Asianet Suvarna News Asianet Suvarna News

ನಿಮಗೆ ಯಾವ ವಿಷಯ ಮುಖ್ಯ?: ಚುನಾವಣೆಗೂ ಮುನ್ನ ಮೋದಿಯಿಂದಲೇ ಸಮೀಕ್ಷೆ!

* ಚುನಾವಣೆಯಲ್ಲಿ ಮತ ಚಲಾವಣೆ ವೇಳೆ ನಿಮಗೆ ಯಾವ ವಿಷಯ ಮುಖ್ಯ

* ಚುನಾವಣೆಗೂ ಮುನ್ನ ಮೋದಿಯಿಂದಲೇ ಸಮೀಕ್ಷೆ

* ಪಂಚ ರಾಜ್ಯ ಚುನಾವಣೆಗೂ ಮುನ್ನ ಮೊಬೈಲ್‌ ಮೂಲಕ ಮೋದಿ ಸಮೀಕ್ಷೆ

* 5 ರಾಜ್ಯಗಳ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲು ಈ ಕ್ರಮ

Survey on NaMo app to gauge public opinion on govt performance PM popularity in poll bound states pod
Author
Bangalore, First Published Aug 11, 2021, 8:51 AM IST
  • Facebook
  • Twitter
  • Whatsapp

ನವದೆಹಲಿ(ಆ.11): ಉತ್ತರಪ್ರದೇಶ, ಗೋವಾ, ಉತ್ತರಾಖಂಡ, ಪಂಜಾಬ್‌ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗೂ ಮುನ್ನ, ಮತದಾರರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಜನರಿಂದ ನೇರವಾಗಿ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ನಮೋ ಆ್ಯಪ್‌’ನಲ್ಲಿ ‘ಷೇರ್‌ ಯುವರ್‌ ಒಪೀನಿಯನ್‌’ (ನಿಮ್ಮ ಅಭಿಪ್ರಾಯ ತಿಳಿಸಿ) ಎಂಬ ಆನ್‌ಲೈನ್‌ ಸಮೀಕ್ಷೆಗೆ ಚಾಲನೆ ನೀಡಿದ್ದಾರೆ.

ಇದರಲ್ಲಿ ಮುಖ್ಯವಾಗಿ ಮತದಾರರಿಗೆ, ಚುನಾವಣೆ ವೇಳೆ ನಿಮಗೆ ಕೋವಿಡ್‌-19 ನಿರ್ವಹಣೆ, ರಾಮಮಂದಿರ ಅಥವಾ ಸಂವಿಧಾನದ 370ನೇ ವಿಧಿ ರದ್ದು ಈ ವಿಷಯಗಳ ಪೈಕಿ ಯಾವುದು ಮಹತ್ವದ್ದಾಗುತ್ತದೆ ಎಂದು ಪ್ರಶ್ನಿಸಲಾಗಿದೆ.

ಇನ್ನೊಂದು ಪ್ರಶ್ನೆಯಲ್ಲಿ, ನಿಮ್ಮ ಕ್ಷೇತ್ರದಲ್ಲಿ ವಿಪಕ್ಷಗಳು ಒಗ್ಗಟ್ಟಾದರೆ ಅದು ಪರಿಣಾಮ ಬೀರಲಿದೆಯೇ ಎಂದು ಪ್ರಶ್ನಿಸಲಾಗಿದೆ. ಬಿಜೆಪಿ ವಿರುದ್ಧ ದೊಡ್ಡ ಮಟ್ಟದಲ್ಲಿ ಮೈತ್ರಿಕೂಟ ಕಟ್ಟಲು ವಿಪಕ್ಷಗಳು ಯತ್ನ ನಡೆಸುತ್ತಿರುವ ಹೊತ್ತಿನಲ್ಲಿಯೇ ಇಂಥ ಪ್ರಶ್ನೆ ಕೇಳಿರುವುದು ಕುತೂಹಲ ಮೂಡಿಸಿದೆ.

