ ಬಸ್‌ ಬಾಡಿ ತಯಾರಿಕಾ ಘಟಕವನ್ನು ಸ್ಕಾ್ಯನಿಯಾ ಸ್ಥಗಿತಗೊಳಿಸಿದೆ. ಬಸ್‌ ಹಾಗೂ ಟ್ರಕ್‌ಗಳ ಚಾಸಿಯನ್ನು ಮಾತ್ರ ತಯಾರು ಮಾಡುತ್ತಿದೆ.

ಬೋಫೋ​ರ್‍ಸ್ ಹಗರಣದ ನೆನಪು:  ಸ್ವೀಡನ್‌ನ ಬೋಫೋ​ರ್‍ಸ್ ಕಂಪನಿ ತನ್ನ ಫಿರಂಗಿಗಳನ್ನು ಮಾರಾಟ ಮಾಡಲು ಭಾರತದ ರಾಜಕೀಯ ನಾಯಕರಿಗೆ ಭಾರೀ ಪ್ರಮಾಣದ ಲಂಚ ನೀಡಿದೆ ಎಂದು 1987ರ ಏ.16ರಂದು ಸ್ವೀಡಿಷ್‌ ರೇಡಿಯೋ ಚಾನಲ್‌ ವರದಿ ಮಾಡಿತ್ತು. ಆ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರ ವಿರುದ್ಧ ಕೇಳಿಬಂದಿತ್ತು.

ಕರ್ನಾಟಕದಲ್ಲಿ 75 ಬಸ್‌: ಬಸ್‌ ಮಾರಾಟಕ್ಕೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಸ್ವೀಡನ್‌ ಮೂಲದ ಸ್ಕಾ್ಯನಿಯಾ ಕಂಪನಿಯ 75 ಮಲ್ಟಿಆ್ಯಕ್ಸೆಲ್‌ ಬಸ್‌ಗಳನ್ನು ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಈಗಲೂ ಕಾರ್ಯಾಚರಣೆ ಮಾಡುತ್ತಿದೆ.

ಸ್ಕ್ಯಾನಿಯಾ ಬಸ್‌ ಖರೀದಿಗೂ ಮುನ್ನ 2 ಬಸ್‌ಗಳನ್ನು ಪ್ರಾಯೋಗಿಕ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ನಿಯೋಜಿಸಿತ್ತು. 2014ರಲ್ಲಿ ಈ ಎರಡು ಬಸ್‌ಗಳು ಬೆಂಗಳೂರು-ತಿರುಪತಿ ಮತ್ತು ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಸಂಚಾರ ನಡೆಸಿದ್ದವು. ಈ ಸಮಯದಲ್ಲಿ ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾಗಿದ್ದರು. ಬಳಿಕ 2016ರಲ್ಲಿ ಟೆಂಡರ್‌ ಕರೆದು ಮೊದಲ ಹಂತದಲ್ಲಿ 25 ಬಸ್‌ ಹಾಗೂ ಎರಡನೇ ಹಂತದಲ್ಲಿ 25 ಖರೀದಿ ಮಾಡಲಾಗಿತ್ತು. ಇದಾದ ಬಳಿಕ 2018ರ ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ಮತ್ತೆ 25 ಬಸ್‌ ಖರೀದಿಸಲಾಗಿತ್ತು.

ಈ ಬಸ್‌ 14.5 ಮೀಟರ್‌ ಉದ್ದ ಹಾಗೂ 51 ಆಸನ ಸಾಮರ್ಥ್ಯ ಹೊಂದಿವೆ. ಈ ಬಸ್‌ಗಳನ್ನು ರಾಜ್ಯ ಹಾಗೂ ಹೊರರಾಜ್ಯದ ದೂರದ ನಗರಗಳಿಗೆ ಕಾರ್ಯಾಚರಿಸಲಾಗುತ್ತಿದೆ. ಆರಂಭದಲ್ಲಿ ಪರಿಸರ ಸ್ನೇಹಿ ಬಯೋ ಡೀಸೆಲ್‌ನಲ್ಲಿ ಈ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಬಯೋ ಡೀಸೆಲ್‌ ಬಸ್‌ಗಳನ್ನು ಡೀಸೆಲ್‌ ಬಸ್‌ಗಳಾಗಿ ಪರಿವರ್ತಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

Follow Us:
Download App:
  • android
  • ios