ಕಾಂಗ್ರೆಸ್ ಗೆದ್ದರೆ ಸಂಪತ್ತಿನ ಸಮಾನ ಹಂಚಿಕೆಗೆ ಸಮೀಕ್ಷೆ: ರಾಹುಲ್ ಗಾಂಧಿ ಭರವಸೆ
ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಕುರಿತು ಸಮೀಕ್ಷೆ ಮಾಡಲಾಗುವುದು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಹೈದರಾಬಾದ್ (ಏ.08): ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಕುರಿತು ಸಮೀಕ್ಷೆ ಮಾಡಲಾಗುವುದು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಇಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ರಾಹುಲ್ ಗಾಂಧಿ, ‘ಮೊದಲಿಗೆ ನಾವು ದೇಶವ್ಯಾಪಿ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ ಪ್ರಮಾಣ ತಿಳಿಯಲು ಜಾತಿ ಗಣತಿ ನಡೆಸಲಿದ್ದೇವೆ. ಅದಾದ ಬಳಿಕ ಸಂಪತ್ತಿನ ಹಂಚಿಕೆ ಅರಿಯಲು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸುತ್ತವೆ. ಎಲ್ಲಾ ವಲಯಗಳಲ್ಲೂ ಎಲ್ಲಾ ಸಮುದಾಯಕ್ಕೂ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳುತ್ತೇವೆ,
ಈ ಮೂಲಕ ಜನರಿಗೆ ಅವರ ಹಕ್ಕುಗಳನ್ನು ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು. ಇದೇ ವೇಳೆ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.90ರಷ್ಟು ಪಾಲು ಹೊಂದಿದೆ. ಆದರೆ ಶೇ.90ರಷ್ಟು ಪಾಲು ಹೊಂದಿರುವ ಜನರಿಗೆ ಅವರ ಪಾಲಿನ ಉದ್ಯೋಗದ ಹಕ್ಕು ಸಿಕ್ಕಿಲ್ಲ. ಎಲ್ಲೂ ಅವರು ಉದ್ಯೋಗದಲ್ಲಿರುವುದು ಕಂಡುಬರುವುದಿಲ್ಲ. ದೇಶದ ಆಡಳಿತವನ್ನು ನಡೆಸುವ 90 ಐಎಎಸ್ ಅಧಿಕಾರಿಗಳಿದ್ದಾರೆ. ಈ ಪೈಕಿ ಮೂವರು ಮಾತ್ರವೇ ಒಬಿಸಿ ಸಮುದಾಯಕ್ಕೆ ಸೇರಿದವರು, ಒಬ್ಬರು ಆದಿವಾಸಿ ಮತ್ತು ಮೂವರು ದಲಿತರ ಎಂದು ಅಂಕಿ ಅಂಶ ನೀಡಿದರು.
ಗೆದ್ದ ಬಳಿಕ ಪಿಎಂ ಆಯ್ಕೆ: ಲೋಕಸಭಾ ಚುನಾವಣೆಯಲ್ಲಿ ಗೆದ್ದನಂತರ ಪ್ರಧಾನಿ ಯಾರಾಗುತ್ತಾರೆ ಎಂದು ಇಂಡಿಯಾ ಮೈತ್ರಿಕೂಟ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಯನಾಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ತಿಳಿಸಿದರು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ಸದ್ಯಕ್ಕೆ ಹೇಳಲಾಗುವುದಿಲ್ಲ.
ಚುನಾವಣಾ ಬಾಂಡ್ ವಿಶ್ವದ ದೊಡ್ಡ ಹಗರಣ: ರಾಹುಲ್ ಗಾಂಧಿ ಆರೋಪ
ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಇಂಡಿಯಾ ಮೈತ್ರಿಕೂಟದೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಹೇಳುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಜಯ ಗಳಿಸಲಿದೆ. ಈ ಚುನಾವಣೆ ಪ್ರಮುಖವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿರುವ ಶಕ್ತಿ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಯತ್ನಿಸುತ್ತಿರುವ ಶಕ್ತಿ ನಡುವೆ ನಡೆಯುವ ಚುನಾವಣೆ ಎಂದರು.