ಇನ್ನೊಂದು ಪ್ರಶ್ನೆಯಲ್ಲಿ ಮತಚಲಾವಣೆ ವೇಳೆ ‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಅಥವಾ ರಾಜ್ಯದ ವಿಷಯಗಳು ಅಥವಾ ಸ್ಥಳೀಯ ಸಮಸ್ಯೆಗಳು’ ಪೈಕಿ ಯಾವುದು ಪ್ರಮುಖವಾಗುತ್ತವೆ ಎಂದು ಕೇಳಲಾಗಿದೆ. ಇನ್ನು ಕೆಲವು ಪ್ರಶ್ನೆಗಳನ್ನು ಗಮನಿಸಿದಾಗ ಅವು, ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಪರಿಣಾಮ ಬೀರುವ ಸುಳಿವನ್ನು ನೀಡಿವೆ.

ಆ್ಯಪ್‌ನಲ್ಲಿ ಜನರು ತಮ್ಮ ಕ್ಷೇತ್ರ ಹಾಗೂ ರಾಜ್ಯದ ಹೆಸರನ್ನು ನಮೂದಿಸುವುದು ಕಡ್ಡಾಯ.

13 ವಿಷಯಗಳ ಪಟ್ಟಿ:

ಇನ್ನು ಈ ಪೈಕಿ ಯಾವ ವಿಷಯಗಳು ನಿಮಗೆ ಅತ್ಯಂತ ಮಹತ್ವದ್ದು ಎಂದು 13 ವಿಷಯಗಳನ್ನು ಪಟ್ಟಿಮಾಡಲಾಗಿದೆ. ಅದರಲ್ಲಿ ಎಷ್ಟುಅಂಶಗಳನ್ನು ಬೇಕಾದರೂ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಹೀಗೆ ನೀಡಲಾದ ವಿಷಯಗಳ ಪಟ್ಟಿಯಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ, ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್‌ ಕಾನೂನು, ಸಂವಿಧಾನದ 370ನೇ ವಿಧಿ ರದ್ದು, ಶಿಕ್ಷಣ, ಕೋವಿಡ್‌ ಅನ್ನು ಸರ್ಕಾರ ನಿರ್ವಹಿಸಿದ ರೀತಿ, ಉದ್ಯೋಗ, ಸ್ವಚ್ಛತೆ, ವಿದ್ಯುತ್‌, ರಸ್ತೆ ಮತ್ತು ಮೂಲಸೌಕರ್ಯದ ವಿಷಯಗಳಿವೆ.

2 ಆಯ್ಕೆಗಳು:

ಪ್ರಶ್ನೆಗಳ ಇನ್ನೊಂದು ಗುಚ್ಛದಲ್ಲಿ ಸಮೀಕ್ಷೆಗೆ ಒಳಪಡುವವರಿಗೆ, ಒಪ್ಪುವ ಅಥವಾ ತಿರಸ್ಕರಿಸುವ 2 ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರುವುದು ಅಭಿವೃದ್ಧಿಗೆ ಒತ್ತು ನೀಡುತ್ತದೆಯೇ? ಕಳೆದ 4 ವರ್ಷದಲ್ಲಿ ರಾಜ್ಯ ಸರ್ಕಾರಗಳ ಕಾರ್ಯ ನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆಯೇ? ಮುಂದಿನ ದಿನಗಳಲ್ಲಿ ನಿಮ್ಮ ರಾಜ್ಯದ ಭವಿಷ್ಯ ಇನ್ನಷ್ಟುಚೆನ್ನಾಗಿರಲಿದೆ ಎಂಬ ಆಶಾಭಾವ ಇದೆಯೇ? ನಿಮ್ಮ ರಾಜ್ಯ ಸರ್ಕಾರದ ಒಟ್ಟಾರೆ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.

ಜೊತೆಗೆ ಮತ ಚಲಾವಣೆ ವೇಳೆ ಅಭ್ಯರ್ಥಿ ಬಗ್ಗೆ ಯಾವ ಅಂಶಗಳನ್ನು ಪ್ರಮುಖವಾಗಿ ಗಮನಿಸುತ್ತೀರಿ? ಆತ/ ಆಕೆಯ ಜಾತಿ, ಆತ/ ಆಕೆಯ ಧರ್ಮ, ಆತ/ ಆಕೆಯ ಅಭಿವೃದ್ಧಿ ಕೆಲಸಗಳ ಹಿನ್ನೆಲೆ.

ಇನ್ನೊಂದು ಪ್ರಶ್ನೆಗಳ ಗುಚ್ಛದಲ್ಲಿ ನಿಮ್ಮ ರಾಜ್ಯದಲ್ಲಿನ ಮೂವರು ಜನಪ್ರಿಯ ಬಿಜೆಪಿ ನಾಯಕರ ಹೆಸರನ್ನು ಸೂಚಿಸಿ? ನಿಮ್ಮ ಕ್ಷೇತ್ರದ ಶಾಸಕರು ಮಾಡಿರುವ ಕೆಲಸಗಳ ಬಗ್ಗೆ ನಿಮಗೆ ಅರಿವಿದೆಯೇ? ನಿಮಗೆ ಶಾಸಕರ ಸಂಪರ್ಕರ ಲಭ್ಯತೆ ಹೇಗಿದೆ? ನಿಮ್ಮ ಶಾಸಕರ ಕೆಲಸ ತೃಪ್ತಿ ತಂದಿದೆಯೇ? ನಿಮ್ಮ ಶಾಸಕರ ಮರು ಆಯ್ಕೆ ಬಯಸುತ್ತೀರಾ? ಎಂದು ಕೇಳಲಾಗಿದೆ.

ಇನ್ನೊಂದು ಪ್ರಶ್ನೆಯಲ್ಲಿ ರಸ್ತೆ, ವಿದ್ಯುತ್‌, ಕುಡಿಯುವ ನೀರು, ಆರೋಗ್ಯ ವ್ಯವಸ್ಥೆ, ಪಡಿತರ ಸಂಬಂಧಿ ವಿಷಯಗಳು, ಕಾನೂನು ಮತ್ತು ಸುವ್ಯವಸ್ಥೆ, ಸ್ವಚ್ಛತೆ, ಉದ್ಯೋಗ ಸೃಷ್ಟಿ, ಗ್ರಾಮೀಣ ವಿದ್ಯುದೀಕರಣ, ಆರ್ಥಿಕತೆ, ರೈತರ ಅಭ್ಯುದಯದ ವಿಷಯದಲ್ಲಿ ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ.

ಇನ್ನು ನಿಮ್ಮ ರಾಜ್ಯ ಸರ್ಕಾರದ ಯೋಜನೆಗಳ ಪೈಕಿ ನಿಮಗೆ ಹೆಚ್ಚು ನೆರವು ನೀಡಿದ್ದು ಯಾವುದು? ನೀವು ಬಿಜೆಪಿಗೆ ಎಂದಾದರೂ ದೇಣಿಗೆ ನೀಡಿದ್ದೀರಾ ಎಂಬ ಪ್ರಶ್ನೆಗಳನ್ನೂ ಕೇಳಲಾಗಿದೆ.

ಮೋದಿ ಕೇಳಿರುವ ಪ್ರಮುಖ ಪ್ರಶ್ನೆಗಳು

- ಕೋವಿಡ್‌ ನಿರ್ವಹಣೆ, ರಾಮಮಂದಿರ, ಸಂವಿಧಾನದ 370ನೇ ವಿಧಿ ರದ್ದು: ಇದರಲ್ಲಿ ಯಾವದು ಮಹತ್ವದ್ದು?

- ನಿಮ್ಮ ಕ್ಷೇತ್ರದಲ್ಲಿ ವಿಪಕ್ಷಗಳು ಒಗ್ಗಟ್ಟಾದರೆ ಅದು ಪರಿಣಾಮ ಬೀರಲಿದೆಯೇ?

- ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರುವುದು ಅಭಿವೃದ್ಧಿಗೆ ಒತ್ತು ನೀಡುತ್ತದೆಯೇ?

- 4 ವರ್ಷದಲ್ಲಿ ರಾಜ್ಯ ಸರ್ಕಾರಗಳ ಕಾರ್ಯ ನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆಯೇ?

- ಮುಂದಿನ ದಿನಗಳಲ್ಲಿ ನಿಮ್ಮ ರಾಜ್ಯದ ಭವಿಷ್ಯ ಇನ್ನಷ್ಟುಚೆನ್ನಾಗಿರಲಿದೆ ಎಂಬ ಆಶಾಭಾವ ಇದೆಯೇ?

- ಗುಚ್ಛದಲ್ಲಿ ನಿಮ್ಮ ರಾಜ್ಯದಲ್ಲಿನ ಮೂವರು ಜನಪ್ರಿಯ ಬಿಜೆಪಿ ನಾಯಕರ ಹೆಸರನ್ನು ಸೂಚಿಸಿ

Follow Us:
Download App:
  • android
  • ios